ಲೋಕಲ್ ನ್ಯೂಸ್ : ಬಸವರಾಜ ಹಳ್ಳಿ
ನಮ್ಮ ಸಿಂಧನೂರು ನವೆಂಬರ್ 28
ನಗರದ ತಾಲೂಕು ಸಾರ್ವಜನಿಕ ಆಸ್ಪತ್ರೆ ಅವ್ಯವಸ್ಥೆಯ ಆಗರವಾಗಿದ್ದು, ಈ ಅವ್ಯವಸ್ಥೆಯನ್ನು ಸರಿಪಡಿಸಿ ಸಾರ್ವಜನಿಕರಿಗೆ ಗುಣಮಟ್ಟದ ಚಿಕಿತ್ಸೆ ಒದಗಿಸಲು ಜಿಲ್ಲಾಡಳಿತ ಹಾಗೂ ಚುನಾಯಿತ ಜನಪ್ರತಿನಿಧಿಗಳು 15 ದಿನಗಳ ಒಳಗಾಗಿ ಕ್ರಮ ಕೈಗೊಳ್ಳದಿದ್ದರೆ ಭಾರತ ಕಮ್ಯುನಿಸ್ಟ್ ಪಾರ್ಟಿ ಜಿಲ್ಲಾ ಘಟಕದಿಂದ ಹೋರಾಟ ನಡೆಸಲಾಗುವುದು ಎಂದು ಜಿಲ್ಲಾ ಕಾರ್ಯದರ್ಶಿ ಚಂದ್ರಶೇಖರ ಕ್ಯಾತ್ನಟ್ಟಿ, ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ಬಾಷುಮಿಯಾ ಹಾಗೂ ಪಕ್ಷದ ಮುಖಂಡ ವೆಂಕನಗೌಡ ಗದ್ರಟಗಿ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ಆಗ್ರಹಿಸಿದ್ದಾರೆ.
ಈ ಕುರಿತು ಗುರುವಾರ ಜಂಟಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, “ಅಕ್ಟೋಬರ್ ತಿಂಗಳಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆಯಾದ ನಂತರ ಮೂವರು ಮಹಿಳೆಯರು ಅಸ್ವಸ್ಥಗೊಂಡು ರಾಯಚೂರಿನ ರಿಮ್ಸ್ ಆಸ್ಪತ್ರೆಯಲ್ಲಿ ಮೃಟಪಟ್ಟ ಪ್ರಕರಣಗಳು ಜರುಗಿದ್ದು, ಈ ವಿಷಯ ವಿವಾದದ ಸ್ವರೂಪ ಪಡೆದುಕೊಂಡಿರುತ್ತವೆ. ಕೆಲವು ಸಂಘಟನೆಗಳು ಈ ವಿಷಯವನ್ನು ಗಂಭೀರಿವಾಗಿ ಪರಿಗಣಿಸಿ ಹಾಗೂ ಆಸ್ಪತ್ರೆಯ ಅವ್ಯವಸ್ಥೆ ಸರಿಪಡಿಸಲು ಒತ್ತಾಯಿಸಿ ಧರಣಿ ಸತ್ಯಾಗ್ರಹ ನಡೆಸಿ ಆಗ್ರಹಿಸಿದ್ದವು. ಆದರೆ ಈ ಬಗ್ಗೆ ಸೂಕ್ತ ಕ್ರಮಗಳಾಗಿಲ್ಲ. ಇದನ್ನು ಗಮನಿಸಿದರೆ, ಸಿಂಧನೂರು ಸರಕಾರಿ ಆಸ್ಪತ್ರೆ ಆಡಳಿತ ಸರಿಪಡಿಸಲಾಗದಷ್ಟು ಹದಗೆಟ್ಟು ಹೋಗಿದೆ ಎಂದು ನಮ್ಮ ಪಕ್ಷ ಭಾವಿಸಿದೆ” ಎಂದು ಗಮನ ಸೆಳೆದಿದ್ದಾರೆ.
