ಕೊಪ್ಪಳ ಎಂಪಿ ಕ್ಷೇತ್ರ: ಜನಾರ್ದನ ರೆಡ್ಡಿ ವಿರುದ್ಧ ಹಂಪನಗೌಡ ಬಾದರ್ಲಿಯವರ ವಾಗ್ಬಾಣ !

Spread the love

(ಪೊಲಿಟಿಕಲ್ ನ್ಯೂಸ್: ಬಸವರಾಜ ಹಳ್ಳಿ)
ನಮ್ಮ ಸಿಂಧನೂರು, ಏಪ್ರಿಲ್ 11

ರಾಯಚೂರು, ಕೊಪ್ಪಳ ಕ್ಷೇತ್ರದ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಲು, ಕಾಂಗ್ರೆಸ್‌ನ ಕೆಲ ಶಾಸಕರು ಪರೋಕ್ಷ ಸಹಕಾರ ನೀಡುತ್ತಿದ್ದಾರೆನ್ನುವ ಗಂಗಾವತಿ ಎಮ್ಮೆಲ್ಲೆ ಜನಾರ್ದನ ರೆಡ್ಡಿ ಅವರ ಮಾರ್ಮಿಕ ಹೇಳಿಕೆಗೆ, ಸಿಂಧನೂರು ಶಾಸಕ ಹಂಪನಗೌಡ ಬಾದರ್ಲಿ ಅವರು ತೀಕ್ಷಣವಾಗಿ ಪ್ರತಿಕ್ರಿಯಿಸಿದ್ದು, ‘ಜನಾರ್ದನ ರೆಡ್ಡಿಯೇ ಬಿಜೆಪಿಯಲ್ಲಿದ್ದು ಕಾಂಗ್ರೆಸ್ ಪರ ಕೆಲಸ ಮಾಡುತ್ತಿದ್ದಾರೆ” ಎಂಬ ವಾಗ್ಬಾಣದ ಮೂಲಕ ತಿರುಗೇಟು ನೀಡಿದ್ದಾರೆ. ಪರಸ್ಪರ ಇಬ್ಬರು ನಾಯಕರ ಹೇಳಿಕೆಗಳು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿವೆ.
“ಜನಾರ್ದನ ರೆಡ್ಡಿ ಯಾವುದೇ ಒಂದು ಪಕ್ಷದಲ್ಲಿ ನಿಶ್ಚಿತವಾಗಿ ಇರಲ್ಲ, ಪಕ್ಷದಿಂದ ಪಕ್ಷಕ್ಕೆ ಹೋಗುತ್ತಾರೆ’’ ಎಂದು ಮಾಧ್ಯಮದ ಮುಂದೆ ಆಪಾದಿಸುವ ಮೂಲಕ, ಬಿಜೆಪಿ ಕಾರ್ಯಕ್ರಮವೊಂದರಲ್ಲಿ ಬಸವರಾಜ ರಾಯರೆಡ್ಡಿ, ಶಿವರಾಜ ತಂಗಡಗಿ ಹಾಗೂ ತಮ್ಮ ಹೆಸರುಗಳನ್ನು ಪ್ರಸ್ತಾಪಿಸಿರುವ ಜನಾರ್ದನ ರೆಡ್ಡಿ ಹೇಳಿಕೆಗೆ ಅವರು ಪರೋಕ್ಷವಾಗಿ ಟಾಂಟ್ ನೀಡಿದ್ದಾರೆಂದೇ ರಾಜಕೀಯ ವಲಯದಲ್ಲಿ ಚರ್ಚೆ ಯಾಗುತ್ತಿದೆ.
ಕಾಂಗ್ರೆಸ್ ಸೈಲೆಂಟ್ ನಡೆ
