ಲೋಕಲ್ ನ್ಯೂಸ್ : ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಡಿಸೆಂಬರ್ 28
ನಗರದ ರಸ್ತೆ ಬದಿಗಳಲ್ಲಿ ಡಬ್ಬಾ ಅಂಗಡಿ, ಶೆಡ್ಗಳನ್ನು ತೆರವುಗೊಳಿಸಿರುವುದರಿಂದ ಸಾವಿರಾರು ಕುಟುಂಬಗಳು ಬೀದಿಗೆ ಬಿದ್ದಿದ್ದು, ಸಣ್ಣಪುಟ್ಟ ವ್ಯಾಪಾರಿಗಳಿಗೆ ಎರಡು ದಿನದೊಳಗೆ ಜಿಲ್ಲಾ ಮತ್ತು ತಾಲೂಕು ಆಡಳಿತ ಪರ್ಯಾಯ ವ್ಯವಸ್ಥೆ ಕಲ್ಪಿಸದಿದ್ದರೆ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು ಎಂದು ಬೀದಿ ಬದಿ ವ್ಯಾಪಾರಸ್ಥರ ಹೋರಾಟ ಸಮಿತಿಯ ಸಂಚಾಲಕ ಡಿ.ಎಚ್.ಪೂಜಾರ್ ಎಚ್ಚರಿಸಿದರು.
ನಗರದ ತಹಸಿಲ್ ಕಾರ್ಯಾಲಯದ ಆವರಣದಲ್ಲಿ ಹೋರಾಟ ಸಮಿತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಪ್ರತಿಭಟನೆ ಉದ್ದೇಶಿಸಿ ಅವರು ಮಾತನಾಡಿದರು. ಬೀದಿ ಬದಿ ವ್ಯಾಪಾರವನ್ನೇ ನಂಬಿಕೊಂಡಿದ್ದ ಸಾವಿರಾರು ಕುಟುಂಬಗಳಿಗೆ ತೆರವು ಕಾರ್ಯಾಚರಣೆಯಿಂದ ಬರಸಿಡಿಲು ಬಡಿದಂತಾಗಿದೆ. ಒಂದೊತ್ತಿನ ಊಟಕ್ಕೂ ಪರದಾಡುವ ದುಃಸ್ಥಿತಿ ಎದುರಾಗಿದೆ. ಕೋರ್ಟ್ ಆದೇಶದಂತೆ ಕಾರ್ಯಾಚರಣೆ ಮಾಡಿರುವುದಾಗಿ ಅಧಿಕಾರಿಗಳು ಈಗ ಹೇಳುತ್ತಿದ್ದು, ಕೋರ್ಟ್ ಆದೇಶ ಇದ್ದರೂ ಬಡ ವ್ಯಾಪಾರಸ್ಥರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸದೇ ಇಷ್ಟು ದಿನ ಏಕೆ ಸುಮ್ಮನಿದ್ದಿರಿ ಪ್ರಶ್ನಿಸಿದರು. ರಸ್ತೆ ಬದಿಯ ಯಾವುದೇ ವ್ಯಾಪಾರಸ್ಥರನ್ನು ತೆರವುಗೊಳಿಸುವ ಮುನ್ನ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕೆಂಬ ನಿಯಮವಿದೆ. ಈ ಬಗ್ಗೆ ಸುಪ್ರೀಂ ಕೋರ್ಟ್ ಕೂಡ ಮಾರ್ಗದರ್ಶಿಗಳನ್ನು ನೀಡಿದೆ. ಆದರೆ ಜಿಲ್ಲಾ ಮತ್ತು ತಾಲೂಕು ಆಡಳಿತ ಈ ನಿಯಮಗಳನ್ನು ಪಾಲಿಸದೇ ಐದು ಸಾವಿರಕ್ಕೂ ಹೆಚ್ಚು ಜನರ ಹೊಟ್ಟೆಯ ಮೇಲೆ ಹೊಡೆದಿದೆ. ರಸ್ತೆ ಮಧ್ಯದಿಂದ 21 ಮೀಟರ್ ತೆರವುಗೊಳಿಸಬೇಕೆಂಬ ನಿಯಮವಿದ್ದು, ಆದರೆ ಕೆಲವೊಂದು ಕಡೆ 15 ಮೀಟರ್ ತೆರವುಗೊಳಿಸಲಾಗಿದೆ. ಬಲಾಢ್ಯರ, ಪ್ರಭಾವಿಗಳ ಅನಧಿಕೃತ ಕಟ್ಟಡಗಳನ್ನು ಉಳಿಸಲು ವ್ಯವಸ್ಥಿತವಾಗಿ ಕಾರ್ಯಾಚರಣೆ ನಡೆಸಿ, ಕಾನೂನು ತಾರತಮ್ಯ ಮಾಡಲಾಗಿದೆ ಎಂದು ಆರೋಪಿಸಿದರು.
