ರಾಜಕೀಯ ವಿಶ್ಲೇಷಣೆ: ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಮಾರ್ಚ್ 14
ಲೋಕಸಭಾ ಚುನಾವಣೆ ದಿನದಿಂದ ದಿನಕ್ಕೆ ಕಾವೇರುತ್ತಿದ್ದು, ಬಿಜೆಪಿ ಟಿಕೆಟ್ ಘೋಷಣೆಯ ನಂತರ ಕಾಂಗ್ರೆಸ್ ಅಭ್ಯರ್ಥಿ ಯಾರೆನ್ನುವುದು ಇನ್ನೂ ಸ್ಪಷ್ಟವಾಗಿಲ್ಲ. ಬಿಜೆಪಿ ಹತ್ತು ಹಲವು ಲೆಕ್ಕಾಚಾರಗಳನ್ನು ಮಾಡಿ ಕೊನೆಗೆ ಕುಷ್ಟಗಿಯ ಮಾಜಿ ಶಾಸಕ ಕೆ.ಶರಣಪ್ಪ ಅವರ ಪುತ್ರ ಡಾ.ಬಸವರಾಜ ಕ್ಯಾವಟರ್ ಅವರಿಗೆ ಟಿಕೆಟ್ ಘೋಷಿಸಿದ ಬೆನ್ನಲ್ಲೇ ಕಾಂಗ್ರೆಸ್ ವಲಯದಲ್ಲಿ ಯಾರನ್ನು ಅಭ್ಯರ್ಥಿ ಮಾಡಿದರೆ ಪಕ್ಷಕ್ಕೆ ಅನುಕೂಲ ಎನ್ನುವ ಚರ್ಚೆಗಳು ಶುರುವಾಗಿವೆ. ಹಾಲಿ ಸಂಸದ ಬಿಜೆಪಿಯ ಸಂಗಣ್ಣ ಕರಡಿ ಅವರಿಗೆ ಈ ಬಾರಿ ಟಿಕೆಟ್ ಕಟ್ ಮಾಡಿದ ಬಿಜೆಪಿ ಹೈಕಮಾಂಡ್, ಅದೇ ಸಮುದಾಯದ ಮತ್ತೊಬ್ಬ ಅಭ್ಯರ್ಥಿಗೆ ಮಣೆ ಹಾಕುವ ಮೂಲಕ ಮುನಿಸು ತಣ್ಣಗಾಗಿಸಲು ಯತ್ನಿಸಿದೆ. ಈ ನಡುವೆ ಕಳೆದ ಎರಡು ಅವಧಿಗೆ ಸಂಸದರಾಗಿದ್ದ ಸಂಗಣ್ಣ ಕರಡಿ ಅವರು ಮೂರನೇ ಬಾರಿಯೂ ಟಿಕೆಟ್ ಗಿಟ್ಟಿಸಿಕೊಳ್ಳಲಿದ್ದಾರೆನ್ನುವ ವಿಶ್ವಾಸ ಕೆಲ ಮುಖಂಡರಲ್ಲಿತ್ತು, ಆದರೆ ಪಕ್ಷದ ಹೈಕಮಾಂಡ್ ಹೊಸಮುಖವನ್ನು ಪರಿಚಯಿಸುವ ಮೂಲಕ ಅಚ್ಚರಿ ಮೂಡಿಸಿದೆ. ಕಳೆದ ಕೊಪ್ಪಳ ಕ್ಷೇತ್ರದ ವಿಧಾನಸಭಾ ಚುನಾವಣೆಯಲ್ಲಿ ಸಂಗಣ್ಣ ಕರಡಿ ಅವರ ಸೊಸೆ ಬಿಜೆಪಿಯಿಂದ ಸ್ಪರ್ಧಿಸಿ ಕಾಂಗ್ರೆಸ್ ಅಭ್ಯರ್ಥಿಯ ಎದುರು ಪರಾಭವಗೊಂಡಿದ್ದರು. ಈ ನಡುವೆ ಲೋಕಸಭಾ ಚುನಾವಣೆಯಲ್ಲಿ ಸಂಗಣ್ಣ ಕರಡಿ ಅವರಿಗೆ ಬಿಜೆಪಿ ಟಿಕೆಟ್ ನಿರಾಕರಿಸಿರುವುದು ಇದೇ ಮೊದಲ ಬಾರಿಗೆ ರಾಜಕೀಯ ಪಡಸಾಲೆಯಿಂದ ಕರಡಿ ಕುಟುಂಬ ಹಿನ್ನಡೆ ಅನುಭವಿಸದಂತಾಗಿದೆ ಎಂದು ರಾಜಕೀಯ ವಲಯದಲ್ಲಿ ಚರ್ಚೆಗಳಾಗುತ್ತಿವೆ.
