ಸಿಂಧನೂರು. ಫೆಬ್ರವರಿ 05
ನಗರದ ಕನಕದಾಸ ಕಲ್ಯಾಣ ಮಂಟಪದಲ್ಲಿ ಸೋಮವಾರ ಭಾರತೀಯ ಜನತಾ ಪಾರ್ಟಿಯಿಂದ ಸಿಂಧನೂರು ವಿಧಾನಸಭಾ ಕ್ಷೇತ್ರದ ಗ್ರಾಮ ಚಲೋ ಅಭಿಯಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಮುಂಬರುವ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಗ್ರಾಮ ಮಟ್ಟದಿಂದ ಪಕ್ಷವನ್ನು ಸಂಘಟಿಸುವ ಹಿನ್ನೆಲೆಯಲ್ಲಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕಾರ್ಯಕರ್ತರಿಗೆ, ಪದಾಧಿಕಾರಿಗಳಿಗೆ ಅಭಿಯಾನದ ಅಂಗವಾಗಿ ನಡೆದ ಪ್ರಶಿಕ್ಷಣ ವರ್ಗದ ಮೂಲಕ ಸಂಘಟನೆ ಕೈಗೊಳ್ಳುವ ಕುರಿತು ಸಲಹೆ, ಸೂಚನೆಗಳನ್ನು ನೀಡಲಾಯಿತು.
ಈ ಸಂದರ್ಭದಲ್ಲಿ ಬಿಜೆಪಿಯ ಹಿರಿಯ ಮುಖಂಡ ಹಾಗೂ ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ಮಾತನಾಡಿ, ಬಿಜೆಪಿ ಕಾರ್ಯಕರ್ತರು ಹಾಗೂ ಪದಾಧಿಕಾರಿಗಳು, ಕೇಂದ್ರದಲ್ಲಿ ಅಧಿಕಾರದಲ್ಲಿರುವ ಮೋದಿ ನೇತೃತ್ವದ ಸರ್ಕಾರ ಕೈಗೊಂಡಿರುವ ಜನಪರ, ಅಭಿವೃದ್ಧಿಪರ ಯೋಜನೆಗಳ ಬಗ್ಗೆ ಅರಿವು ಮೂಡಿಸುವ ಮೂಲಕ ಮುಂಬರುವ ಲೋಕಸಭಾ ಚುನಾವಣೆಗೆ ನಗರ ಸೇರಿದಂತೆ ಹಳ್ಳಿ ಹಳ್ಳಿಗಳಲ್ಲಿ ಪಕ್ಷವನ್ನು ಸಂಘಟಿಸಬೇಕಿದೆ. ಈ ನಿಟ್ಟಿನಲ್ಲಿ ಎಲ್ಲರೂ ಒಮ್ಮತದಿಂದ ಕೆಲಸ ಮಾಡಿ ಪಕ್ಷವನ್ನು ಬಲಪಡಿಸಬೇಕು ಎಂದು ಕರೆ ನೀಡಿದರು.
ಬಿಜೆಪಿ ಮುಖಂಡ ಕೆ.ಕರಿಯಪ್ಪ ಮಾತನಾಡಿ, ಕಳೆದ ಸಿಂಧನೂರು ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಕ್ಷೇತ್ರ ವ್ಯಾಪ್ತಿಯಲ್ಲಿ ಅತೀ ಕಡಿಮೆ ಅವಧಿಯಲ್ಲಿಯೂ ಪಕ್ಷದ ಪದಾಧಿಕಾರಿಗಳು, ಮುಖಂಡರು ಹಾಗೂ ಕಾರ್ಯಕರ್ತರು ಅತ್ಯಂತ ಉತ್ಸಾಹದಿಂದ, ಒಗ್ಗಟ್ಟಿನಿಂದ ಕೆಲಸ ಮಾಡಿದ ಕಾರಣ ಹೆಚ್ಚಿನ ವೋಟುಗಳನ್ನು ಪಡೆಯಲು ಸಾಧ್ಯವಾಗಿದೆ. ಅದೇ ರೀತಿ ಮುಂಬರುವ ಕೊಪ್ಪಳ ಲೋಕಸಭಾ ಚುನಾವಣೆಯಲ್ಲಿಯೂ ಪಕ್ಷದ ಅಭ್ಯರ್ಥಿಯ ಪರ ಕಂಕಣಬದ್ಧರಾಗಿ ಕೆಲಸ ಮಾಡುವ ಮೂಲಕ ಶಕ್ತಿ ಪ್ರದರ್ಶಿಸುವಂತೆ ಹೇಳಿದರು.
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶರಣಪ್ಪಗೌಡ ನಕ್ಕುಂದಿ, ಜಿ.ಪಂ.ಮಾಜಿ ಅಧ್ಯಕ್ಷೆ ಆದಿಮನಿ ವೀರಲಕ್ಷ್ಮಿ, ನಗರ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ವಿರುಪಾಪುರ ಅಮರೇಗೌಡ, ನಿರುಪಾದಿ ಜೋಳದರಾಶಿ, ಎಂ.ದೊಡ್ಡ ಬಸವರಾಜ, ಮಧ್ವರಾಜ್ ಆಚಾರ್, ಶೈಲಜಾ ಷಡಕ್ಷರಪ್ಪ, ಯುವ ಘಟಕದ ರವಿಕುಮಾರ ಉಪ್ಪಾರ ಸೇರಿದಂತೆ ಇನ್ನಿತರೆ ಮುಖಂಡರು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಇದ್ದರು.