ನಮ್ಮ ಸಿಂಧನೂರು, ಮಾರ್ಚ್ 22
ಸಿಂಧನೂರು-ಸಿರುಗುಪ್ಪ ರಾಜ್ಯ ಹೆದ್ದಾರಿಯಲ್ಲಿ ಬೂದಿವಾಳಕ್ಯಾಂಪ್‌ನ ಸರ್ವೆ ನಂ.67ರ ಹಾಗೂ ಕಾಲುವೆ ಬದಿ ಗುಡಿಸಲು ಹಾಕಿಕೊಂಡು ವಾಸ ಮಾಡುತ್ತಿರುವ ತಮಗೆ ನಿವೇಶನ ಹಕ್ಕುಪತ್ರ ನೀಡಿ ಮನೆ ಸೌಕರ್ಯ ಕಲ್ಪಿಸದಿದ್ದರೆ, 2024ರ ಲೋಕಸಭಾ ಚುನಾವಣೆಯಲ್ಲಿ ಮತದಾನ ಬಹಿಷ್ಕರಿಸುವುದಾಗಿ ನಿರಾಶ್ರಿತರು ತಹಸೀಲ್ದಾರ್ ಮೂಲಕ ಜಿಲ್ಲಾಧಿಕಾರಿಗಳಿಗೆ ಶುಕ್ರವಾರ ಮನವಿಪತ್ರ ರವಾನಿಸಿದ್ದಾರೆ.
ಕಳೆದ 50 ವರ್ಷಗಳಿಂದ ಕ್ಯಾಂಪ್ ಪಿಡಬ್ಲ್ಯುಡಿ ಹಾಗೂ ನೀರಾವರಿ ಇಲಾಖೆ ವ್ಯಾಪ್ತಿಗೆ ಒಳಪಡುವ ಜಾಗದಲ್ಲಿ ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತಿದ್ದರೂ ಇಲ್ಲಿಯವರೆಗೂ ನಮಗೆ ನಿವೇಶನ ಹಕ್ಕುಪತ್ರ ಹಾಗೂ ಮನೆ ಸೌಕರ್ಯ ಇಲ್ಲ, ಹೀಗಾಗಿ ಬಿಸಿಲು, ಮಳೆ ಹಾಗೂ ಚಳಿಯಲ್ಲಿ ಗುಡಿಸಲಿನಲ್ಲೇ ವಾಸಿಸುತ್ತಿದ್ದೇನೆ. ದಿನವೂ ವಾಹನ ದಟ್ಟಣೆಯಿಂದಾಗಿ ರಸ್ತೆ ಬದಿಯಲ್ಲಿರುವ ನಮಗೆ ಪ್ರಾಣಭಯ ಕಾಡುತ್ತಿದೆ. ಹಾಗಾಗಿ ಕ್ಯಾಂಪ್‌ಗೆ ಹೊಂದಿಕೊಂಡಿರುವ ಸರ್ವೆ ನಂ.44ರಲ್ಲಿ 2 ಎಕರೆ 20 ಗುಂಟೆ ಆಶ್ರಯ ನಿವೇಶನದ ಖಾಲಿ ಇದ್ದು, ಈ ಜಾಗದಲ್ಲಿ ನಿರಾಶ್ರಿತರಿಗೆ ನಿವೇಶನ ನೀಡಿ ಮನೆ ಕಟ್ಟಿಸಿಕೊಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಕಳೆದ 7 ತಿಂಗಳಿನಿಂದ ಕರ್ನಾಟಕ ರೈತ ಸಂಘದ ನೇತೃತ್ವದಲ್ಲಿ ನಿರಂತರ ಹೋರಾಟ ನಡೆಸಿದ ಹಿನ್ನೆಲೆಯಲ್ಲಿ ಸೋಮಲಾಪುರ ಗ್ರಾಮ ಪಂಚಾಯಿತಿಯವರು ಗ್ರಾಮ ಸಭೆ ನಡೆಸಿ 84 ಫಲಾನುಭವಿಗಳನ್ನು