ಕೈ ಟಿಕೆಟ್ ಗುಟ್ಟು : ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ಒಂದು ಬಾರಿ ಬಸವರಾಜ ಹಿಟ್ನಾಳ್, ಮತ್ತೊಂದು ಬಾರಿ ರಾಜಶೇಖರ ಹಿಟ್ನಾಳ್ ಅವರು ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಸೋಲನುಭವಿಸಿದ್ದಾರೆ. ಹೀಗಾಗಿ ಅನುಕಂಪದ ಅಲೆ ಹೊಂದಿದೆ ಎಂದು ಹೇಳಲಾಗುತ್ತಿರುವ ಹಿಟ್ನಾಳ್ ಕುಟುಂಬದ ರಾಜಶೇಖರ ಹಿಟ್ನಾಳ್ ಅವರು ತಮಗೆ ಈ ಬಾರಿ ಟಿಕೆಟ್ ದೊರೆಯಲಿದೆ ಎಂಬ ವಿಶ್ವಾಸ ಹೊಂದಿದ್ದಾರೆ ಎಂದು ತಿಳಿದುಬಂದಿದೆ. ಈ ನಡುವೆ ಸಿಎಂ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಅವರು ಕಳೆದ ಬಾರಿ ಕಡಿಮೆ ಅಂತರದಲ್ಲಿ ಸೋತಿದ್ದು, ಈ ಬಾರಿ ಪಕ್ಷದ ತೀರ್ಮಾನಕ್ಕಾಗಿ ತುದಿಗಾಲ ಮೇಲೆ ನಿಂತಿದ್ದಾರೆಂದು ಹೇಳಲಾಗುತ್ತಿದೆ. ಮಾಜಿ ಸಚಿವ ಹಾಗೂ ಕುಷ್ಟಗಿ ಕ್ಷೇತ್ರದ ಮಾಜಿ ಶಾಸಕ ಅಮರೇಗೌಡ ಬಯ್ಯಾಪುರ ಅವರೂ ಸಹ ಕೊಪ್ಪಳ ಲೋಕಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದು, ತಮ್ಮ ಹಿರಿತನ ಮತ್ತು ಕ್ಷೇತ್ರದ ವ್ಯಾಪ್ತಿಯಲ್ಲಿನ ಮತದಾರರ ಮನದಾಳವನ್ನು ಅರಿತು ಪಕ್ಷದ ಹೈಕಮಾಂಡ್ ಟಿಕೆಟ್ ನೀಡುವ ಮೂಲಕ ಮನ್ನಣೆ ನೀಡಲಿದೆ ಎನ್ನುವ ವಿಶ್ವಾಸ ಹೊಂದಿದ್ದು, ತಮ್ಮದೇ ಆದ ಧಾಟಿಯಲ್ಲಿ ಹೈಕಮಾಂಡ್ ಮೇಲೆ ಒತ್ತಡ ತಂತ್ರ ಮುಂದುವರಿಸಿದ್ದಾರೆನ್ನುವ ಮಾಹಿತಿ ಇದೆ. ಇನ್ನು ಕಳೆದ ಬಾರಿ ಸಿಂಧನೂರು ವಿಧಾನಸಭಾ ಕ್ಷೇತ್ರದ ಟಿಕೆಟ್‌ಗಾಗಿ ಪಟ್ಟು ಹಿಡಿದಿದ್ದ ಬಸನಗೌಡ ಬಾದರ್ಲಿ ಅವರು ಕೊಪ್ಪಳ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದು, ರಾಷ್ಟ್ರೀಯ ಮತ್ತು ರಾಜ್ಯ ಮುಖಂಡರಿಗೆ ಒತ್ತಡ ಹಾಕುವ ಮೂಲಕ ತಮಗೆ ಪಕ್ಷದ ಟಿಕೆಟ್ ನೀಡುವಂತೆ ಮನವಿ ಮಾಡಿದ್ದಾರೆಂದು ಹೇಳಲಾಗುತ್ತಿದೆ. ಹೀಗಾಗಿ ಮೂವರು ಅಭ್ಯರ್ಥಿಗಳಲ್ಲದೇ ಇನ್ನಿತರೆ ಕೆಲವರು ಟಿಕೆಟ್‌ಗಾಗಿ ಇನ್ನಿಲ್ಲದ ಕಸರತ್ತು ನಡೆಸಿದ್ದು, ಅಂತಿಮವಾಗಿ ಕಾಂಗ್ರೆಸ್ ಹೈಕಮಾಂಡ್ ಯಾರಿಗೆ ಮಣೆ ಹಾಕುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ.