ನಮ್ಮ ಸಿಂಧನೂರು, ಫೆಬ್ರವರಿ 13
ಸಿಂಧನೂರು ನಗರದಲ್ಲಿ ಯಾರದೇ ಮದುವೆ ಇರಲಿ, ಅರತಕ್ಷತೆ ಇರಲಿ ಈತ ಹಾಜರ್ ! ಅಷ್ಟೇ ಅಲ್ಲ ಯಾವುದೇ ಸಣ್ಣಪುಟ್ಟ ಶುಭ ಸಮಾರಂಭದಲ್ಲೂ ಈತನ ಓಡಾಟ ಸರ್ವೆ ಸಾಮಾನ್ಯ !! ಈತ ಬೇರಾರೂ ಅಲ್ಲ “ಸಿಂಧನೂರಿನ ವಾಟರ್ ಮ್ಯಾನ್” ಖ್ಯಾತಿಯ ಚಿದಾನಂದ !!! ಮದುವೆ ಬಡವರದ್ದಾಗಲಿ-ಶ್ರೀಮಂತರದ್ದಾಗಲಿ ಅಥವಾ ಯಾವುದೇ ಸಮುದಾಯದವರದ್ದಾಗಿರಲಿ.. ಚಿದಾನಂದನ ಹಾಜರಾತಿ ಗ್ಯಾರಂಟಿ. ಉಪಹಾರ, ಊಟ ಮಾಡಿ ಬಂದವರಿಗೆ ನೀರು ವಿತರಿಸುವುದೇ ಈತನ ಕಾಯಕ. ಬೆಳಿಗ್ಗೆಯಿಂದ ಕಾರ್ಯಕ್ರಮ ಮುಗಿಯುವವರೆಗೂ ನೀರು ವಿತರಿಸುವ ಈತ ದಣಿವಿಲ್ಲದ ಶ್ರಮಜೀವಿ. ಯಾರದ್ದೇ ಮದುವೆಯಿರಲಿ ಅದು ತಮ್ಮ ಕುಟುಂಬದವರದ್ದೇ ಎನ್ನುವಂತೆ ಕಾಳಜಿ ಮತ್ತು ನಿಷ್ಠೆಯಿಂದ ಕೆಲಸ ಮಾಡುವ ಮೂಲಕ ಮೆಚ್ಚುಗೆ ಗಳಿಸಿದ್ದಾರೆ.
ಕಳೆದ ಒಂದು ದಶಕಕ್ಕೂ ಹೆಚ್ಚು ಕಾಲದಿಂದಲೂ ಮದುವೆ, ಆರತಕ್ಷತೆ, ಜನ್ಮದಿನ, ನಾಮಕರಣ, ಮದುವೆ ವಾರ್ಷಿಕೋತ್ಸವ, ಗೃಹಪ್ರವೇಶ ಸೇರಿದಂತೆ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ನೀರು ವಿತರಣೆ ಉಸ್ತುವಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸುವ ಮೂಲಕ ಆಯಾ ಕುಟುಂಬದವರು ಹಾಗೂ ಆಯೋಜಕರ ಮನಗೆದ್ದಿದ್ದಾರೆ. ಬಹಳಷ್ಟು ಮದುವೆ ಕಾರ್ಯಕ್ರಮಗಳಲ್ಲಿ ಈತನನ್ನು ಗಮನಿಸದವರೇ ಇಲ್ಲ. ದೊಡ್ಡ ಮದುವೆ ಹಾಗೂ ಸಮಾರಂಭಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಬರುವುದು ಸಾಮಾನ್ಯ, ಅಷ್ಟು ಜನರಿಗೆ ಯಾವುದೇ ರೀತಿಯ ನೀರಿನ ಸಮಸ್ಯೆ ಆಗದಂತೆ ಎಚ್ಚರಿಕೆಯಿಂದ ನಿಭಾಯಿಸುವ ಚಿದಾನಂದನ ಕಾಳಜಿಗೆ ಮದುವೆ ಮನೆಯವರೇ ಬೆರಗಾಗಿದ್ದುಂಟು.
ಪ್ರತಿಫಲಾಪೇಕ್ಷೆಯಿಲ್ಲದೇ ಕೆಲಸ: ನಗರದ ನಿವಾಸಿ ಚಿದಾನಂದ ೭ನೇ ತರಗತಿವರೆಗೆ ಸುಕಾಲಪೇಟೆ ಸರ್ಕಾರಿ ಶಾಲೆಯಲ್ಲಿ ಓದಿದ್ದಾನೆ. ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೇ ಕೆಲಸ ಮಾಡುವ ಮೂಲಕ ಎಲ್ಲ ಮೆಚ್ಚುಗೆ ಗಳಿಸಿದ್ದಾನೆೆ. ಕಾರ್ಯಕ್ರಮ ಮುಗಿದ ನಂತರ ಮದುವೆ ಮನೆಯ ಕಡೆಯವರು ಅಥವಾ ಸಮಾರಂಭದ ಆಯೋಜಕರು ಅಷ್ಟಿಷ್ಟು ಕೊಡುವ ಹಣದಲ್ಲೇ ಸಂತೃಪ್ತಿಪಟ್ಟುಕೊಳ್ಳುವ ಈತ, ಹೆಚ್ಚಿನ ಹಣಕ್ಕೆ ಬೇಡಿಕೆಯಿಟ್ಟ ಉದಾಹರಣೆಯಿಲ್ಲ.
ನೀರು ಮಿತ ಬಳಕೆಗೆ ಕಳಕಳಿ: ಯಾವುದೇ ಸಭೆ, ಸಮಾರಂಭ ಹಾಗೂ ಮದುವೆ ಕಾರ್ಯಕ್ರಮಗಳಲ್ಲಿ ನೀರನ್ನು ವ್ಯರ್ಥವಾಗಿ ಚೆಲ್ಲದಂತೆ ನಿಗಾವಹಿಸುವ ಚಿದಾನಂದ, ಯಾರಾದರೂ ಅರಿತು-ಮರೆತು ಹೆಚ್ಚು ನೀರು ಚೆಲ್ಲಿದ್ದು ಕಂಡುಬAದರೆ ಸಿಟ್ಟುಗೊಂಡಿದ್ದೂ ಇದೆ. ಹೆಚ್ಚು ಜನರು ಬಂದ ಸಂದರ್ಭದಲ್ಲಿ ಸಹಾಯಕ್ಕೆ ಯಾರು ಇರಲಿ, ಇಲ್ಲದೇ ಇರಲಿ ಒಬ್ಬಾತನೆ ನಿಭಾಯಿಸಿದ್ದನ್ನು ಹಲವರು ಸ್ಮರಿಸುತ್ತಾರೆ.