(ಪಬ್ಲಿಕ್ ನ್ಯೂಸ್: ಬಸವರಾಜ ಹಳ್ಳಿ)
ನಮ್ಮ ಸಿಂಧನೂರು, ಮಾರ್ಚ್ 23
ಸಿಂಧನೂರು-ಮಸ್ಕಿ ಹೆದ್ದಾರಿಯಲ್ಲಿ (ಎನ್ನೆಚ್ 150A) ಬೂತಲದಿನ್ನಿಯ ಇಂಡಿಯನ್ ಪೆಟ್ರೋಲ್ ಬಂಕ್ ಬಳಿ ಇರುವ ಸಂಪರ್ಕ ಸೇತುವೆಗೆ (ಬ್ರಿಡ್ಜ್) ಕಳೆದ ಎರಡ್ಮೂರು ತಿಂಗಳುಗಳ ಹಿಂದೆಯೇ ಬೊಂಗಾ ಬಿಂದಿದ್ದು, ಭಾರಿ ವಾಹನಗಳು ಸಂಚರಿಸಿದರೆ ಸೇತುವೆ ಕುಸಿದು ಬೀಳುವುದರಲ್ಲಿ ಅನುಮಾನವಿಲ್ಲ ಎಂದು ವಾಹನ ಚಾಲಕರು ಆತಂಕ ವ್ಯಕ್ತಪಡಿಸಿದ್ದಾರೆ.
ಈ ಮಾರ್ಗವೂ ರಾಷ್ಟ್ರೀಯ ಹೆದ್ದಾರಿಯಾಗಿದ್ದು, ದಿನವೂ ಸಾವಿರಾರು ವಾಹನಗಳು ಸಂಚರಿಸುತ್ತವೆ. ಕಲಬುರಗಿ ಸಂಪರ್ಕಿಸುವ ಪ್ರಮುಖ ರಸ್ತೆ ಇದಾಗಿರುವುದರಿಂದ ಸರಕು-ಸಾಗಣೆ ವಾಹನಗಳು ಹೆಚ್ಚಾಗಿ ಸಂಚರಿಸುತ್ತವೆ. ಆದರೆ, ಈ ಮಾರ್ಗದ ರಸ್ತೆಯ ಬ್ರಿಡ್ಜ್ ಶಿಥಿಲಗೊಂಡು, ಬೋಂಗಾ ಬಿದ್ದಿದ್ದರು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಇದುವರೆಗೂ ಗಮನಹರಿಸಿಲ್ಲ, ಯಾವುದೇ ರೀತಿಯ ಅನಾಹುತ ಸಂಭವಿಸಿ ಜೀವಹಾನಿಯಾದರೆ ಯಾರು ಹೊಣೆ ಎಂದು ವಾಹನ ಸವಾರರು ಪ್ರಶ್ನಿಸಿದ್ದಾರೆ.
ಪ್ರಸಕ್ತ 2024ರ ಲೋಕಸಭಾ ಚುನಾವಣೆ ಘೋಷಣೆಯಾಗಿದ್ದು, ಇದೇ ಮಾರ್ಗದಲ್ಲಿಯೇ ರಾಜ್ಯ ಸರ್ಕಾರದ ಸಚಿವರು, ಕೇಂದ್ರದ ನಾಯಕರು ಸೇರಿದಂತೆ ಹಲವು ಗಣ್ಯರು, ಪ್ರಮುಖರು ಸಂಚರಿಸಲಿದ್ದು, ಆದರೂ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ನಿರ್ಲಕ್ಷ್ಯ ತಾಳಿರುವುದು ಯಾಕೆಂದು ಗೊತ್ತಾಗುತ್ತಿಲ್ಲ. ಈ ಬಗ್ಗೆ ವಾಹನ ಚಾಲಕರು ಅಧಿಕಾರಿಗಳಿಗೆ ಮೌಖಿಕವಾಗಿ ಗಮನಕ್ಕೆ ತಂದರೂ ನಿರ್ಲಕ್ಷ್ಯ ವಹಿಸಿರುವುದು ಬೇಜವಾಬ್ದಾರಿಗೆ ಜ್ವಲಂತ ಸಾಕ್ಷಿಯಾಗಿದೆ ಎಂದು ಅವರು ಆರೋಪಿಸಿದ್ದಾರೆ.