ನಮ್ಮ ಸಿಂಧನೂರು, ಏಪ್ರಿಲ್ 20
ಮಸ್ಕಿ ತಾಲೂಕಿನ ಹಡಗಲಿ ಗ್ರಾಮದಲ್ಲಿ ಸ್ಮಶಾನ ಜಾಗದ ಕೊರತೆಯಿಂದಾಗಿ ಮೃತಪಟ್ಟವರನ್ನು ಅಂತ್ಯಸಂಸ್ಕಾರ ಮಾಡಲು ಪರದಾಡುವಂತಾಗಿದ್ದು, ವಾರದೊಳಗೆ ಸಂಬಂಧಿಸಿದ ಇಲಾಖೆಯವರು ಸ್ಪಂದಿಸಿ ಸೂಕ್ತ ಕ್ರಮ ಕೈಗೊಳ್ಳದೇ ಹೋದರೆ ಲೋಕಸಭಾ ಚುನಾವಣೆಯನ್ನು ಬಹಿಷ್ಕರಿಸಬೇಕಾಗುತ್ತದೆ ಎಂದು ಗ್ರಾಮಸ್ಥರು ಜಿಲ್ಲಾ ಮತ್ತು ತಾಲೂಕು ಆಡಳಿತವನ್ನು ಎಚ್ಚರಿಸಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಗ್ರಾಮಸ್ಥರು, ಈಗಾಗಲೇ 16-11-2023ರಂದು ಮಸ್ಕಿ ತಹಸೀಲ್ದಾರ್ ಅವರಿಗೆ ಮನವಿ ಸಲ್ಲಿಸಿ ಸಮಸ್ಯೆಯನ್ನು ಹೇಳಿಕೊಂಡು ಅಲವತ್ತುಕೊಂಡಿದ್ದರೂ ಪ್ರಯೋಜನವಾಗಿಲ್ಲ. ಊರಲ್ಲಿ ಯಾವುದೇ ಸಮುದಾಯದವರು ಮೃತಪಟ್ಟರೆ ಅವರನ್ನು ಎಲ್ಲಿ ಅಂತ್ಯಸಂಸ್ಕಾರ ಮಾಡಬೇಕೆನ್ನುವುದೇ ದೊಡ್ಡ ಚಿಂತೆಯಾಗಿದೆ. ಚುನಾಯಿತ ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಹತ್ತಾರು ಬಾರಿ ಮನವಿ ಮಾಡಿದರೂ ಸಮಸ್ಯೆ ಪರಿಹರಿಸುವಲ್ಲಿ ವಿಫಲವಾಗಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಸ್ಕಿ ಹೋಬಳಿಯ ಹಡಗಲಿ ಸೀಮಾದಲ್ಲಿರುವ ಸರ್ವೆ ನಂ.4/*/2 ರ 27 ಗುಂಟೆ ಜಮೀನಿನಲ್ಲಿ ನೂರಾರು ವರ್ಷಗಳಿಂದ ಆಯಾ ಸಮುದಾಯವರು ಅಂತ್ಯಸಸ್ಕಾರ ನಡೆಸುತ್ತಾ ಬಂದಿದ್ದೇವೆ. ಆದರೆ ಇತ್ತೀಚಿಗೆ 4 ವರ್ಷಗಳಿಂದ ಸರ್ವೆ ನಂ.4/*/1ರ ಜಮೀನಿನ ಮಾಲೀಕರಾದ ಅಮರಮ್ಮ ಬಸಪ್ಪ ಇವರು ಸ್ಮಶಾನದ ಜಮೀನನ್ನು ಅತಿಕ್ರಮಿಸಿಕೊಂಡು ಶವ ಸಂಸ್ಥಾರಕ್ಕೆ ಅಡ್ಡಿಪಡಿಸುತ್ತಿದ್ದಾರೆ. ಇದರಿಂದಾಗಿ ಮೃತಪಟ್ಟವನ್ನು ಗೌರವಿತವಾಗಿ ಮಣ್ಣು ಮಾಡಲು ಪಡಿಪಾಟಲು ಅನುಭವಿಸುವಂತಾಗಿದೆ ಎಂದು ಅವರು ಅಳಲು ತೋಡಿಕೊಂಡಿದ್ದಾರೆ.
ಎಪ್ರಿಲ್ 27ರವರೆಗೆ ಗಡುವು:
ಎಪ್ರಿಲ್ 27ನೇ ತಾರೀಖಿನ ಒಳಗಡೆ ತಾಲೂಕು ಆಡಳಿತ, ಜಿಲ್ಲಾಡಳಿತ ಹಾಗೂ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಗ್ರಾಮಕ್ಕೆ ಖುದ್ದಾಗಿ ಭೇಟಿ ನೀಡಿ ಸಮಸ್ಯೆ ಪರಿಹರಿಸದೇ ಹೋದಲ್ಲಿ ಗ್ರಾಮದ ಎಲ್ಲ ಸಮುದಾಯದ ಜನರು ಸಭೆ ನಡೆಸಿ ಒಕ್ಕೊರಲಿನಿಂದ ಮೇ 7ರ ಲೋಕಸಭೆ ಚುನಾವಣೆಯ ಮತದಾನವನ್ನು ಬಹಿಷ್ಕರಿಸುವ ತೀರ್ಮಾನವನ್ನು ತೆಗೆದುಕೊಳ್ಳಬೇಕಾಗುತ್ತದೆ. ಇದಕ್ಕೆ ಜಿಲ್ಲಾಡಳಿತ, ತಾಲೂಕು ಆಡಳಿತ ಹಾಗೂ ಸಂಬಂಧಿಸಿದ ಅಧಿಕಾರಿಗಳೇ ಹೊಣೆಗಾರರಾಗಿರುತ್ತಾರೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.