ಆಯ್ಕೆ ಮಾಡಿದ್ದಾರೆ. ಗ್ರಾಮ ಸಭೆ ನಡೆಸಿ 4 ತಿಂಗಳು ಕಳೆದರೂ ಇಲ್ಲಿಯವರೆಗೂ ಹಕ್ಕುಪತ್ರ ವಿತರಿಸಿಲ್ಲ. ಪ್ರಭಾವಿಗಳ ರಾಜಕೀಯ ಒತ್ತಡಕ್ಕೆ ಮಣಿದು ವಿಳಂಬ ಧೋರಣೆ ಅನುಸರಿಸುತ್ತಿದ್ದು, ಈ ಕುರಿತು ಶಾಸಕರಾದ ಹಂಪನಗೌಡ ಬಾದರ್ಲಿ ಅವರ ಗಮನಕ್ಕೆ ತಂದರೂ ಯಾವುದೇ ರೀತಿಯ ಸ್ಪಂದನೆ ದೊರೆತಿಲ್ಲ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ನಿರಾಶ್ರಿತರು ವಾಸಿಸುವ ಗುಡಿಸಲು ಪ್ರದೇಶದಲ್ಲಿ ವಿದ್ಯುತ್, ಮಹಿಳಾ ಶೌಚಾಲಯ, ಕುಡಿವ ನೀರು ಸೇರಿದಂತೆ ಇನ್ನಿತರೆ ಮೂಲ ಸೌಕರ್ಯಗಳಿಲ್ಲ. ಇದರಿಂದಾಗಿ ದಿನವೂ ಸಮಸ್ಯೆ ಎದುರಿಸುತ್ತಿದ್ದೇವೆ. ಈ ಬಗ್ಗೆ ಗ್ರಾ.ಪಂ., ತಾಲೂಕು ಪಂಚಾಯಿತಿ ಹಾಗೂ ತಾಲೂಕು ಆಡಳಿತ, ಆಶ್ರಯ ಸಮಿತಿ ಅಧ್ಯಕ್ಷರೂ ಆದ ಶಾಸಕರ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ, ಇದರಿಂದ ಬೇಸತ್ತು ಚುನಾವಣಾ ಬಹಿಷ್ಕಾರದ ನಿರ್ಧಾರಕ್ಕೆ ಬಂದಿದ್ದೇವೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ರೈತ ಸಂಘದ ಮುಖಂಡ ಚಿಟ್ಟಿಬಾಬು, ಟಿಯುಸಿಐ ಜಿಲ್ಲಾ ಘಟಕದ ಉಪಾಧ್ಯಕ್ಷ ಅಮೀನ್‌ಸಾಬ್ ನದಾಫ್, ಮಹಿಳಾ ಸಂಘದ ತಾಲೂಕು ಘಟಕದ ಅಧ್ಯಕ್ಷೆ ರೇಣುಕಾ, ಬೂದೇವಿ, ವಿರುಪಣ್ಣ, ಶಾಮಮ್ಮ, ಮಲ್ಲಯ್ಯ, ದೇವಪುತ್ರ, ನಾಗಮ್ಮ, ರಾಧಮ್ಮ, ದುರ್ಗಾ ಪ್ರಸಾದ್, ಸ್ವಾತಿ, ನಾಗಪ್ಪ, ರಾಜಶ್ರೀ, ಯಲ್ಲಮ್ಮ, ರಾಜು, ಪವಿತ್ರ ಸೇರಿದಂತೆ 115 ಜನರು ಸಹಿ ಮಾಡಿದ ಮನವಿಪತ್ರವನ್ನು ಜಿಲ್ಲಾಡಳಿತಕ್ಕೆ ರವಾನಿಸಿದ್ದಾರೆ.