ನಮ್ಮ ಸಿಂಧನೂರು, ಮಾರ್ಚ್ 3
ನಗರದ ತಹಸೀಲ್ ಕಾರ್ಯಾಲಯದ ಕಾಂಪೌಂಡ್ ಹಾಗೂ ಕೋರ್ಟ್ ಕೌಂಪೌಂಡ್‌ನ ನಡು ಮಧ್ಯದಲ್ಲಿರುವ, ಮಹೆಬೂಬಿಯಾ ಕಾಲೋನಿ, ಶರಣಬಸವೇಶ್ವರ ಕಾಲೋನಿ ಸೇರಿದಂತೆ ವಿವಿಧ ವಾರ್ಡ್ಗಗಳಿಗೆ ಮುಖ್ಯ ರಸ್ತೆಯಿಂದ ಸಂಪರ್ಕ ಕಲ್ಪಿಸುವ ಈ ರಸ್ತೆ ಧೂಳುಮಯ ರಸ್ತೆ ಎನ್ನುವ ಅಪಖ್ಯಾತಿಗೆ ಒಳಗಾಗಿದ್ದು, ಸಾರ್ವಜನಿಕರು ತೊಂದರೆ ಎದುರಿಸುತ್ತಿದ್ದಾರೆ.
ರಸ್ತೆಯಲ್ಲಿ ಅಲ್ಲಲ್ಲಿ ತಗ್ಗು-ದಿನ್ನೆಗಳು ಬಿದ್ದಿದ್ದು, ಅಕ್ಕಪಕ್ಕದಲ್ಲಿ ತ್ಯಾಜ್ಯ ವಸ್ತುಗಳು, ವಿಪರೀತ ಮಣ್ಣು ಹಾಗೂ ಎಲ್ಲೆಂದರಲ್ಲಿ ನಿರುಪಯುಕ್ತ ವಸ್ತುಗಳು ಶೇಖರಣೆಗೊಂಡ ಕಾರಣ ಯಾವುದೇ ವಾಹನ ಹೋದರೂ ಧೂಳು ಮೇಲೇಳುತ್ತದೆ. ಈ ಮಾರ್ಗದಲ್ಲಿ ಮೂಗಿಗೆ ಕರವಸ್ತç ಇಲ್ಲವೇ ಮೂಗು ಮುಚ್ಚಿಕೊಂಡು ಸಂಚರಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಮಳೆಗಾಲದಲ್ಲಿ ತೀವ್ರ ರೊಜ್ಜು ಉಂಟಾದರೆ, ಬೇಸಿಗೆಯಲ್ಲಿ ಧೂಳೋ ಧೂಳು..! ಈ ದಾರಿಯಲ್ಲಿ ದಿನವೂ ದ್ವಿಚಕ್ರ ವಾಹನ ಸೇರಿದಂತೆ ಇನ್ನಿತರೆ ವಾಹನಗಳು ಹೆಚ್ಚು ಸಂಚರಿಸುತ್ತಿದ್ದು, ಡಾಂಬರ್ ರಸ್ತೆ ಸಂಪೂರ್ಣ ಮಣ್ಣಿನಿಂದ ಆವೃತವಾಗಿದೆ, ಇನ್ನೂ ಕೆಲವೆಡೆ ಡಾಂಬರ್ ಕಿತ್ತುಹೋಗಿ ಕಂಕರ್ ತೇಲಿದ್ದು, ಧೂಳುಮಯ ರಸ್ತೆಯಾಗಿ ಮಾರ್ಪಟ್ಟಿದೆ.