ಲೋಕಲ್ ನ್ಯೂಸ್: ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಡಿಸೆಂಬರ್ 4
ಭಾರತ ಕಮ್ಯುನಿಸ್ಟ್ ಪಕ್ಷ ಸಂಸ್ಥಾಪನೆಗೊಂಡು 100 ವರ್ಷಗಳಾದ ಹಿನ್ನೆಲೆಯಲ್ಲಿ ರಾಜ್ಯದಾದ್ಯಂತ ಶತಮಾನೋತ್ಸವ ಜಾಥಾ ಹಮ್ಮಿಕೊಳ್ಳಲಾಗಿದ್ದು, ಡಿ.6ರಂದು ಜಾಥಾ ನಗರಕ್ಕೆ ಆಗಮಿಸಲಿದೆ. ಅಂದು ಎಪಿಎಂಸಿಯ ಸಮುದಾಯ ಭವನದಲ್ಲಿ ಬೆಳಿಗ್ಗೆ 11.30ಕ್ಕೆ ಬಹಿರಂಗ ಸಭೆ ಹಮ್ಮಿಕೊಳ್ಳಲಾಗಿದೆ ಎಂದು ಸಿಪಿಐ ಜಿಲ್ಲಾ ಕಾರ್ಯದರ್ಶಿ ಚಂದ್ರಶೇಖರ ಕ್ಯಾತ್ನಟ್ಟಿ ಹಾಗೂ ಎಐಟಿಸಿಯುಸಿ ಜಿಲ್ಲಾಧ್ಯಕ್ಷ ಭಾಷುಮಿಯಾ ಅವರು ತಿಳಿಸಿದ್ದಾರೆ.
ಈ ಕುರಿತು ಗುರುವಾರ ಜಂಟಿ ಪತ್ರಿಕಾ ಪ್ರಕಟಣೆ ನೀಡಿರುವ ಅವರು, “ಭಾರತ ಕಮ್ಯುನಿಸ್ಟ್ ಪಕ್ಷ 1925ರಲ್ಲಿ ಸಂಸ್ಥಾಪನೆಗೊಂಡಿದ್ದು, ಇದೇ ಡಿ.26ಕ್ಕೆ 100 ವರ್ಷಗಳಾಗಲಿವೆ. ಪಕ್ಷದ ಶತಮಾನದ ಪಯಣದಲ್ಲಿ ಕಾರ್ಮಿಕರು, ರೈತರು, ಮಹಿಳೆಯರು, ಯುವಜನರು, ದಮನಿತ ಸಮುದಾಯಗಳು ಸೇರಿದಂತೆ ಎಲ್ಲ ಜನ ಸಮುದಾಯದ ದುಡಿಯುವ ವರ್ಗದ ಪರ ದನಿ ಎತ್ತುತ್ತ ಅವರ ಹಕ್ಕುಬಾಧ್ಯತೆಗಳಿಗಾಗಿ ಪ್ರಜಾಸತ್ತಾತ್ಮಕ ಮಾರ್ಗದಲ್ಲಿ ನಿರಂತರ ಹೋರಾಟ ನಡೆಸುತ್ತ ಬಂದಿದೆ. ಸಂವಿಧಾನದ ಆಶಯಗಳಿಗೆ ಕಟಿಬದ್ಧವಾಗಿ, ಪ್ರಜಾತಂತ್ರದ ಮೌಲ್ಯಗಳ ಉಳಿವಿಗಾಗಿ ಪಕ್ಷ ಶ್ರಮಿಸುತ್ತಿದೆ. ಫ್ಯಾಸಿಸ್ಟ್ ಪ್ರಭುತ್ವಗಳ ವಿರುದ್ಧ ಜನರ ಆಶೋತ್ತರಗಳನ್ನು ಮುನ್ನೆಲೆಗೆ ತರುವಲ್ಲಿ ಪಕ್ಷದ ಪಾತ್ರ ಸ್ಮರಣಾರ್ಹ” ಎಂದು ಹೇಳಿದ್ದಾರೆ.
ಜಾಥಾ ನಿಮಿತ್ತ ಬಹಿರಂಗ ಸಭೆ
ಶತಮಾನೋತ್ಸವ ಜಾಥಾವನ್ನು ಸಿಪಿಐ ರಾಜ್ಯ ಕಾರ್ಯದರ್ಶಿ ಸಾಥಿ ಸುಂದರೇಶ್ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಶಾಸಕ ಹಂಪನಗೌಡ ಬಾದರ್ಲಿ ಭಾಗವಹಿಸುವರು. ಅತಿಥಿಗಳಾಗಿ ರಾಜ್ಯ ಮಂಡಳಿ ಸದಸ್ಯ ಡಾ.ಜನಾರ್ಧನ್, ಸಹ ಕಾರ್ಯದರ್ಶಿ ಡಾ.ಎಚ್.ಎಂ.ಸAತೋಷ್, ಎಐಟಿಯುಸಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀಶೈಲರೆಡ್ಡಿ, ಸಿಪಿಐ(ಎಂಎಲ್) ಮಾಸ್‌ಲೈನ್ ರಾಜ್ಯ ಕಾರ್ಯದರ್ಶಿ ಡಿ.ಎಚ್.ಪೂಜಾರ್, ಸಿಪಿಐ(ಎಂ) ತಾಲೂಕು ಕಾರ್ಯದರ್ಶಿ ಬಸವಂತರಾಯಗೌಡ ಕಲ್ಲೂರು, ಪ್ರಗತಿಪರ ಸಂಘಟನೆಗಳ ಒಕ್ಕೂಟದ ಸಂಚಾಲಕ ಚಂದ್ರಶೇಖರ ಗೊರಬಾಳ, ಸಿಪಿಐ(ಎಂಎಲ್) ಲಿಬರೇಶನ್‌ನ ರಾಜ್ಯ ಸಮಿತಿ ಸದಸ್ಯ ನಾಗರಾಜ ಪೂಜಾರ್, ಡಿಎಸ್‌ಎಸ್ (ಮೂರ್ತಿ ಬಣ) ಜಿಲ್ಲಾ ಸಂಚಾಲಕ ಅಶೋಕ ನಂಜಲದಿನ್ನಿ, ಡಿಎಸ್‌ಎಸ್ (ಸಾಗರ ಬಣ) ಜಿಲ್ಲಾ ಸಂಚಾಲಕ ಮಂಜುನಾಥ ಗಾಂಧಿನಗರ, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಮುಖಂಡರಾದ ಅಮೀನ್‌ಪಾಷಾ ದಿದ್ದಿಗಿ, ಶರಣಪ್ಪ ಮರಳಿ ಭಾಗವಹಿಸುವರು ಎಂದು ಅವರು ತಿಳಿಸಿದ್ದಾರೆ.
