ವಿಶೇಷ ವರದಿ: ಬಸವರಾಜ ಹಸಮಕಲ್
ನಮ್ಮ ಸಿಂಧನೂರು, ಮಾರ್ಚ್ 10
200 ಹಾಸಿಗೆ ಸಾಮರ್ಥ್ಯದ, ರೂ.28.75 ಕೋಟಿ ವೆಚ್ಚದ ಸಿಂಧನೂರು ಜಿಲ್ಲಾಮಟ್ಟದ ಆಸ್ಪತ್ರೆ ನಿರ್ಮಾಣದ ಕೆಲಸ ಚುರುಕು ಪಡೆದುಕೊಂಡಿದೆ. ತಾಲೂಕು ಆಸ್ಪತ್ರೆಯ ಹಿಂಭಾಗದ ಎಲ್ಲ ಹಳೆಯ ಕಟ್ಟಡಗಳನ್ನು ತೆರವುಗೊಳಿಸಿ, ಸಮತಟ್ಟು ಮಾಡುವ ಕೆಲಸ ಮಂಗಳವಾರ ಕಂಡುಬಂತು.
ಸಿಂಧನೂರು ತಾಲೂಕು ಪ್ರಮುಖ ವಾಣಿಜ್ಯ ಕೇಂದ್ರವಾಗಿದ್ದು, ಸುತ್ತಮುತ್ತಲಿನ ಜಿಲ್ಲಾ ಕೇಂದ್ರಗಳಿಂದ ಅಂದಾಜು 90 ಕಿ.ಮೀ ಗೂ ಅಂತರದಲ್ಲಿರುವುದರಿಂದ ಜನಸಾಮಾನ್ಯರಿಂದ ಆರೋಗ್ಯ ಸೇವೆಗಳ ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಗ್ರಾಮೀಣ ಪ್ರದೇಶ ಮತ್ತು ಪಟ್ಟಣಗಳ ಜನರು ಆರೋಗ್ಯ ಸೇವೆ ಪಡೆಯಲು ಜಿಲ್ಲಾ ಕೇಂದ್ರಕ್ಕೆ ಪದೇ ಪದೆ ಭೇಟಿ ಕೊಡುವುದು ಕಷ್ಟಸಾಧ್ಯವಾಗಿದೆ. ಇದರಿಂದ ಸಿಂಧನೂರು ಜಿಲ್ಲಾಸ್ಪತ್ರೆ ನಿರ್ಮಾಣ ಮಾಡಬೇಕೆಂಬ ಬೇಡಿಕೆ ಹೆಚ್ಚಿದೆ.
ಮೇಲ್ದರ್ಜೆಗೇರಿಸಿ ಸರ್ಕಾರದ ಆದೇಶ
ಕಲ್ಯಾಣ ಕರ್ನಾಟಕ ಸಂಪೂರ್ಣ ಆರೋಗ್ಯ ಅಭಿವೃದ್ಧಿ ಯೋಜನೆಯಡಿ ಸಿಂಧನೂರು ತಾಲೂಕು ಆಸ್ಪತ್ರೆಯನ್ನು 100 ಹಾಸಿಗೆಯಿಂದ 200 ಹಾಸಿಗೆಗಳ ಜಿಲ್ಲಾಮಟ್ಟದ ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿಸಿ, ಸರ್ಕಾರದ ಆದೇಶ ಮತ್ತು ಸಂಪುಟದ ತೀರ್ಮಾನದಂತೆ, ಸರ್ಕಾರದ ಅಧೀನ ಕಾರ್ಯದರ್ಶಿಗಳು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ (ಆರೋಗ್ಯ 1&2) ಇವರು ದಿ:28-05-2025ರಂದು ಆದೇಶ ಹೊರಡಿಸಿದ್ದರು. ಇದರನ್ವಯ ಜಿಲ್ಲಾಮಟ್ಟದ ಆಸ್ಪತ್ರೆ ನಿರ್ಮಾಣ ಕಾರ್ಯ ಕಳೆದ ಕೆಲ ದಿನಗಳಿಂದ ಆರಂಭವಾಗಿದೆ.
ಜಿಲ್ಲಾಸ್ಪತ್ರೆ ನಿರ್ಮಾಣವಾದರೆ ಸಾರ್ವಜನಿಕರಿಗೆ ಅನುಕೂಲ
2027ರ ಸಿಂಧನೂರಿನ ಯೋಜಿತ ಜನಸಂಖ್ಯೆ 3,55,396 ಇದ್ದು, ತಾಲೂಕಿನಿಂದ ಹೆಚ್ಚಿನ ಚಿಕಿತ್ಸೆಗಾಗಿ ರೋಗಿಗಳನ್ನು ಶಿಫಾರಸ್ಸು ಮಾಡಬೇಕಾದರೆ ರಾಯಚೂರು ಮತ್ತು ಬಳ್ಳಾರಿ ನಗರದ ಜಿಲ್ಲಾ ಆಸ್ಪತ್ರೆಗಳು ಸುಮಾರು 90 ಕಿ.ಮೀ ಅಂತರದಲ್ಲಿರುವ ಕಾರಣ ಹೊರರೋಗಿ, ಒಳರೋಗಿಗಳ ವಿಭಾಗ ಮತ್ತು ಹೆರಿಗೆ ಪ್ರಮಾಣಗಳು ಸಿಂಧನೂರಿನಲ್ಲಿ ಹೆಚ್ಚಿಗೆ ದಾಖಲಾಗುತ್ತಿವೆೆ. ಇದರಿಂದ, ಸಿಂಧನೂರು ತಾಲೂಕಿನ ಸಾರ್ವಜನಿಕರಿಗೆ ಗುಣಮಟ್ಟದ ಮತ್ತು ಹೆಚ್ಚಿನ ಚಿಕಿತ್ಸೆಯನ್ನು ನೀಡಲು ಸಮಸ್ಯೆಯಾಗುತ್ತಿದೆ. ಸಿಂಧನೂರು ತಾಲೂಕಿನ ಸಾರ್ವಜನಿಕ ಆಸ್ಪತ್ರೆಯನ್ನು 200 ಹಾಸಿಗೆಗಳ ಜಿಲ್ಲಾ ಮಟ್ಟದ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸಿದಲ್ಲಿ ಸಿಂಧನೂರು ನಗರ ಮತ್ತು ತಾಲೂಕಿನ ಸುತ್ತಮುತ್ತಲಿನ ಗ್ರಾಮಗಳ ಸಾರ್ವಜನಿಕರಿಗೆ ಸಕಾಲಕ್ಕೆ ಉತ್ತಮ ಮತ್ತು ಪರಿಣಾಮಕಾರಿ ಚಿಕಿತ್ಸೆ ನೀಡಲು ಅನುಕೂಲವಾಗಲಿದೆ.
ಅತಿ ಹೆಚ್ಚು ವಾಹನಗಳ ಅಪಘಾತ
ಸಿಂಧನೂರು ಕಲ್ಯಾಣ ಕರ್ನಾಟಕ ಭಾಗದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರವಾಗಿದೆ. ನಗರದ ಮೂಲಕ 3 ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿಗಳು ಹಾದುಹೋಗುತ್ತಿದ್ದು, ಅತೀ ಹೆಚ್ಚು ವಾಹನಗಳ ಅಪಘಾತ ದಾಖಲಾಗಿವೆ. ಅಲ್ಲದೇ ನಗರದ ಸಾರ್ವಜನಿಕ ಆಸ್ಪತ್ರೆಗೆ 500ಕ್ಕೂ ಹೆಚ್ಚು ಹೊರ ರೋಗಿಗಳು ಹಾಗೂ 150ಕ್ಕೂ ಹೆಚ್ಚು ಒಳರೋಗಿಗಳು ಮತ್ತು ಅತೀ ಹೆಚ್ಚಿ ಅಪಘಾತ ಪ್ರಕರಣಗಳು ದಾಖಲಾಗುತ್ತಿವೆ. ಸಿಂಧನೂರು ತಾಲ್ಲೂಕಿನಲ್ಲಿ 1 ಲಕ್ಷ ಜನಸಂಖ್ಯೆ ಮಸ್ಕಿ ಕ್ಷೇತ್ರಕ್ಕೆ ಬರುವುದರಿಂದ ಸಾರ್ವಜನಿಕ ಆಸ್ಪತ್ರೆಯಲ್ಲಿ ಹಾಸಿಗೆಗಳ, ವೈದ್ಯರ ಹಾಗೂ ಉಪಕರಣಗಳ ಕೊರತೆ ಕಾಡುತ್ತಿದೆ.
ಆಡಳಿತಾತ್ಮಕ ಅನುಮೋದನೆ
ಮುಖ್ಯ ಇಂಜಿನಿಯರ್, ಆರೋಗ್ಯ ಮತ್ತು ಕುಟುಂಬ ಕಲಾಣ ಇಲಾಖೆರವರು, 2023-24ನೇ ಸಾಲಿನ ಲೋಕೋಪಯೋಗಿ ಇಲಾಖೆಯ ಏಕರೂಪ ದರಪಟ್ಟಿಯ ಅನ್ವಯ ಸಿಂಧನೂರು ತಾಲ್ಲೂಕು ಆಸ್ಪತ್ರೆಯನ್ನು 200 ಹಾಸಿಗೆಗಳ ಸಾಮರ್ಥ್ಯಕ್ಕೆ ಮೇಲ್ದರ್ಜೆಗೇರಿಸಲು ರೂ.2875.00 ಅಂದಾಜು ಪಟ್ಟಿಗೆ ಆಡಳಿತಾತ್ಮಕ ಅನುಮೋದನೆಗಾಗಿ ಪ್ರಸ್ತಾಪಿಸಿರುತ್ತಾರೆ. ಇದಕ್ಕೆ ಆರ್ಥಿಕ ಇಲಾಖೆ ಸಹಮತಿ ನೀಡಿದೆ.