ಸಣ್ಣಪುಟ್ಟ ವ್ಯಾಪಾರಸ್ಥರ ಮೇಲೆ ದಬ್ಬಾಳಿಕೆ ನಡೆಸುವುದು ಯಾವ ನ್ಯಾಯ ? : ಚಂದ್ರಶೇಖರ ಗೊರಬಾಳ ಪ್ರಶ್ನೆ
ಇನ್ನೋರ್ವ ಸಂಚಾಲಕ ಚಂದ್ರಶೇಖರ ಗೊರಬಾಳ ಮಾತನಾಡಿ, ಒಂದು ಕಡೆ ಬೀದಿ ಬದಿ ವ್ಯಾಪಾರಸ್ಥರು ರಸ್ತೆ ಅತಿಕ್ರಮಿಸಿ ವ್ಯಾಪಾರ ನಡೆಸುತ್ತಿದ್ದಾರೆಂದು ನಗರಸಭೆಯವರು ಹೇಳುತ್ತಿದ್ದಾರೆ. ಇನ್ನೊಂದು ಕಡೆ ಅವರೇ ಬೀದಿ ಬದಿ ವ್ಯಾಪಾರಸ್ಥರಿಗೆ ಲೈಸೆನ್ಸ್ ನೀಡಿದ್ದಾರೆ, ವ್ಯಾಪಾರಸ್ಥರಿಂದ ಇಷ್ಟುದಿನ ತೆರಿಗೆಯನ್ನೂ ಪಡೆದಿದ್ದಾರೆ. ಜೆಸ್ಕಾಂನಿಂದ ವಿದ್ಯುತ್ ಸಂಪರ್ಕವನ್ನು ಕಲ್ಪಿಸಲಾಗಿದೆ. ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳಡಿ ಈ ವ್ಯಾಪಾರಸ್ಥರು ಸಾಲವನ್ನೂ ಪಡೆದಿದ್ದಾರೆ. ಇಷ್ಟೆಲ್ಲಾ ಇದ್ದರೂ ನಗರಸಭೆ, ಇತರೆ ಇಲಾಖೆಗಳು ತಮಗೆ ಸಂಬಂಧವೇ ಇಲ್ಲದಂತೆ ಮಾತನಾಡುತ್ತಿರುವುದು ಸರಿಯಲ್ಲ. ರಸ್ತೆ ಅತಿಕ್ರಮಿಸಿಕೊಂಡು ಕಟ್ಟಡಗಳನ್ನು ಕಟ್ಟಿದ್ದರೂ ಅಲ್ಲಿ ಕಾನೂನು ಪಾಲನೆಗೆ ಮುಂದಾಗದೇ ಬೀದಿ ಬದಿ ವ್ಯಾಪಾರಸ್ಥರನ್ನು ಗುರಿಯಾಗಿಸಿಕೊಂಡು ಕಾರ್ಯಾಚರಣೆ ನಡೆಸಿರುವುದು ಬಡ ಕುಟುಂಬಗಳ ಬದುಕುವ ಹಕ್ಕನ್ನೇ ಕಸಿದುಕೊಂಡಂತಾಗಿದೆ. ಇದರಿಂದ ಸಾವಿರಾರು ಜನರು ನಿರುದ್ಯೋಗಿಗಳಾಗಿದ್ದಾರೆ. ನಗರದಲ್ಲಿ ಹಲವೆಡೆ ಸಿಐ ಸೈಟ್ಗಳಿದ್ದು ಒತ್ತುವರಿಯಾಗಿವೆ. ಇನ್ನು ವಿವಿಧ ಇಲಾಖೆಗಳ ಜಾಗೆಗಳಿದ್ದು ಅವುಗಳನ್ನು ತಮ್ಮ ಸುಪರ್ದಿಗೆ ತೆಗೆದುಕೊಳ್ಳುವಲ್ಲಿ ಆಯಾ ಇಲಾಖೆಗಳು