ಕೊಪ್ಪಳ ಲೋಕಸಭೆ ಕ್ಷೇತ್ರ : ಅನ್ಸಾರಿ ನಿವಾಸಕ್ಕೆ ಸಿಎಂ ದಿಢೀರ್ ಭೇಟಿ, ಚರ್ಚೆ

Spread the love

ರಾಜಕೀಯ ವಿಶ್ಲೇಷಣೆ: ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಮಾರ್ಚ್ 3
ಲೋಕಸಭಾ ಸಾರ್ವತ್ರಿಕ ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ ಕೊಪ್ಪಳ ಕ್ಷೇತ್ರದ ಕಾಂಗ್ರೆಸ್ ವಲಯದಲ್ಲಿ ಚುರುಕಿನ ಬೆಳವಣಿಗೆಗಳು ನಡೆಯುತ್ತಿದ್ದು, ಸಣ್ಣಪುಟ್ಟ ಕಾರಣಕ್ಕೆ ಮುನಿಸಿಕೊಂಡಿರುವ ನಾಯಕರನ್ನು ಒಂದೂಗೂಡಿಸಲು ಹೈಕಮಾಂಡ್ ಸೇರಿದಂತೆ ಖುದ್ದು ಸಿಎಂ ಸಿದ್ದರಾಮಯ್ಯ ಅವರೇ ಮುಂದಾಗಿರುವುದು ಕಾಂಗ್ರೆಸ್ ವಲಯದಲ್ಲಿ ಉತ್ಸಾಹಕ್ಕೆ ಕಾರಣವಾಗಿದೆ. ಕನಕಗಿರಿ ಉತ್ಸವದಲ್ಲಿ ಪಾಲ್ಗೊಂಡಿದ್ದ ಸಿಎಂ ಸಿದ್ದರಾಮಯ್ಯ ಅವರು ಮಾಜಿ ಸಚಿವ ಹಾಗೂ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪರಾಭವಗೊಂಡ ಗಂಗಾವತಿ ಕ್ಷೇತ್ರದ ಅಭ್ಯರ್ಥಿ ಇಕ್ಬಾಲ್ ಅನ್ಸಾರಿ ಅವರನ್ನು ಅವರ ನಿವಾಸದಲ್ಲಿ ಭೇಟಿಯಾಗಿರುವುದು ಇದಕ್ಕೆ ಸ್ಪಷ್ಟ ನಿದರ್ಶನವಾಗಿದೆ ಎಂಬ ಮಾತುಗಳು ಕೇಳಿಬಂದಿವೆ.