ಕೆಕೆಆರ್‌ಡಿಬಿ ಅನುದಾನ
ಸಿಂಧನೂರು ತಾಲ್ಲೂಕು ಆಸ್ಪತ್ರೆಯನ್ನು 100 ಹಾಸಿಗೆಗಳಿಂದ 200 ಹಾಸಿಗೆಗಳ ಜಿಲ್ಲಾ ಮಟ್ಟದ ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿಸಲು ಹಾಗೂ ಈ ಆಸ್ಪತ್ರೆಯ ಕಾಮಗಾರಿಯ ರೂ.28,75,00,032.00 ಗಳ ಅಂದಾಜು ಪಟ್ಟಿಗೆ ಆಡಳಿತಾತ್ಮಕ ಅನುಮೋದನೆ ನೀಡಲು ಮತ್ತು ಸಿಂಧನೂರು ಜಿಲ್ಲಾ ಮಟ್ಟದ ಆಸ್ಪತ್ರೆಗೆ ಸೃಜಿಸಲಾಗುವ ಹೆಚ್ಚುವರಿ ಹುದ್ದೆಗಳಿಗೆ ತಗಲುವ ವೆಚ್ಚವನ್ನು ಮೊದಲ 3 ವರ್ಷ ಕೆ.ಕೆ.ಆರ್.ಡಿ.ಬಿ. ಅನುದಾನದಿಂದ ಭರಿಸಲು ಹಾಗೂ ನಂತರ ರಾಜ್ಯ ಸರ್ಕಾರದ ಅನುದಾನದಿಂದ ಭರಿಸಲು ತೀರ್ಮಾನಿಸಲಾಗಿದೆ.

ಕೋಟ್
ಸಿಂಧನೂರು ಪ್ರಮುಖ ವಾಣಿಜ್ಯ ಕೇಂದ್ರವಾಗಿರುವುದಷ್ಟೇ ಅಲ್ಲದೇ, ಸುತ್ತಮುತ್ತಲ ಜಿಲ್ಲಾ ಕೇಂದ್ರಗಳಿಂದ ಅಂದಾಜು 90 ಕಿ.ಮೀ ಅಂತರದಲ್ಲಿರುವುದರಿಂದ ತುರ್ತು ಸಂದರ್ಭದಲ್ಲಿ ಜನಸಾಮಾನ್ಯರಿಗೆ ಅಗತ್ಯ ಚಿಕಿತ್ಸೆ ದೊರೆಯದೆ ಸಮಸ್ಯೆ ಅನುಭವಿಸುತ್ತಿದ್ದಾರೆ. ಇನ್ನು ಬಡ ಮತ್ತು ಮಧ್ಯ ವರ್ಗದ ಜನರು ಅನಾರೋಗ್ಯಕ್ಕೆ ಸೂಕ್ತ ಚಿಕಿತ್ಸೆ ಪಡೆಯಲು ಆರ್ಥಿಕ ಸಮಸ್ಯೆ ಎದುರಿಸುತ್ತಿದ್ದಾರೆ. ಐಪಿಎಚ್‌ಎಸ್ ಮಾನದಂಡಗಳ ಅನ್ವಯ ಗುಣಮಟ್ಟದ ಮತ್ತು ಪರಿಣಾಮಕಾರಿ ಚಿಕಿತ್ಸೆ ಒದಗಿಸಲು ಸಿಂಧನೂರು ಜಿಲ್ಲಾಮಟ್ಟದ ಆಸ್ಪತ್ರೆ ಅತ್ಯಂತ ತುರ್ತು ಅಗತ್ಯವಾಗಿದೆ. ಈ ನಡುವೆ ಆಸ್ಪತ್ರೆಯ ನಿರ್ಮಾಣ ಕಾರ್ಯವನ್ನು ವೈಜ್ಞಾನಿಕ ಮಾನದಂಡಗಳ ಅನ್ವಯ ಅತ್ಯಂತ ವ್ಯವಸ್ಥಿತವಾಗಿ ಮತ್ತು ಮುಂದಿನ 30 ವರ್ಷಗಳ ಅಂದಾಜು ಗಮನದಲ್ಲಿಟ್ಟುಕೊಂಡು ಸುಸಜ್ಜಿತವಾಗಿ ನಿರ್ಮಿಸಬೇಕು.
– ನಾಗರಾಜ ಪೂಜಾರ್, ಎಐಸಿಸಿಟಿಯು ರಾಜ್ಯ ಸಹ ಕಾರ್ಯದರ್ಶಿ, ಸಿಂಧನೂರು.