ಸಂಪೂರ್ಣ ವಿಫಲವಾಗಿವೆ. ಆದರೆ ಸಣ್ಣಪುಟ್ಟ ವ್ಯಾಪಾರಸ್ಥರ ಮೇಲೆ ದಬ್ಬಾಳಿಕೆ ನಡೆಸುವುದು ಯಾವ ನ್ಯಾಯ. ಆದಷ್ಟು ಶೀಘ್ರ ಈ ಸಮಸ್ಯೆಯನ್ನು ಪರಿಹರಿಸದಿದ್ದರೆ ತಹಸಿಲ್ ಕಾರ್ಯಾಲಯದ ಮುಂದೆ ಸಣ್ಣಪುಟ್ಟ ವ್ಯಾಪಾರಸ್ಥರ ಕುಟುಂಬಗಳ ಸದಸ್ಯರೊಂದಿಗೆ ಹೋರಾಟ ನಡೆಸುವುದು ಅನಿವಾರ್ಯವಾಗುತ್ತದೆ ಎಂದು ಹೇಳಿದರು.
ಪ್ರಭಾವಿಗಳಿಗೆ ಒಂದು ನ್ಯಾಯ, ಬೀದಿ ಬದಿ ವ್ಯಾಪಾರಸ್ಥರಿಗೆ ಒಂದು ನ್ಯಾಯವೇ ?.: ನಾಗರಾಜ್ ಪೂಜಾರ್ ಆಕ್ರೋಶ
ನಾಗರಾಜ್ ಪೂಜಾರ್ ಮಾತನಾಡಿ, ಬೀದಿ ಬದಿ ವ್ಯಾಪಾರಸ್ಥರ ಡಬ್ಬಾ ಅಂಗಡಿಗಳು ಫುಟ್ಪಾತ್ ಅತಿಕ್ರಮಿಸಿದ ಕಾರಣ ತೆರವುಗೊಳಿಸಲಾಗಿದೆ. ಭೂ ಕಬಳಿಕೆ ಮಾಡಿಕೊಂಡಿರುವ ಕಾರಣ ಅಲ್ಲಲ್ಲಿ ಅಂಗಡಿಗಳನ್ನು ಕಾರ್ಯಾಚರಣೆ ನಡೆಸಿ ತೆರವು ಮಾಡಲಾಗಿದೆ ಎಂದು ಜಿಲ್ಲಾ ಮತ್ತು ತಾಲೂಕು ಆಡಳಿತದ ಅಧಿಕಾರಿಗಳು ಹೇಳುತ್ತಿದ್ದಾರೆ. ಹಾಗಾದರೆ ನಗರದಲ್ಲಿ ಸರ್ಕಾರಿ ಜಾಗೆಯನ್ನು ಮತ್ತು ರಸ್ತೆಯನ್ನು ಅತಿಕ್ರಮಿಸಿ ಹಲವು ಕಟ್ಟಡ, ಮಳಿಗೆಗಳನ್ನು ನಿರ್ಮಿಸಲಾಗಿದ್ದು, ಅವುಗಳನ್ನು ಯಾಕೆ ತೆರವುಗೊಳಿಸಿಲ್ಲ. ಪ್ರಭಾವಿಗಳಿಗೆ ಒಂದು ನ್ಯಾಯ, ಬೀದಿ ಬದಿ ವ್ಯಾಪಾರಸ್ಥರಿಗೆ ಒಂದು ನ್ಯಾಯವೇ ?. ತೆರವುಗೊಳಿಸುವುದಾದರೆ ಆದೇಶದ ಅನ್ವಯ ಎಲ್ಲವನ್ನೂ ತೆರವುಗೊಳಿಸಬೇಕು. ಹಾಗಾಗಿ ಕೋರ್ಟ್ ನೀಡಿರುವ ಆದೇಶವನ್ನು ಸಾರ್ವಜನಿಕರ ಮುಂದೆ ಜಿಲ್ಲಾ ಮತ್ತು ತಾಲೂಕು ಆಡಳಿತಗಳು ಈ ಕೂಡಲೇ ಬಹಿರಂಗಗೊಳಿಸಬೇಕು. ದಾಖಲೆಗಳನ್ನು