Namma Sindhanuru Click For Breaking & Local News

ಇಕ್ಬಾಲ್ ಅನ್ಸಾರಿ ಮನವೊಲಿಕೆ:
ಮಾಜಿ ಸಚಿವ ಹಾಗೂ ಕೊಪ್ಪಳ ಕ್ಷೇತ್ರದಲ್ಲಿ ಪ್ರಭಾವಿ ನಾಯಕರಾಗಿರುವ ಇಕ್ಬಾಲ್ ಅನ್ಸಾರಿ ಅವರು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪರಾಭವಗೊಂಡಿದ್ದರು. ತಮ್ಮ ಸೋಲಿಗೆ ಪಕ್ಷದ ಕೆಲ ನಾಯಕರ ವ್ಯವಸ್ಥಿತ ಒಪ್ಪಂದವೇ ಕಾರಣ ಎಂದು ಅಂದಾಜಿಸಿ ಹಲವರೊಂದಿಗೆ ಮುನಿಸಿಕೊಂಡಿದ್ದರು. ಇದು ಇತ್ತೀಚಿನ ದಿನಗಳಲ್ಲಿ ಬಹಿರಂಗಗೊAಡು ರಾಜಕೀಯ ವಲಯದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿತ್ತು. ಕೊಪ್ಪಳ ಲೋಕಸಭಾ ಕ್ಷೇತ್ರ ೮ ವಿಧಾನಸಭೆ ಕ್ಷೇತ್ರಗಳ ವ್ಯಾಪ್ತಿಯನ್ನು ಹೊಂದಿದ್ದು, ೬ರಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ; ಇನ್ನುಳಿದ ಎರಡು ಕಡೆಗಳಲ್ಲಿ ಒಂದು ಕಡೆ ಬಿಜೆಪಿ ಇನ್ನೊಂದು ಕಡೆ ಕೆಆರ್‌ಪಿಪಿ ಪಕ್ಷದ ಅಭ್ಯರ್ಥಿಗಳು ಜಯ ಸಾಧಿಸಿದ್ದಾರೆ. ಇಂತಹ ಸಂದರ್ಭದಲ್ಲಿ ಅನ್ಸಾರಿಯವರು ಬಹಿರಂಗವಾಗಿ ಮುನಿಸಿ ತೋಡಿಕೊಳ್ಳುತ್ತಿರುವುದು ಪಕ್ಷದ ವೀಕ್ಷಕರು ಹಾಗೂ ಮುಖಂಡರಿAದ ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಮನವೊಲಿಕೆಗೆ ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ.
ಮುಖ್ಯಮಂತ್ರಿಗಳ ಮಾತಿಗೆ ಮಣಿದ ಮಾಜಿ ಸಚಿವ:
ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಭಿನ್ನಾಭಿಪ್ರಾಯಗಳನ್ನು ಮರೆತು, ಪಕ್ಷವನ್ನು ಬಲಪಡಿಸುವ ಮೂಲಕ ಚುನಾವಣೆಯಲ್ಲಿ ಕೊಪ್ಪಳ ಲೋಕಸಭಾ ಕ್ಷೇತ್ರಕ್ಕೆ ಪಕ್ಷದ ಹೈಕಮಾಂಡ್ ಘೋಷಿಸುವ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡು ಬರುವ ನಿಟ್ಟಿನಲ್ಲಿ ಕೆಲಸ ಮಾಡುವುದು ಸೇರಿದಂತೆ ಇನ್ನಿತರೆ ವಿಷಯಗಳ ಬಗ್ಗೆ ಸಿಎಂ ಮತ್ತು ಇಕ್ಬಾಲ್ ಅನ್ಸಾರಿ ಅವರ ನಡುವೆ ಚರ್ಚೆಯಾಗಿದ್ದು, ಸಿಎಂ ಅವರ ಮಾತಿಗೆ ಅನ್ಸಾರಿಯವರು ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಪಕ್ಷದ ಕಾರ್ಯಚಟುವಟಿಕೆಯಲ್ಲಿ ಸಕ್ರಿಯವಾಗಿ ಭಾಗವಹಿಸುವುದಾಗಿ ಹೇಳಿದ್ದಾರೆಂದು ಮೂಲಗಳು ತಿಳಿಸಿವೆ.

Namma Sindhanuru Click For Breaking & Local News

ದಾರಿ ಸುಗಮ:
ರಾಜ್ಯಸಭಾ ಚುನಾವಣೆಯಲ್ಲಿ ಗಂಗಾವತಿಯ ಎಂಎಲ್‌ಎ ಜನಾರ್ದನ ರೆಡ್ಡಿ ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲಿಸಿದ್ದು, ಬರುವ ಕೊಪ್ಪಳ ಲೋಕಸಭಾ ಚುನಾವಣೆಯಲ್ಲಿಯೂ ಇದರ ಲಾಭ ಕಾಂಗ್ರೆಸ್‌ಗೆ ದೊರೆಯಲಿದೆ ಎನ್ನುವ ಚರ್ಚೆಗಳಿದ್ದು, ಕೈ ಅಭ್ಯರ್ಥಿಯನ್ನು ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ಗೆಲ್ಲಿಸಿಕೊಂಡು ಬರುವ ನಿಟ್ಟಿನಲ್ಲಿ ಈಗಿನಿಂದಲೇ ದಾರಿ ಸುಗಮ ಮಾಡಿಕೊಳ್ಳುವ ಕೆಲಸ ನಡೆದಿದೆ ಎನ್ನುವ ಮಾತು ರಾಜಕೀಯ ಪಡಸಾಲೆಯಲ್ಲಿ ಕೇಳಿಬರುತ್ತಿದೆ. ಹೀಗಾಗಿ ಸ್ವಪಕ್ಷ ಕಾಂಗ್ರೆಸ್‌ನಲ್ಲಿನ ಅಸಮಾಧಾನಿತ ನಾಯಕರನ್ನು ಸಮಾಧಾನಪಡಿಸುವುದಲ್ಲದೇ ಇತರೆ ಪಕ್ಷದ ಮುಖಂಡರನ್ನು ಒಳಗೊಳಗೆ ಸೆಳೆಯಲು ಪಕ್ಷದ ಮುಖಂಡರು ತಂತ್ರಗಾರಿಕೆ ನಡೆಸುತ್ತಿದ್ದಾರೆನ್ನುವ ಚರ್ಚೆ ಚಾಲ್ತಿಯಲ್ಲಿದೆ.


Spread the love

Leave a Reply

Your email address will not be published. Required fields are marked *