ಲೋಕಲ್ ನ್ಯೂಸ್: ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಅಕ್ಟೋಬರ್ 18
ನಗರದ ಕುಷ್ಟಗಿ ಮಾರ್ಗದ ರಸ್ತೆಯ ಹೆಲಿಪ್ಯಾಡ್ ಸಮೀಪದಲ್ಲಿರುವ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ವಿಜಯಪುರ ವ್ಯಾಪ್ತಿಗೆ ಒಳಪಡುವ ಸ್ನಾತಕೋತ್ತರ ಮಹಿಳಾ ಅಧ್ಯಯನ ಕೇಂದ್ರಕ್ಕೆ ಹೋಗುವ ಮರಂ ದಾರಿ ಮಳೆಯಿಂದಾಗಿ ರಾಡಿಮಯವಾಗಿದ್ದು, ವಿದ್ಯಾರ್ಥಿನಿಯರು ತರಗತಿಗೆ ಹಾಜರಾಗಲು ಸಮಸ್ಯೆ ಎದುರಿಸುತ್ತಿದ್ದಾರೆ.
ಕಳೆದ ಮರ‍್ನಾಲ್ಕು ದಿನಗಳಿಂದ ಆಗಾಗ್ಗೆ ಮಳೆ ಸುರಿದ ಪರಿಣಾಮ ದಾರಿಯಲ್ಲಿ ನೀರು ನಿಂತು ಕೆಸರುಮಯವಾಗಿದ್ದು, ಚಪ್ಪಲಿ ಕೈಯಲ್ಲಿಡಿದು ಸಾಗುವಂತಹ ದುಃಸ್ಥಿತಿ ಎದುರಾಗಿದೆ. ಕಾಲೇಜಿಗೆ ಹೋಗುವ ಸಂದರ್ಭದಲ್ಲಿ ಜಾರಿ ಬಿದ್ದು ಘಟನೆಗಳು ನಡೆದಿವೆ. ಸಿಸಿ ರಸ್ತೆ ನಿರ್ಮಿಸುವಂತೆ ಹಲವಾರು ಬಾರಿ ಒತ್ತಾಯಿಸಿದರೂ ಇದುವರೆಗೂ ತಾಲೂಕು ಆಡಳಿತವಾಗಲಿ, ಜಿಲ್ಲಾಡಳಿತವಾಗಲಿ ಗಮನಹರಿಸಿಲ್ಲ ಎಂದು ವಿದ್ಯಾರ್ಥಿನಿಯರು ದೂರುತ್ತಾರೆ.
ಬಂಡಿ ದಾರಿಗಿಂತಲೂ ಕಡೇ
ಕಾಲೇಜು ಮರಂ ದಾರಿ ಬಂಡಿ ದಾರಿಗಿಂತಲೂ ಕಡೆಯಾಗಿದೆ. ದಾರಿ ಎರಡೂ ಬದಿಯಲ್ಲಿ ಜಾಲಿ-ಬೇಲಿ ಬೆಳೆದು, ಅಕ್ಕ-ಪಕ್ಕದಲ್ಲಿ ಕಂದಕಗಳು ನಿರ್ಮಾಣವಾಗಿವೆ. ದಿನವೂ ನೂರಾರು ವಿದ್ಯಾರ್ಥಿನಿಯರು ಭಯದಲ್ಲೇ ಕಾಲೇಜಿಗೆ ನಡೆದುಕೊಂಡು ಹೋಗುವಂತಾಗಿದೆ. ಸರಿಯಾದ ದಾರಿಯಿಲ್ಲದ ಕಾರಣ ಅಭ್ಯಾಸಕ್ಕೆ ಸಮಸ್ಯೆ ಅನುಭವಿಸುವಂತಾಗಿದೆ ಎಂದು ವಿದ್ಯಾರ್ಥಿನಿಯೊಬ್ಬರು ಹೇಳುತ್ತಾರೆ.
ಕಾಂಪೌಂಡ್ ಇಲ್ಲದ ಕಾಲೇಜು !
ಅಕ್ಕಮಹಾದೇವಿ ವಿವಿಯ ಸ್ನಾತಕೋತ್ತರ ಕಾಲೇಜಿನ ಜ್ಞಾನಸಿಂಧು ಆವರಣ ನಿರ್ಜನ ಪ್ರದೇಶದಲ್ಲಿದ್ದು, ಸುತ್ತಮುತ್ತಲೂ ಖಾಸಗಿಯವರ ಜಮೀನುಗಳು, ಮುಳ್ಳುಕಂಟಿಗಳು ಇವೆ. ಈ ಪ್ರದೇಶದಲ್ಲಿ ಹಾವು, ಚೇಳು ಸೇರಿದಂತೆ ವಿಷಜಂತುಗಳು ಆಗಾಗ ಕಂಡುಬರುತ್ತಿದ್ದು, ಕಾಲೇಜು ಆವರಣ ಪ್ರವೇಶಿಸಿದರೆ ಹೇಗೆನ್ನುವ ಆತಂಕ ಇಲ್ಲಿನ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಯನ್ನು ಕಾಡುತ್ತಿದೆ. ನಿರ್ಜನ ಪ್ರದೇಶದಲ್ಲಿ ಕಾಲೇಜು ಇರುವುದಲ್ಲದೇ ಸುತ್ತಲೂ ಕಾಂಪೌಂಡ್ ಇಲ್ಲದಿರುವುದರಿಂದ ಭಯದ ವಾತಾವರಣಕ್ಕೆ ಕಾರಣವಾಗಿದೆ.
