ನಮ್ಮ ಸಿಂಧನೂರು, ಮಾರ್ಚ್ 19
ಸಿಂಧನೂರು ನಗರದ ಪಿಡಬ್ಲ್ಯೂಡಿ ಕ್ಯಾಂಪ್ನ ಸಂಚಾರಿ ಠಾಣೆ ಹಿಂಬದಿಯಲ್ಲಿರುವ ವನಸಿರಿ ಫೌಂಡೇಶನ್ ಪೋಷಣೆಯ ‘ಅಮರಶ್ರೀ’ ಕಿರು ಉದ್ಯಾನದಲ್ಲಿ ಸಂರಕ್ಷಿತ ‘ಮರುಜೀವ’ ಪಡೆದ ಆಲದ ಮರ ಬಿರು ಬೇಸಿಗೆಯಲ್ಲೂ ಚಿಗಿತು ಹಸಿರು ಮೈದಳೆದಿದೆ.
ಹಚ್ಚ ಹಸಿರು ತುಂಬಿ ತುಳುಕವ ‘ಅಮರಶ್ರೀ’
ಏಳುರಾಗಿಕ್ಯಾಂಪ್ನಲ್ಲಿ ವ್ಯಕ್ತಿಯೊಬ್ಬರ ಜಮೀನಿನಲ್ಲಿ ಬೆಳೆದಿದ್ದ ಮರವನ್ನು ಕಡಿಯಲಾಗಿತ್ತು. ಈ ಕುರಿತು ಮಾಹಿತಿ ಪಡೆದ ವನಸಿರಿ ಫೌಂಡೇಶನ್ ತಂಡ ಬುಡಮೇಲಾದ ಗಿಡವನ್ನು ಸಂರಕ್ಷಿಸಿ ಪಿಡಬ್ಲ್ಯುಡಿ ಕ್ಯಾಂಪ್ನ ಈಗಿನ ಸಂಚಾರಿ ಠಾಣೆ ಹಿಂಬದಿಯ ಖಾಲಿ ಜಾಗದಲ್ಲಿ 26-03-2022 ರಂದು ನೆಡುವ ಮೂಲಕ ಮರುಜನ್ಮ ನೀಡಿತ್ತು. ಅಂದಿನಿಂದ ವನಸಿರಿ ಫೌಂಡೇಶನ್ನವರು ಮರುಜೀವ ಪಡೆದ ಸಂರಕ್ಷಿತ ಆಲದಮರ ಪ್ರದೇಶವನ್ನು ಅಮರಶ್ರೀ ಉದ್ಯಾನವೆಂದು ನಾಮಕರಣ ಮಾಡಿ ಸುತ್ತಲೂ ಹಲವು ಗಿಡಗಳನ್ನು ನೆಟ್ಟು, ಹಕ್ಕಿ-ಪಕ್ಷಿಗಳಿಗೆ ನೀರಿನ ಬಾನಿಗಳನ್ನಿಟ್ಟು ಪೋಷಣೆ ಮಾಡುತ್ತಿದ್ದಾರೆ. ಈ ಉದ್ಯಾನಕ್ಕೆ ಕೊಪ್ಪಳ ಗವಿಮಠದ ಅಭಿನವ ಗವಿಶ್ರೀ ಶ್ರೀಗಳು ಸೇರಿದಂತೆ ಇನ್ನಿತರೆ ಗಣ್ಯರು, ಪ್ರಮುಖರು ಭೇಟಿ ನೀಡಿರುವುದು ವಿಶೇಷವಾಗಿದೆ. ಬಿರು ಬೇಸಿಗೆಯಲ್ಲೂ ಕಿರು ಉದ್ಯಾನವನ್ನು ಅತ್ಯಂತ ಚೊಕ್ಕವಾಗಿಟ್ಟುಕೊಳ್ಳುವ ಅಲ್ಲಿನ ಗಿಡಗಳಿಗೆ ದಿನವೂ ನೀರುಣಿಸುತ್ತಿರುವ ವನಸಿರಿ ಫೌಂಡೇಶನ್ ತಂಡದವರ ಬಗ್ಗೆ ಸಾರ್ವಜನಿಕರು ಹಾಗೂ ಪರಿಸರ ಪ್ರಿಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.