ನಮ್ಮ ಸಿಂಧನೂರು, ಫೆಬ್ರವರಿ 02
ರಾಜ್ಯ ಸರ್ಕಾರ 161 ತಾಲೂಕುಗಳನ್ನು ಬರಗಾಲ ಪೀಡಿತ ಪ್ರದೇಶಗಳೆಂದು ಘೋಷಣೆ ಮಾಡಿ 5 ತಿಂಗಳು ಕಳೆದರೂ ಇಲ್ಲಿಯವರೆಗೂ ಪರಿಹಾರದ ಹಣ ರೈತರ ಖಾತೆಗೆ ಜಮಾ ಮಾಡದೇ ನಿರ್ಲಕ್ಷಿಸಲಾಗಿದೆ. ಈ ವಿಚಾರದಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಆರೋಪ-ಪ್ರತ್ಯಾರೋಪ ಮಾಡದೇ ತಮ್ಮ ಪಾಲಿನ ಹಣವನ್ನು ಈ ಕೂಡಲೇ ಬಿಡುಗಡೆ ಮಾಡಬೇಕು ಹಾಗೂ ರಾಜ್ಯದ ಮುಖ್ಯಮಂತ್ರಿಯವರು ಈ ಬಗ್ಗೆ ಮೌನ ಮುರಿದು ರೈತರ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದು ಕರ್ನಾಟಕ ರಾಷ್ಟç ಸಮಿತಿ ಪಕ್ಷದ ಮುಖಂಡರಾದ ನಿರುಪಾದಿ.ಕೆ ಗೋಮರ್ಸಿ ಅವರು ಆಗ್ರಹಿಸಿದ್ದಾರೆ.
ಈ ಕುರಿತು ಶುಕ್ರವಾರ (ಫೆ.2, 2024) ದಂದು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, “ಬೀಜ, ಗೊಬ್ಬರ ಹಾಗೂ ಬಿತ್ತನೆಗಾಗಿ ಮಾಡಿದ ಸಾಲವನ್ನು ತೀರಿಸಲಾಗದೇ ಅನ್ನದಾತ ರೈತರು ಪರಿತಪಿಸುತ್ತಿದ್ದಾರೆ. ಈಗಾಗಲೇ ರಾಜ್ಯ ಸರಕಾರ ಬಿಡುಗಡೆ ಮಾಡಿರುವ ಅನುದಾನ ಕಡಿಮೆ ಪ್ರಮಾಣದಲ್ಲಿದ್ದು, ಅವೈಜ್ಞಾನಿಕ ಮಾನದಂಡಗಳನ್ನು ಅನುಸರಿಸಲಾಗಿದೆ. ರೈತರು ಮಾಡಿದ ಸಾಲದ ಬಡ್ಡಿ ಕಟ್ಟಲೂ ಈ ಹಣ ಸಾಕಾಗುವುದಿಲ್ಲ. ಹಾಗಾಗಿ ವೈಜ್ಞಾನಿಕ ಮಾನದಂಡಗಳನ್ನು ಅನುಸರಿಸಿ ಪರಿಹಾರದ ಹಣವನ್ನು ರೈತರ ಖಾತೆಗಳಿಗೆ ಜಮಾ ಮಾಡುವ ಮೂಲಕ ಅವರನ್ನು ಸಂಕಷ್ಟದಿಂದ ಪಾರು ಮಾಡಬೇಕು. ಅಲ್ಲದೇ ಕೇಂದ್ರ ಸರ್ಕಾರವೂ ವಿಳಂಬ ಮಾಡದೇ ತನ್ನ ಪಾಲಿನ ಹಣವನ್ನು ರಾಜ್ಯ ಸರ್ಕಾರಕ್ಕೆ ನೀಡುವ ಮೂಲಕ ರೈತರ ನೆರವಿಗೆ ಧಾವಿಸಬೇಕು. ಒಂದು ವೇಳೆ ನಿರ್ಲಕ್ಷ್ಯವಹಿಸಿದರೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಉದಾಸೀನತೆಯನ್ನು ಖಂಡಿಸಿ ಕೆಆರ್‌ಎಸ್ ಪಕ್ಷದಿಂದ ರಾಜ್ಯಾದ್ಯಂತ ಹೋರಾಟ ತೀವ್ರಗೊಳಿಸಬೇಕಾಗುತ್ತದೆ ಎಂದು ಅವರು ಪ್ರಕಟಣೆಯಲ್ಲಿ ಎಚ್ಚರಿಸಿದ್ದಾರೆ.