(ಕ್ವಿಕ್ ನ್ಯೂಸ್ : ಬಸವರಾಜ ಹಳ್ಳಿ)
ನಮ್ಮ ಸಿಂಧನೂರು, ಮಾರ್ಚ್ 20
ಕೊಪ್ಪಳ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಾಜಶೇಖರ ಹಿಟ್ನಾಳ್, ಮಾಜಿ ಸಚಿವ ಬಯ್ಯಾಪುರ ಅವರನ್ನು ಬುಧವಾರ ಕುಷ್ಟಗಿಯ ಅವರ ನಿವಾಸದಲ್ಲಿ ಭೇಟಿ ಮಾಡಿ ಕೆಲ ಹೊತ್ತು ಮಾತುಕತೆ ನಡೆಸಿದರು. ಕೊಪ್ಪಳ ಲೋಕಸಭಾ ಕ್ಷೇತ್ರಕ್ಕೆ ಎರಡನೇ ಬಾರಿಗೆ ರಾಜಶೇಖರ ಹಿಟ್ನಾಳ್ ಅವರನ್ನು ಕಾಂಗ್ರೆಸ್ ಹೈಕಮಾಂಡ್ ಘೋಷಿಸಿದ ಹಿನ್ನೆಲೆಯಲ್ಲಿ, ಪಕ್ಷದ ಹಿರಿಯ ಮುಖಂಡರು, ಹಿತೈಷಿಗಳು ಹಾಗೂ ಕಾರ್ಯಕರ್ತರನ್ನು ಹಿಟ್ನಾಳ್ ಭೇಟಿ ಮಾಡಿ ಅಲ್ಲಲ್ಲಿ ಸಭೆ ನಡೆಸಿದರು.
ಕೊಪ್ಪಳ ಟಿಕೆಟ್ಗೆ ರಾಜಶೇಖರ ಹಿಟ್ನಾಳ್, ಅಮರೇಗೌಡ ಬಯ್ಯಾಪುರ ಹಾಗೂ ಬಸನಗೌಡ ಬಾದರ್ಲಿ ಅವರ ಹೆಸರು ಕೇಳಿಬಂದಿತ್ತು. ಆದರೆ ಪಕ್ಷದ ಹೈಕಮಾಂಡ್ ಬಹು ಆಯಾಮದಲ್ಲಿ ಲೆಕ್ಕಾಚಾರ ಹಾಕಿ ರಾಜಶೇಖರ ಹಿಟ್ನಾಳ್ ಅವರಿಗೆ ಟಿಕೆಟ್ ನೀಡಿದೆ ಎಂದು ಹೇಳಲಾಗುತ್ತಿದೆ. ಪಕ್ಷದ ಟಿಕೆಟ್ ತಮಗೆ ಅಧಿಕೃತವಾಗುತ್ತಿದ್ದಂತೆ ಚುರುಕುಗೊಂಡಿರುವ ಹಿಟ್ನಾಳ್, ಹಿರಿಯ ನಾಯಕರು ಹಾಗೂ ಮಾಜಿ ಸಚಿವರಾದ ಕುಷ್ಟಗಿಯ ಅಮರೇಗೌಡ ಬಯ್ಯಾಪುರ ಅವರನ್ನು ಭೇಟಿ ಮಾಡಿ ಪಕ್ಷ ಸಂಘಟನೆಯ ಕುರಿತು ಕೆಲಕಾಲ ಚರ್ಚಿಸಿದರೆಂದು ತಿಳಿದುಬಂದಿದೆ. ಕಳೆದ 2019ರ ಚುನಾವಣೆಯಲ್ಲಿ ಬಿಜೆಪಿಯಿಂದ ಸಂಗಣ್ಣ ಕರಡಿ, ಕಾಂಗ್ರೆಸ್ನಿAದ ರಾಜಶೇಖರ ಇಟ್ನಾಳ್ ನಡುವೆ ಭಾರಿ ಪೈಪೋಟಿ ನಡೆದಿತ್ತು. ಈ ಚುನಾವಣೆಯಲ್ಲಿ ಬಿಜೆಪಿಯ ಸಂಗಣ್ಣ ಕರಡಿ ಅವರಿಗೆ 5,86,783 ಮತಗಳು ಬಂದರೆ, ರಾಜಶೇಖರ ಹಿಟ್ನಾಳ್ ಅವರ ಪರ 5,48,386 ಮತಗಳು ಚಲಾವಣೆಯಾಗಿದ್ದವು. ಹಿಟ್ನಾಳ್ 38,397 ಮತಗಳ ಅಂತರದಿಂದ ಪರಾಭವಗೊಂಡಿದ್ದರು.