ಕೆಲ ಬಿಜೆಪಿ ನಾಯಕರು ಬಹಿರಂಗವಾಗಿ ಹೇಳಿಕೆ ಕೊಟ್ಟರೂ ಸಿಂಧನೂರು ತಾಲೂಕು ಕಾಂಗ್ರೆಸ್‌ನಲ್ಲಿ ಸೈಲೆಂಟ್ ನಡೆ ಅನುಸರಿಸಲಾಗುತ್ತಿದೆ. ಅತ್ತ ಬಿಜೆಪಿ ಬಿರುಸಿನ ಪ್ರಚಾರದಲ್ಲಿ ತೊಡಗಿದ್ದರೆ, ಇತ್ತ ಕಾಂಗ್ರೆಸ್‌ನ ಮುಖಂಡರು ಮನೆ ಮನೆಗೆ ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳ ಬಗ್ಗೆ ಜಾಗೃತಿ ಮೂಡಿಸಿ ಮತದಾರರ ಮನವೊಲಿಸಲು ಮುಂದಾಗುತ್ತಿದ್ದಾರೆ. ಜೊತೆಗೆ ಕೇಂದ್ರ ಕಾಂಗ್ರೆಸ್ ಪ್ರಸಕ್ತ ಲೋಕಸಭೆ ಚುನಾವಣೆಗೆ ಪ್ರಣಾಳಿಕೆಯಲ್ಲಿ ಘೋಷಿಸಿರುವ ಹಲವು ಗ್ಯಾರಂಟಿಗಳ ಬಗ್ಗೆ ಕಾರ್ಯಕರ್ತರು ಪ್ರಚಾರದಲ್ಲಿ ತೊಡಗಿದ್ದಾರೆ.
‘ಗೊಂದಲಕ್ಕೆ ಗಮನ ಕೊಡಬೇಡಿ’
ಬಿಜೆಪಿ ನಾಯಕರ ಉದ್ರೇಕಕಾರಿ ಹೇಳಿಕೆ ಮತ್ತು ಗೊಂದಲದ ಮಾತುಗಳಿಗೆ ಗಮನಕೊಡದೇ ಪಕ್ಷ ಸಂಘಟಿಸುವ ಮೂಲಕ ಅಭ್ಯರ್ಥಿಯ ಪರ ಪ್ರಚಾರಕ್ಕೆ ಮುಂದಾಗುವAತೆ ಕಾರ್ಯಕರ್ತರಿಗೆ ಶಾಸಕ ಹಂಪನಗೌಡ ಬಾದರ್ಲಿ ಅವರು ಸೂಚನೆ ನೀಡಿದ್ದಾರೆಂದು ಹೇಳಲಾಗುತ್ತಿದ್ದು, ಹೀಗಾಗಿ ಬಹಳಷ್ಟು ಕಾರ್ಯಕರ್ತರು ಬಿಜೆಪಿ ನಾಯಕರ ಹೇಳಿಕೆಗಳಿಗೆ ಪರಿಣಾಮಕಾರಿಯಾಗಿ ಪ್ರತಿಕ್ರಿಯಿಸದೇ ಗ್ಯಾರಂಟಿಗಳ ಬಗ್ಗೆ ಜನರ ಗಮನ ಸೆಳೆಯಲು ಮುಂದಾಗಿದ್ದಾರೆಂದು ಹೇಳಲಾಗುತ್ತಿದೆ.
ಸಿಎಂ ಸಭೆಯತ್ತ ಚಿತ್ತ
ಏಪ್ರಿಲ್ 27ರಂದು ಸಿಂಧನೂರು, ಕನಕಗಿರಿ, ಸಿರುಗುಪ್ಪ ತಾಲೂಕು ವ್ಯಾಪ್ತಿಯಲ್ಲಿ ಸಿಎಂ ಅವರ ಬಹಿರಂಗ ಪ್ರಚಾರದ ಬೃಹತ್ ಸಭೆ ಏರ್ಪಡಿಸುವ ಕುರಿತಂತೆ ಸಿದ್ಧತೆ ನಡೆಸಲಾಗುತ್ತಿದೆ ಎಂದು ತಿಳಿದುಬಂದಿದ್ದು, ಕೊಪ್ಪಳ ಲೋಕಸಭಾ ಕ್ಷೇತ್ರ ವ್ಯಾಪಿಯಲ್ಲಿ ಗ್ಯಾರಂಟಿ ಅಲೆ ಸೃಷ್ಟಿಸಿ, ಪಕ್ಷದ ಅಭ್ಯರ್ಥಿ ರಾಜಶೇಖರ ಪಾಟೀಲ್ ಅವರಿಗೆ ಬಲ ತುಂಬುವ ಹಿನ್ನೆಲೆಯಲ್ಲಿ ಶಾಸಕ ಹಂಪನಗೌಡ ಬಾದರ್ಲಿ ಅವರು ತೊಡಗಿಸಿ ಕೊಂಡಿದ್ದಾರೆಂದು ಹೇಳಲಾಗುತ್ತಿದೆ.


Spread the love

Leave a Reply

Your email address will not be published. Required fields are marked *