ಮುಚ್ಚಿಟ್ಟು, ಅಪಾರದರ್ಶಕವಾಗಿ ಯಾವುದೇ ಕಾರ್ಯಾಚರಣೆ ಮಾಡುವುದು ಕಾನೂನುಬಾಹಿರವಾಗಿದೆ. ಅಲ್ಲದೇ ಮುಂಜಾಗ್ರತ ಕ್ರಮಗಳನ್ನು ಕೈಗೊಳ್ಳದೇ ದಿಢೀರ್ ಆಗಿ ಬೀದಿ ಬದಿ ವ್ಯಾಪಾರಸ್ಥರನ್ನು ತೆರವುಗೊಳಿಸಿರುವುದರಿಂದ ಅವರ ಕುಟುಂಬಗಳು ಸಂಕಷ್ಟಕ್ಕೀಡಾಗಿದ್ದು ಕೂಡಲೇ ಅವರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು. ಒಂದು ವೇಳೆ ನಿರ್ಲಕ್ಷ್ಯ ವಹಿಸಿದ್ದೇ ಆದಲ್ಲಿ ಹೋರಾಟ ಸಮಿತಿಯಿಂದ ತೀವ್ರತರ ಹೋರಾಟಗಳನ್ನು ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಹೇಳಿದರು. ಮುಖಂಡರಾದ ಚಿಟ್ಟಿಬಾಬು ಬೂದಿವಾಳಕ್ಯಾಂಪ್, ಬಸವರಾಜ ಬಾದರ್ಲಿ ಸೇರಿದಂತೆ ಇನ್ನಿತರರು ಮಾತನಾಡಿದರು. ಈ ಸಂದರ್ಭದಲ್ಲಿ ಹುಸೇನ್ಸಾಬ್, ಬಿ.ಎನ್.ಯರದಿಹಾಳ, ಅಮೀನ್ಸಾಬ್ ನದಾಫ್, ರಮೇಶ್ ಪಾಟೀಲ್, ಡಾ.ವಸೀಮ್ ಅಹ್ಮದ್, ಸಮ್ಮದ್ ಚೌದ್ರಿ, ಮಂಜುನಾಥ ಗಾಂಧಿನಗರ, ಬಸವರಾಜ ಬೆಳಗುರ್ಕಿ ಸೇರಿದಂತೆ ಇನ್ನಿತರರಿದ್ದರು.
ಪ್ರತಿಭಟನಾ ಮೆರವಣಿಗೆ
ನಗರದ ಪ್ರವಾಸಿ ಮಂದಿರದಿಂದ ತಹಸಿಲ್ ಕಾರ್ಯಾಲಯದವರೆಗೆ ಬೀದಿ ಬದಿ ವ್ಯಾಪಾರಸ್ಥರ ಹೋರಾಟ ಸಮಿತಿ ವತಿಯಿಂದ, ವಿವಿಧ ಹಕ್ಕೊತ್ತಾಯಗಳಿಗೆ ಆಗ್ರಹಿಸಿ ತಹಸಿಲ್ ಕಾರ್ಯಾಲಯದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ಪ್ರತಿಭಟನಾ ಮೆರವಣಿಗೆಯಲ್ಲಿ ನೂರಾರು ಸಣ್ಣಪುಟ್ಟ ವ್ಯಾಪಾರಸ್ಥರು ಭಾಗವಹಿಸಿದ್ದರು.