ಲೋಕಲ್ ನ್ಯೂಸ್: ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಜನವರಿ 10
ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆಯ 46, 54 ಹಾಗೂ 86ನೇ ಉಪ ಕಾಲುವೆಗಳಿಗೆ ನಿಗದಿಪಡಿಸಿದ ಪ್ರಮಾಣದಲ್ಲಿ ನೀರು ಹರಿಯದ ಕಾರಣ, ಗದ್ದೆಯಲ್ಲಿ ಸಸಿ ನಾಟಿ ಮಾಡಲು ನೀರಿನ ಕೊರತೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ರೈತರು ನೀರಾವರಿ ಇಲಾಖೆ ಅಧಿಕಾರಿಗಳನ್ನು ನಗರದ ಗಾಂಧಿ ಸರ್ಕಲ್ನಲ್ಲಿ ಶುಕ್ರವಾರ ತರಾಟೆಗೆ ತೆಗೆದುಕೊಂಡ ಘಟನೆ ನಡೆಯಿತು.
ಕರ್ನಾಟಕ ಪ್ರಾಂತ ರೈತ ಸಂಘ ತಾಲೂಕಾ ಸಮಿತಿ ನೇತೃತ್ವದಲ್ಲಿ ಪ್ರವಾಸಿ ಮಂದಿರದಿಂದ ಪ್ರತಿಭಟನಾ ಮೆರವಣಿಗೆಯಲ್ಲಿ ಆಗಮಿಸಿದ ರೈತರು ಗಾಂಧಿ ಸರ್ಕಲ್ನಲ್ಲಿ ಜಮಾವಣೆಗೊಂಡರು. ಕಳೆದ 50 ದಿನಗಳಿಂದ ಸಸಿಮಡಿ ಹಾಕಿದ್ದು, ಇಲ್ಲಿಯವರೆಗೂ ನಮ್ಮ ಗದ್ದೆಗಳಿಗೆ ನೀರು ಹರಿದಿಲ್ಲ. 30 ದಿನದಲ್ಲಿ ಸಸಿ ನಾಟಿ ಮಾಡಿದರೆ ಉತ್ತಮ ಇಳುವರಿ ಬರಲು ಸಾಧ್ಯ ಇಲ್ಲದೇ ಹೋದರೆ ನಷ್ಟ ಅನುಭವಿಸಬೇಕಾಗುತ್ತದೆ. ವಿತರಣಾ ಕಾಲುವೆಯಲ್ಲಿ ನೀರು ಸರಿಯಾದ ನಿರ್ವಹಣೆ ಇಲ್ಲದ ಕಾರಣ ಪರಿತಪಿಸುವಂತಾಗಿದೆ, ತುಂಗಭದ್ರಾ ಅಣೆಕಟ್ಟೆಯಲ್ಲಿ ನೀರು ಇದ್ದರೂ ಹರಿಸಲು ನಿಮಗೇನು ತ್ರಾಸು ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ನೀರಾವರಿ ಇಲಾಖೆ ಅಧಿಕಾರಿಗಳು ಹಾಗೂ ರೈತರ ನಡುವೆ ಮಾತಿನ ಚಕಮಕಿ ನಡೆಯಿತು. ಪರಿಸ್ಥಿತಿಯನ್ನು ಅರಿತ ಪೊಲಿಸ್ ಸಿಬ್ಬಂದಿ ರೈತರನ್ನು ಮನವೊಲಿಸಿದರು.
ತುಂಗಭದ್ರಾ ಡ್ಯಾಮಿನಲ್ಲಿ ನೀರಿನ ಕೊರತೆ ಇಲ್ಲದಿದ್ದರೂ ವಿನಾಃಕಾರಣ ಡ್ಯಾಂ ಆಡಳಿತ ಮಂಡಳಿ ಹಾಗೂ ಅಧಿಕಾರಿಗಳು ನೀರು ಹರಿಸುವಲ್ಲಿ ಮೀನಮೇಷ ಮಾಡುತ್ತಿದ್ದಾರೆ. ಡಿಸೆಂಬರ್ 15ರಿಂದ ನಿಗದಿಯಂತೆ 3800 ಕ್ಯೂಸೆಕ್ ನೀರು ಹರಿಸಿದ್ದರೆ, ಈ ಸಮಸ್ಯೆ ಉದ್ಭವಿಸುತ್ತಿರಲಿಲ್ಲ. ಜನವರಿ 1ರಿಂದ ಗೇಜ್ ಹೆಚ್ಚಿಸಲು ಪ್ರಾರಂಭ ಮಾಡಿದ್ದರಿಂದ ಜನವರಿ 10 ಆದರೂ ಪರಿಪೂರ್ಣ ಗೇಜ್ ನೀಡು ಹರಿಸಲು ಸಾಧ್ಯವಾಗಿಲ್ಲ. 3800 ಕ್ಯೂಸೆಕ್ ನೀರು ಬಿಡುಗಡೆ ಮಾಡಿದ ಪ್ರಕಾರ 36ನೇ ವಿತರಣಾ ಕಾಲುವೆಗೆ 214 ಕ್ಯೂಸೆಕ್ ನೀರು ಹರಿಬಿಡುವಲು ಬದಲು 185 ಕ್ಯೂಸೆಕ್ ನೀರು ಹರಿಸಲಾಗಿದೆ. ಉಪಕಾಲುವೆ 46ಕ್ಕೆ 45ರ ಬದಲು 30 ಕ್ಯೂಸೆಕ್ ಹಾಗೂ 54 ನೇ ಕಾಲುವೆಗೆ 6 ಫೀಟ್ ಬದಲು 5 ಫೀಟ್ ನೀರು ಹರಿಸಲಾಗುತ್ತಿದೆ. ಇದರಿಂದ ರೈತರ ಜಮೀನುಗಳಿಗೆ ನೀರು ಹರಿಯದಿರುವುದರಿಂದ ಗದ್ದೆಗಳನ್ನು ಪಾಳು ಬಿಡುವಂತಾಗಿದೆ ಎಂದು ಆಪಾದಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ತಾಲೂಕು ಅಧ್ಯಕ್ಷ ವಿರೂಪಾಕ್ಷಗೌಡ, ಜಿಲ್ಲಾ ಘಟಕದ ಬಸವಂತರಾಯಗೌಡ ಕಲ್ಲೂರು, ಶರಣಪ್ಪ ಚಿರತ್ನಾಳ, ಬಸವರಾಜ, ನಿಂಗಪ್ಪ ಸೇರಿದಂತೆ ಕಲ್ಲೂರು, ಮುಳ್ಳೂರು, ರೈತನಗರಕ್ಯಾಂಪ್, ಹಾರಾಪುರ, ಮಲ್ಲಾಪುರ, ದೇವರಗುಡಿ, ಭೂತಲದಿನ್ನಿ ಗ್ರಾಮಗಳ ರೈತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.