(ಪೊಲಿಟಿಕಲ್ ನ್ಯೂಸ್ : ಬಸವರಾಜ ಹಳ್ಳಿ)ನಮ್ಮ ಸಿಂಧನೂರು, ಏಪ್ರಿಲ್ 13
ಈ ಬಾರಿಯ ಸಾರ್ವತ್ರಿಕ ಲೋಕಸಭಾ ಚುನಾವಣೆ ಸತ್ಯ ಮತ್ತು ಸುಳ್ಳಿನ ನಡುವಿನ ಸಮರವಾಗಿದೆ. ಬಡವರ, ಮಹಿಳೆಯರ, ಯುವಕರ ಹಾಗೂ ದೇಶದ ಹಿತ ಕಾಪಾಡುವ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವ ಮೂಲಕ ಮತದಾರರು ಕೇಂದ್ರದಲ್ಲಿ ಕಾಂಗ್ರೆಸ್ ಪಕ್ಷವನ್ನು ಆಡಳಿತಕ್ಕೆ ತರಬೇಕು ಎಂದು ಶಾಸಕ ಹಂಪನಗೌಡ ಬಾದರ್ಲಿ ಹೇಳಿದರು.
ಶನಿವಾರ ತಾಲೂಕಿನ ಸಾಲಗುಂದಾ ಜಿಲ್ಲಾ ಪಂಚಾಯಿತಿ ಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದ ಪ್ರಚಾರ ಸಭೆಯಲ್ಲಿ ಕೊಪ್ಪಳ ಅಭ್ಯರ್ಥಿ ರಾಜಶೇಖರ ಹಿಟ್ನಾಳ್ ಪರ ಮತಯಾಚನೆ ಮಾಡಿದರು. ನರೇಂದ್ರ ಮೋದಿಯವರು ಪ್ರತಿ ಚುನಾವಣೆಯಲ್ಲಿಯೂ ಸುಳ್ಳಿನ ಭರವಸೆಗಳನ್ನು ಜನರ ಮುಂದಿಟ್ಟು ಜನರನ್ನು ಮೋಡಿ ಮಾಡುತ್ತ ಬಂದಿದ್ದಾರೆ. ಆದರೆ ಇಲ್ಲಿಯವರೆಗೂ ಅವರು ನೀಡಿದ ಯಾವ ಭರವಸೆಗಳನ್ನು ಈಡೇರಿಸದೇ ಮತದಾರರಿಗೆ ವಂಚಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ ಬಡವರ ಪಕ್ಷವಾಗಿದ್ದು, ಕಾಂಗ್ರೆಸ್ ಸರ್ಕಾರ ಆಡಳಿತದಲ್ಲಿ ಇದ್ದಲ್ಲಿ ಶಾಂತಿ, ನೆಮ್ಮದಿ ಇರುತ್ತದೆ. ಮೋದಿಯವರು ಈ ಹಿಂದಿನ ಚುನಾವಣೆಯಲ್ಲಿ ಕಪ್ಪುಹಣ ವಿದೇಶದಿಂದ ತರುತ್ತೇನೆ, ಪ್ರತಿಯೊಬ್ಬರ ಭಾರತೀಯರ ಖಾತೆಗೆ ೧೫ ಲಕ್ಷ ರೂಪಾಯಿ ಹಾಕುತ್ತೇನೆ. ಪ್ರತಿ ವರ್ಷ 2 ಕೋಟಿ ಉದ್ಯೋಗ ಸೃಷ್ಟಿಸಲಾಗುವುದು ಎಂದು ಹೇಳಿದ್ದರು. ಅವ್ಯಾವು ಭರವಸೆಗಳು ಇದುವರೆಗೂ ಈಡೇರಿಲ್ಲ ಎಂದು ಆಪಾದಿಸಿದರು.
ಬಿಜೆಪಿಯಿಂದ ಸಂವಿಧಾನ ತಿದ್ದುಪಡಿಯ ಮಾತು
ಬಿಜೆಪಿಯವರು ಮಾತು ಮಾತಿಗೆ ಪುನಃ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಸಂವಿಧಾನ ತಿದ್ದುಪಡಿ ಮಾಡುತ್ತೇವೆ ಎಂದು ಹೇಳುತ್ತಿದ್ದಾರೆ. ಅಲ್ಲದೇ ಧರ್ಮ ಧರ್ಮಗಳ ನಡುವೆ ಜಗಳ ಹಚ್ಚಿ ವೋಟ್ ಬ್ಯಾಂಕ್ ರಾಜಕಾರಣ ಮಾಡುತ್ತಿದ್ದಾರೆ. ಬಡವರು ಬಡವರಾಗಿಯೇ ಉಳಿಯಬೇಕೆನ್ನುವುದೇ ಬಿಜೆಪಿಯ ಆಶಯವಾಗಿದೆ. ಸಾಮಾಜಿಕ ನ್ಯಾಯವನ್ನು ಕಡೆಗಣಿಸಿ ಬಿಜೆಪಿ ಅಧಿಕಾರ ನಡೆಸುತ್ತಿದ್ದು, ಅದಕ್ಕಾಗಿ ಸಂವಿಧಾನದ ವಿರುದ್ಧ ಆ ಪಕ್ಷ ದಾಳಿ ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ರಾಮ ದೇಶದ ಜನರಿಗೆ ದೇವರು ಬಿಜೆಪಿಗೆ ಮಾತ್ರ ಅಲ್ಲ
ಎರಡು ಚುನಾವಣೆಯಲ್ಲಿ ಪೊಳ್ಳು ಭರವಸೆಗಳನ್ನಿಟ್ಟುಕೊಂಡು ಚುನಾವಣೆ ಮಾಡಿದ್ದ ಬಿಜೆಪಿ ಈ ಬಾರಿ ರಾಮ ಮಂದಿರ, ರಾಮನ ಹೆಸರೇಳಿಕೊಂಡು ರಾಜಕಾರಣ ಮಾಡಲು ಮುಂದಾಗಿದೆ. ರಾಮ ದೇಶದ ಜನರಿಗೇ ದೇವರು, ಬಿಜೆಪಿ ಪಕ್ಷದವರಿಗೆ ಮಾತ್ರ ಅಷ್ಟೇ ಅಲ್ಲ. ದೇಶದಲ್ಲಿ ಬಹುಸಂಖ್ಯಾತರು ಹಿಂದೂಗಳಿದ್ದು, ಆದರೆ ಧರ್ಮ-ಜಾತಿಗಳ ನಡುವೆ ಬಿರುಕು ಮೂಡಿಸಿ ಬಿಜೆಪಿ ಒಡೆದಾಡುವ ಕೆಲಸ ಮಾಡುತ್ತಿದೆ ಎಂದು ಹಂಪನಗೌಡ ಬಾದರ್ಲಿ ಹೇಳಿದರು. ಈ ಸಂದರ್ಭದಲ್ಲಿ ಸಚಿವ ಶಿವರಾಜ ತಂಗಡಗಿ, ಅಬ್ಯರ್ಥಿ ರಾಜಶೇಖರ ಹಿಟ್ನಾಳ್ ಸೇರಿದಂತೆ ಕಾಂಗ್ರೆಸ್‌ನ ಮುಖಂಡರು, ಕಾರ್ಯಕರ್ತರು ಇದ್ದರು.