“ಆಸ್ಪತ್ರೆಯಲ್ಲಿ ಔಷದಿ, ಮಾತ್ರೆಗಳು ಲಭ್ಯವಿದ್ದರೂ ರೋಗಿಗಳಿಗೆ ದೊರೆಯುತ್ತಿಲ್ಲ. ಅದರಲ್ಲೂ ರಾತ್ರಿ ಪಾಳಿಯ ವೈದ್ಯರು ಎಲ್ಲಿ ಇರುತ್ತಾರೋ, ಯಾವಾಗ ಬರುತ್ತಾರೋ ಗೊತ್ತಿಲ್ಲದಂತಾಗಿದೆ. ಇಲ್ಲಿನ ಸಿಬ್ಬಂದಿಗಳು ವೈದ್ಯರ ಬರುವಿಕೆ ಬಗ್ಗೆ ಕೇಳಿದರೆ ನಮಗೆ ಗೊತ್ತಿಲ್ಲ, ಅವರು ಬಂದ ಮೇಲೆ ಬನ್ನಿರಿ ಎಂದು ರೋಗಿಗಳನ್ನು ವಾಪಸ್ ಕಳುಹಿಸುವ ರೂಢಿ ಮಾಡಿಕೊಂಡಿದ್ದಾರೆ ಎಂದು ಸಾರ್ವಜನಿಕರು ದೂರುತ್ತಿದ್ದಾರೆ. ಇನ್ನು ಆಸ್ಪತ್ರೆಯ ವಾರ್ಡ್ಗಳು, ಶೌಚಾಲಯ, ಒಳಾವರಣ ಸ್ವಚ್ಛತೆ ಬಗ್ಗೆ ಸಂಪೂರ್ಣ ನಿರ್ಲಕ್ಷö್ಯವಹಿಸಲಾಗಿದೆ. ಆಸ್ಪತ್ರೆಯಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಇಲ್ಲದಂತಾಗಿದೆ. 100 ಹಾಸಿಗೆ ಆಸ್ಪತ್ರೆ ಹೆಸರಿಗೆ ಮಾತ್ರ ಆಗಿದ್ದು, ಗುಣಮಟ್ಟದ ಚಿಕಿತ್ಸೆ ದೊರೆಯುತ್ತಿಲ್ಲ” ಎಂದು ಮನವಿಯಲ್ಲಿ ಅವರು ವಿವರಿಸಿದ್ದಾರೆ.
‘ಜಿಲ್ಲಾಡಳಿತ, ಚುನಾಯಿತ ಪ್ರತಿನಿಧಿಗಳು, ಸಾರ್ವಜನಿಕರ ಸಭೆ ಕರೆಯಿರಿ’
ಆಸ್ಪತ್ರೆಯ ಅವ್ಯವಸ್ಥೆ ಸುಧಾರಿಸಲು ಕೂಡಲೇ ಜಿಲ್ಲಾಡಳಿತವು ಚುನಾಯಿತ ಪ್ರತಿನಿಧಿಗಳ, ಜನಪರ ಸಂಘಟನೆ ಹಾಗೂ ಸಾರ್ವಜನಿಕರ ಸಭೆ ಕರೆಯಬೇಕು. ತಕ್ಷಣದಿಂದಲೇ ಆಸ್ಪತ್ರೆಯ ವೈದ್ಯರು, ಕೆಲ ಸಿಬ್ಬಂದಿಗಳು ರಜೆ ಹಾಕಿ ಕರ್ತವ್ಯಕ್ಕೆ ಗೈರಾಗಿರುವುದನ್ನು ಹಿಂಪಡೆದು ಕೂಡಲೇ ಕರ್ತವ್ಯಕ್ಕೆ ಹಾಜರಾಗುವಂತೆ ಕ್ರಮ ಕೈಗೊಳ್ಳಬೇಕೆಂದು’ ಎಂದು ಚಂದ್ರಶೇಖರ ಕ್ಯಾತ್ನಟ್ಟಿ, ಬಾಷುಮಿಯಾ ಹಾಗೂ ವೆಂಕನಗೌಡ ಗದ್ರಟಗಿ ಒತ್ತಾಯಿಸಿದ್ದಾರೆ.