ಸುರಕ್ಷತೆ-ಭದ್ರತೆ ಕೊರತೆ
ಕಾಲೇಜಿನಲ್ಲಿ ಅಭ್ಯಾಸ ಮಾಡುವ ಸ್ನಾತಕೋತ್ತರ ವಿದ್ಯಾರ್ಥಿನಿಯರಿಗೆ ಸೂಕ್ತ ಸುರಕ್ಷತೆ ಹಾಗೂ ಭದ್ರತೆ ಕೊರತೆ ಎದುರಾಗಿದೆ. ನಿರ್ಜನ ಪ್ರದೇಶದಲ್ಲಿ ದಾರಿ ಇರುವುದರಿಂದ ಅಂಜಿಕೆ-ಅಳುಕಿಲ್ಲದೇ ಒಂಟಿಯಾಗಿ ಕಾಲೇಜಿಗೆ ಹೋಗಿಬರುವುದು ವಿದ್ಯಾರ್ಥಿನಿಯರಿಗೆ ಕಷ್ಟಸಾಧ್ಯವಾಗಿದೆ. ಕಾಲೇಜಿನಲ್ಲಿ ಕಲಾ ಮತ್ತು ವಾಣಿಜ್ಯ ವಿಭಾಗ ಸೇರಿದಂತೆ ಇನ್ನಿತರೆ ವಿಭಾಗದಲ್ಲಿ 200ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಅಭ್ಯಾಸ ಮಾಡುತ್ತಿದ್ದು, ಅವರಿಗೆ ಕಲಿಕಾ ವಾತಾವರಣ ನಿರ್ಮಿಸುವಲ್ಲಿ ವಿವಿ ಆಡಳಿತ, ತಾಲೂಕು ಹಾಗೂ ಜಿಲ್ಲಾಡಳಿತಗಳು ನಿರ್ಲಕ್ಷö್ಯವಹಿಸಿರುವ ಬಗ್ಗೆ ಪಾಲಕರು ಆರೋಪಿಸಿದ್ದಾರೆ.
“ಬಿದ್ದೆದ್ದು ಕಾಲೇಜಿಗೆ ಹೋಗ್ಬೇಕ್ರಿ”
“ನಮ್ ಕಾಲೇಜಿನ ದಾರಿ ಸರಿಗೆ ಇಲ್ರಿ. ಜೋರು ಮಳಿ ಬಂತಂದ್ರ ದಾರೀನೆ ಇಲ್ದಂಗ ಆಗತ್ತ, ಅವಾಗ ಕಾಲೇಜು ತರಗತಿ ಡ್ರಾಪ್ ಆದಂಗನೆ. ಈ ದರ‍್ಯಾಗ ನಮ್ಮ ಫ್ರೆಂಡ್ಸ್ ಭಾಳ ಸಲ ಜಾರಿ ಬಿದ್ದರ‍್ರೀ. ದರ‍್ಯಾಗ ಸುತ್ತಮುತ್ತ ಬೇಲಿ ಬೆಳೆದಿದ್ದು, ಕೌಂಪೌಂಡ್ ಇಲ್ದೇ ಇರೋದ್ರಿಂದ್ರ ಒಬ್ರೆ ಕಾಲೇಜಿಗೆ ಹೋಗಾಕ ಅಂಜಿಕಿ ಬರ್ತೈತಿ. ಕುಷ್ಟಗಿ ರೋಡಿಗೆ ಬಂದು, ಇಬ್ರು-ಮೂವರು ಫ್ರೆಂಡ್ಸ್ ಸೇರಿ ಕಾಲೇಜಿಗೆ ಹೋಗ್ತೀವಿ. ಕಾಲೇಜು ರಸ್ತೆ ಮಾಡಿಸುವಂತೆ ನಾಲ್ಕಾರು ಸಲ ಹೋರಾಟ ಮಾಡಿದ್ದೀವಿ. ಇಲ್ಲಿವರೆಗೂ ಮಾಡ್ಸಿಲ್ಲ” ಎಂದು ಕಾಲೇಜಿನ ವಿದ್ಯಾರ್ಥಿನಿಯೊಬ್ಬರು ಅಳಲು
ಶಾಸಕರು, ತಹಸೀಲ್ದಾರ್, ವಿವಿ, ಜಿಲ್ಲಾಡಳಿತಕ್ಕೆ ಮನವಿ ಮಾಡಿದರೂ ಬಗೆಹರಿಯದ ಸಮಸ್ಯೆ
ನೂರಾರು ವಿದ್ಯಾರ್ಥಿನಿಯರು ಹೋಗಿ-ಬರುವ ಕಾಲೇಜಿಗೆ ಸುಸಜ್ಜಿತ ಸಿಸಿ ರಸ್ತೆ ನಿರ್ಮಿಸುವಂತೆ ಹಲವಾರು ಬಾರಿ ಹೋರಾಟ ಮಾಡಿ ತಹಸೀಲ್ದಾರ್, ಶಾಸಕರು ಹಾಗೂ ಜಿಲ್ಲಾಡಳಿತಕ್ಕೆ ಮನವಿ ಮಾಡಿದರೂ ಇದುವರೆಗೂ ಈ ಬಗ್ಗೆ ಗಮನಹರಿಸಿ, ಸಮಸ್ಯೆ ಪರಿಹರಿಸದಿರುವುದು ನಾಚಿಕೆಗೇಡಿನ ಸಂಗತಿಯೆಂದು ವಿದ್ಯಾರ್ಥಿನಿ ಪಾಲಕರೊಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ.