ಲೋಕಲ್ ನ್ಯೂಸ್ : ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಫೆಬ್ರವರಿ 25
ಸಿಂಧನೂರು-ಮಸ್ಕಿ ಮಾರ್ಗದ 150ಎ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಪರ್ಕ ಸೇತುವೆಗಳ (ಬ್ರಿಡ್ಜ್) ನಿರ್ಮಾಣ ಕಾಮಗಾರಿಗಳು ಕುಂಟುತ್ತಾ ಸಾಗಿದ್ದು, ವಾಹನ ಚಾಲನೆಗೆ ಚಾಲಕರು ಅಡೆತಡೆ ಅನುಭವಿಸುತ್ತಿದ್ದಾರೆ.
ನಗರದ ಹೊರವಲಯದಲ್ಲಿರುವ ಅರಿಹಂತ್ಮಿಲ್ನಿಂದ ಮಸ್ಕಿ ತಾಲೂಕಿನ ಗುಡದೂರು ಗ್ರಾಮದವರೆಗಿನ ರಸ್ತೆ ಮಾರ್ಗದಲ್ಲಿ ಹಲವು ಸೇತುವೆಗಳ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಆದರೆ ಇಲ್ಲಿಯವರೆಗೂ ಅರಿಹಂತ್ ಮಿಲ್ ಬಳಿಯಿರುವ ಬ್ರಿಡ್ಜ್ ಮತ್ತು ಗುಡದೂರು ಗ್ರಾಮದ ಹತ್ತಿರದ ಸಂಪರ್ಕ ಸೇತುವೆ ಮಾತ್ರ ಪೂರ್ಣಗೊಂಡಿದ್ದು, ಇನ್ನುಳಿದ ಸೇತುವೆಗಳ ನಿರ್ಮಾಣ ಕಾರ್ಯ ತೆವಳುತ್ತಾ ಸಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಗುತ್ತಿಗೆದಾರರ ಬೇಜವಾಬ್ದಾರಿ, ವಾಹನ ಚಾಲಕರಿಗೆ ಪ್ರಾಣ ಸಂಕಟ
ಸೇತುವೆಗಳ ನಿರ್ಮಾಣದ ಹೊಣೆ ಹೊತ್ತ ಗುತ್ತಿಗೆದಾರರು ಹಾಗೂ ಮೇಲ್ವಿಚಾರಣೆ ನಡೆಸುತ್ತಿರುವ ಎನ್ಎಚ್ಎಐ ಅಧಿಕಾರಿಗಳ ಬೇಜವಾಬ್ದಾರಿಯಿಂದ ಸೇತುವೆಗಳ ನಿರ್ಮಾಣ ಕಾರ್ಯ ವಿಳಂಬವಾಗುತ್ತಿದೆ. ಇದರಿಂದ ಸುಗಮ ಸಂಚಾರಕ್ಕೆ ಸಮಸ್ಯೆಯಾಗಿದೆ. ಸೇತುವೆ ನಿರ್ಮಾಣ ಕಾರ್ಯ ವಿಳಂಬವಾಗಿರುವದರಿಂದ ಅಪಘಾತಗಳು ಹೆಚ್ಚುತ್ತಿದ್ದು, ಚಾಲಕರು ಪ್ರಾಣ ಸಂಕಟ ಅನುಭವಿಸುತ್ತಿದ್ದಾರೆ.

ಅಪಘಾತಕ್ಕೆ ಆಹ್ವಾನಿಸುತ್ತಿರುವ ತಾತ್ಕಾಲಿಕ ಸೇತುವೆಗಳು
ಸೇತುವೆ ನಿರ್ಮಾಣ ಕಾರ್ಯದ ಹಿನ್ನೆಲೆಯಲ್ಲಿ ತಾತ್ಕಾಲಿಕ ಸೇತುವೆಗಳನ್ನು ನಿರ್ಮಿಸಲಾಗಿದ್ದು, ಈ ಸೇತುವೆಗಳು ಅವೈಜ್ಞಾನಿಕವಾಗಿ ನಿರ್ಮಾಣವಾಗಿರುವುದರಿಂದ ಲಾರಿ, ಬಸ್ಸು ಸೇರಿದಂತೆ ಸರಕು ಸಾಗಣೆ ವಾಹನಗಳು ಚಾಲನೆಗೆ ಸವಾಲು ಎದುರಾಗಿದೆ. ಕಾಮಗಾರಿ ನಡೆಯುವ ಪ್ರದೇಶದಲ್ಲಿ ಮುನ್ನೆಚ್ಚರಿಕೆ ಫಲಕಗಳನ್ನು ಅಳವಡಿಸದೇ ಇರುವುದರಿಂದ ರಾತ್ರಿ ಸಮಯದಲ್ಲಿ ದ್ವಿಚಕ್ರ ವಾಹನ ಸವಾರರು ಸೇರಿದಂತೆ ದೊಡ್ಡ ವಾಹನಗಳು ಅಪಘಾತಕ್ಕೆ ಈಡಾಗುತ್ತಿವೆ ಎಂದು ವಾಹನ ಚಾಲಕರು ದೂರುತ್ತಾರೆ.

ಚುರುಕು ಪಡೆಯದ ಕಾಮಗಾರಿ
ಕಲ್ಲೂರು ಬಳಿಯ ಸೇತುವೆ, ಬಸಾಪುರ, ಮುದ್ದಾಪುರ, ಎಲೆಕೂಡ್ಲಿಗಿ ಬಳಿಯ ಸೇತುವೆಗಳು ಇನ್ನೂ ನಿರ್ಮಾಣ ಹಂತದಲ್ಲಿದ್ದು, ಚುರುಕು ಪಡೆದಿಲ್ಲ. ಹಾಗಾಗಿ ವಾಹನಗಳು ತಾತ್ಕಾಲಿಕ ಸೇತುವೆಯಲ್ಲೇ ಸಾಗುತ್ತಿವೆ. ಕಳೆದ ಮಳೆಗಾಲದಲ್ಲಿ ಕಲ್ಲೂರು ಬಳಿ ಇರುವ ತಾತ್ಕಾಲಿಕ ಸೇತುವೆ ಕೊಚ್ಚಿಹೋಗಿ ರಸ್ತೆ ಸಂಚಾರವೇ ಬಂದ್ ಆಗಿತ್ತು. ಆದರೆ ಈ ಬಾರಿ ಮಳೆಗಾಲ ಬರುವಷ್ಟರಲ್ಲಿ ಈ ಕಾಮಗಾರಿ ಪೂರ್ಣಗೊಳ್ಳುವುದು ಸಾಧ್ಯವೇ ಎಂದು ಸಾರ್ವಜನಿಕರು ಅನುಮಾನ ವ್ಯಕ್ತಪಡಿಸುತ್ತಾರೆ.

