ಲೋಕಲ್ ನ್ಯೂಸ್: ಬಸವರಾಜ ಹಳ್ಳಿ
ಮಸ್ಕಿ, ಡಿಸೆಂಬರ್ 4
ಮಸ್ಕಿ ತಾಲೂಕಿನ ಬಳಗಾನೂರು ಪಟ್ಟಣ ಪಂಚಾಯಿತಿಯಲ್ಲಿ ಪಾರಂ 3 ನೀಡಲು ವಿಳಂಬ ಮಾಡಲಾಗುತ್ತಿದೆ. ಅಧ್ಯಕ್ಷರು, ಮುಖ್ಯಾಧಿಕಾರಿಗಳು ಶಾಮೀಲಾಗಿ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ಆರೋಪಿಸಿ, ಕೆಆರ್‌ಎಸ್ ಹಾಗೂ ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ಮತ್ತು ಸಾಮಾಜಿಕ ನ್ಯಾಯ ಸಂಸ್ಥೆಯ ಕಾರ್ಯಕರ್ತರು ಪಟ್ಟಣದ ಬೀದಿ ಬೀದಿಗಳಲ್ಲಿ ಗುರುವಾರ ತಮಟೆ ಬಡಿಯುತ್ತ ಅಣಕ ಭಿಕ್ಷೆ ಎತ್ತಿ ಅಚ್ಚರಿ ಮೂಡಿಸಿದರು. ಪಟ್ಟಣ ಪಂಚಾಯಿತಿ ಅವ್ಯವಹಾರದ ಗೂಡಾಗಿದೆ ಎಂದು ಆರೋಪಿಸಿ, ತಮಟೆ ಬಡಿಯುತ್ತ ಬೀದಿ ಬೀದಿಗಳಲ್ಲಿ ಕಾರ್ಯಕರ್ತರು ಸಂಚರಿಸುತ್ತಿದ್ದಂತೆ ಸಾರ್ವಜನಿಕರು ಕುತೂಹಲದಿಂದ ವೀಕ್ಷಿಸಿದ್ದು ಕಂಡುಬಂತು.
“ಸಾಕಷ್ಟು ಬಾರಿ ಮನವಿ ಮಾಡಿದರೂ ಸ್ಪಂದಿಸಿಲ್ಲ”
“ಪಟ್ಟಣ ಪಂಚಾಯಿತಿಯಲ್ಲಿ ಕಳೆದ ಹಲವು ದಿನಗಳಿಂದ ಫಾರಂ 3 ಕೊಡಲು ವಿನಾಃಕಾರಣ ವಿಳಂಬ ಮಾಡಲಾಗುತ್ತಿದೆ. ಇನ್ನೂ ಅಧ್ಯಕ್ಷರು, ಮುಖ್ಯಾಧಿಕಾರಿಗಳು ಸೇರಿದಂತೆ ಇತರರು ಲಂಚಕ್ಕೆ ಬೇಡಿಕೆ ಇಡುತ್ತಿದ್ದಾರೆ. ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಇದನ್ನು ಖಂಡಿಸಿ ಸಾಂಕೇತಿಕವಾಗಿ ಸಾರ್ವಜನಿಕರಿಂದ ದೇಣಿಗೆ ಎತ್ತಿ ಪಟ್ಟಣ ಪಂಚಾಯಿತಿಯವರಿಗೆ ಕೊಡಲು ವಿನೂತನವಾಗಿ ಪ್ರತಿಭಟನೆ ಹಮ್ಮಿಕೊಂಡಿದ್ದೇವೆ” ಎಂದು ಕೆಆರ್‌ಎಸ್ ಪಕ್ಷದ ರಾಜ್ಯ ಮುಖಂಡ ನಿರುಪಾದಿ ಕೆ.ಗೋಮರ್ಸಿ ತಿಳಿಸಿದರು.
ಮುಖ್ಯಾಧಿಕಾರಿಗೆ ಮನವಿ
ಕಾರ್ಯಕರ್ತರು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಗೋಪಾಲ್ ಅವರಿಗೆ ಮನವಿ ಸಲ್ಲಿಸಿದರು. ಈ ವೇಳೆ ಮಾತನಾಡಿದ ಅವರು ನಾನು ಈ ಕಚೇರಿಗೆ 1 ತಿಂಗಳ ಹಿಂದೆ ಕರ್ತವ್ಯಕ್ಕೆ ಬಂದಿದ್ದು, ಸಾರ್ವಜನಿಕರ ಯಾವುದೇ ರೀತಿಯ ಸಮಸ್ಯೆಗಳನ್ನು ಆದಷ್ಟು ಶೀಘ್ರ ಪರಿಹರಿಸುವುದಾಗಿ ಭರವಸೆ ನೀಡಿದರು.
