ನಮ್ಮ ಸಿಂಧನೂರು, ಫೆ.24
ಕಳೆದ 15 ದಿನಗಳಿಂದ ಮಸ್ಕಿ ತಾಲೂಕಿನ ಗುಡದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಸಮಕಲ್ ಗ್ರಾಮಕ್ಕೆ ಕುಡಿವ ನೀರು ಪೂರೈಕೆ ಸ್ಥಗಿತಗೊಂಡಿದ್ದರಿಂದ ಆಕ್ರೋಶಗೊಂಡ ಗ್ರಾಮಸ್ಥರು ಪಂಚಾಯಿತಿ ಕಾರ್ಯಾಲಯಕ್ಕೆ ಇತ್ತೀಚೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಗ್ರಾಮದಲ್ಲಿ ಸರ್ಕಾರದ ಮೂರು ಬೋರ್‌ವೆಲ್, ಒಂದು ಬಾವಿ ಇದ್ದು, ಸ್ವಯಂಪ್ರೇರಿತವಾಗಿ ನಾಲ್ವರು ರೈತರು ತಮ್ಮ ಜಮೀನಿನಲ್ಲಿರುವ ಬೋರ್‌ವೆಲ್ ನೀರು ಕೊಡುವುದಾಗಿ ಮುಂದೆ ಬಂದಿದ್ದರೂ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ. ಕಳೆದ ಹತ್ತು ದಿನದಿಂದ ಗ್ರಾಮಸ್ಥರು ನಿರಂತರ ಮೌಖಿಕವಾಗಿ ಪಿಡಿಒಗೆ ಮನವಿ ಮಾಡುತ್ತಾ ಬಂದರೂ ಜನರೊಂದಿಗೆ ಅನುಚಿತವಾಗಿ ವರ್ತಿಸುತ್ತಿರುವ ಅವರು ಯಾವುದೇ ಕ್ರಮಕ್ಕೆ ಮುಂದಾಗದೇ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಪ್ರತಿಭಟನಾನಿರತ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ಗ್ರಾಮದಲ್ಲಿ ಅಗತ್ಯ ಜಲಮೂಲಗಳಿದ್ದರೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕೆರೆ ಖಾಲಿಯಾಗಿದೆ ನೀರು ಬಿಡಲು ಆಗುವುದಿಲ್ಲ ಎಂದು ಹೇಳುತ್ತಿದ್ದು, ಅಲ್ಲದೇ ಬೋರ್‌ವೆಲ್‌ಗೆ ಪೈಪ್‌ಲೈನ್ ಮಾಡುವುದು ಪಂಚಾಯಿತಿ ಕೆಲಸ ಅಲ್ಲ, ಜಿಲ್ಲಾ ಪಂಚಾಯಿತಿ ಅಧಿಕಾರಿಗಳು ಅರೆಬರೆ ಕೆಲಸ ಮಾಡಿ ಕೈಬಿಟ್ಟಿದ್ದಾರೆ. ನಾನು ಏನು ಮಾಡಲು ಆಗುವುದಿಲ್ಲ, ಜಿ.ಪಂ.ನವರು ಪೈಪ್‌ಲೈನ್ ಮಾಡಿದರೆ ಮಾತ್ರ ನೀರು ಪೂರೈಕೆ ಮಾಡಲಾಗುವುದು ಎಂದು ಜನರಿಗೆ ಉಡಾಫೆಯಿಂದ ವರ್ತಿಸುತ್ತಾರೆ. ಕಳೆದ 15 ದಿನಗಳಿಂದ ಜನ-ಜಾನುವಾರುಗಳು ಕುಡಿವ ನೀರಿಗಾಗಿ ಪರಿತಪಿಸುವಂತಾಗಿದ್ದು, ಎರಡ್ಮೂರು ದಿನದೊಳಗೆ ನೀರು ಪೂರೈಕೆ ಮಾಡದಿದ್ದರೆ ಪರಿಸ್ಥಿತಿ ಇನ್ನಷ್ಟು ವಿಕೋಪಕ್ಕೆ ಹೋಗಲಿದೆ ಎಂದು ಗ್ರಾಮಸ್ಥರು ದೂರಿದರು.
ಎರಡು ದಿನದೊಳಗೆ ನೀರು ಪೂರೈಸದಿದ್ದರೆ ಹೆದ್ದಾರಿಯಲ್ಲಿ ರಸ್ತಾರೋಖ: ಗ್ರಾಮದಲ್ಲಿ ನೀರಿನ ಸಮಸ್ಯೆ ಉಲ್ಬಣಿಸುವಲ್ಲಿ ಗ್ರಾಮ ಪಂಚಾಯಿತಿ ಪಿಡಿಒ, ತಾಲೂಕು ಆಡಳಿತ ಹಾಗೂ ಜಿಲ್ಲಾಡಳಿತದ ಬೇಜವಾಬ್ದಾರಿಯಿದ್ದು, ಎರಡು ದಿನದಲ್ಲಿ ಪರ್ಯಾಯವಾಗಿ ನೀರಿನ ಸೌಕರ್ಯ ಕಲ್ಪಿಸದೇ ಹೋದರೆ ಸಿಂಧನೂರು-ಮಸ್ಕಿ ಹೆದ್ದಾರಿಯಲ್ಲಿ ರಸ್ತಾರೋಖ ಚಳವಳಿ ನಡೆಸಲಾಗುವುದು, ಮುಂದಿನ ಯಾವುದೇ ರೀತಿಯ ಸಮಸ್ಯೆಗಳಿಗೆ ಪಂಚಾಯಿತಿ, ತಾಲೂಕು ಹಾಗೂ ಜಿಲ್ಲಾಡಳಿತವೇ ಹೊಣೆಯಾಗಿದೆ ಎಂದು ಗ್ರಾಮಸ್ಥರು ಎಚ್ಚರಿಸಿದ್ದಾರೆ.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ಮಲ್ಲಪ್ಪ ಪೂಜಾರಿ, ಸಿದ್ದಮ್ಮ ಭೋವಿ, ಮುಖಂಡರಾದ ವೆಂಕಟೇಶ್ ದುಗನೂರು, ಪಂಪಯ್ಯಸ್ವಾಮಿ ಹಿರೇಮಠ, ಶಿವರಾಯಪ್ಪ ತಳವಾರ, ಅಮರೇಗೌಡ ಆನಂದಗಲ್, ಚೆನ್ನಬಸಮ್ಮ ದುಗನೂರು, ರುದ್ರಪ್ಪ ಅಂಗಡಿ, ಸಂಗಮ್ಮ ಬೃಹನ್ಮಠ, ಶರಣಬಸವ ಮಾಲಿ ಪಾಟೀಲ್, ಶಂಭುಲಿಂಗಪ್ಪ, ಬಸವರಾಜ, ಪ್ರಮೋದ್ ದುಗನೂರು ಸೇರಿದಂತೆ ನೂರಾರು ಗ್ರಾಮಸ್ಥರು ಇದ್ದರು.