(ಸ್ಪೆಷಲ್ ಸುದ್ದಿ: ಬಸವರಾಜ ಹಳ್ಳಿ)
ನಮ್ಮ ಸಿಂಧನೂರು, ಮಾರ್ಚ್ 20
ಟಿಕೆಟ್ ಕೈತಪ್ಪಿದ್ದರಿಂದ ಕೆರಳಿರುವ ಹಾಲಿ ಸಂಸದ ಸಂಗಣ್ಣ ಕರಡಿ ಅವರ ಅಭಿಮಾನಿಗಳು, ಹಿತೈಷಿಗಳು ಹಾಗೂ ಬೆಂಬಲಿಗರು ‘ಸ್ವಾಭಿಮಾನಿ ಕರಡಿ ಸಂಗಣ್ಣ ಅಭಿಮಾನಿಗಳ ಬಳಗ’ದ ವತಿಯಿಂದ ಕೊಪ್ಪಳದ ಶ್ರೀ ಶಿವಶಾಂತವೀರ ಕಲ್ಯಾಣ ಮಂಟಪದಲ್ಲಿ ಮಾರ್ಚ್ 21ರಂದು ಬೆಳಿಗ್ಗೆ 10 ಗಂಟೆಗೆ ಸಭೆ ಕರೆದಿದ್ದು, ಬಿಜೆಪಿ ವಲಯದಲ್ಲಿ ಸಂಚಲನ ಸೃಷ್ಟಿಸಿದೆ. ಎರಡು ಬಾರಿ ಪ್ರಬಲ ಸ್ಪರ್ಧೆ ಇದ್ದಾಗ್ಯೂ ಅಧಿಕ ಮತಗಳ ಅಂತರದಿಂದ ಸಂಗಣ್ಣ ಕರಡಿ ಅವರು ಗೆದ್ದು ಸಾಮರ್ಥ್ಯ ಪ್ರದರ್ಶಿಸಿದರೂ ಹೈಕಮಾಂಡ್ ಟಿಕೆಟ್ ನಿರಾಕರಿಸಿರುವುದು ಸರಿಯಲ್ಲ. ಟಿಕೆಟ್ ಕೈತಪ್ಪಿದಂದಿನಿಂದ ಹಾಲಿ ಸಂಸದರನ್ನು ಹೈಕಮಾಂಡ್‌ನ ಯಾವ ನಾಯಕರೂ ಸಂಪರ್ಕಿಸದೇ ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವಂತೆ ವರ್ತಿಸಿದ್ದಾರೆ. ಕಷ್ಟಪಟ್ಟು ಗೆದ್ದಾಗ ಹೆಗಲ ಮೇಲೆ ಎತ್ತಿಕೊಳ್ಳುವುದು, ಸ್ವಲ್ಪ ಹೆಚ್ಚು ಕಡಿಮೆಯಾದರೆ ದೂರ ತಳ್ಳುವ ಪಕ್ಷದ ಈ ನಡೆ ಶೋಭೆ ತರುವಂತದ್ದಲ್ಲ ಎಂದು ಸಂಸದರ ಬೆಂಬಲಿಗರೊಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ನಡುವೆ ಸಾಮಾಜಿಕ ಜಾಲತಾಣದಲ್ಲಿ ಅವರ ಅಭಿಮಾನಿಗಳ ಸಭೆಯ ಪೋಸ್ಟರ್‌ಗಳನ್ನು ಹಂಚಿಕೆ ಮಾಡುತ್ತಿರುವುದು ವರದಿಯಾಗಿದೆ.
8 ವಿಧಾನಸಭಾ ಕ್ಷೇತ್ರದ ಬೆಂಬಲಿಗರ ಸಭೆ
ಕೊಪ್ಪಳದ ಶ್ರೀ ಶಿವಶಾಂತವೀರ ಕಲ್ಯಾಣ ಮಂಟಪದಲ್ಲಿ, ಕೊಪ್ಪಳ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಕೊಪ್ಪಳ, ಗಂಗಾವತಿ, ಯಲಬುರ್ಗಾ, ಕನಕಗಿರಿ, ಕುಷ್ಟಗಿ, ರಾಯಚೂರು ಜಿಲ್ಲೆಯ ಸಿಂಧನೂರು, ಮಸ್ಕಿ ಹಾಗೂ ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ವಿಧಾನಸಭಾ ವ್ಯಾಪ್ತಿಯ ಮುಖಂಡರು, ಬೆಂಬಲಿಗರು, ಹಿತೈಷಿಗಳು ಹಾಗೂ ಅಭಿಮಾನಿಗಳ ಸಭೆಯನ್ನು ಕರೆಯಲಾಗಿದ್ದು, ಎಲ್ಲೆಡೆಯಿಂದಲೂ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಬಹಳಷ್ಟು ಅಭಿಮಾನಿಗಳು, ಬೆಂಬಲಿಗರು ಹಾಲಿ ಸಂಸದರಾದ ಸಂಗಣ್ಣ ಕರಡಿ ಅವರಿಗೆ ಟಿಕೆಟ್ ಕಟ್ ಮಾಡಿರುವುದು ತಪ್ಪು ಎಂದು ಹೇಳುತ್ತಿದ್ದಾರೆ ಎಂದು ಬೆಂಬಲಿಗರೊಬ್ಬರು ತಿಳಿಸಿದ್ದಾರೆ.
ಹೆಚ್ಚಿದ ಮುನಿಸು, ಬಂಡಾಯದ ಸೂಚನೆ
ಹಾಲಿ ಸಂಸದರಾದ ತಮ್ಮನ್ನು ನಿರ್ಲಕ್ಷಿಸಿ ಏಕಾಏಕಿ ಟಿಕೆಟ್ ಕಟ್ ಮಾಡಿರುವುದರಿಂದ ಅಸಮಾಧಾನಗೊಂಡಿರುವ ಸಂಗಣ್ಣ ಕರಡಿ ಅವರು ಬಂಡಾಯದ ಬಾವುಟ ಹಾರಿಸಲಿದ್ದಾರೆನ್ನುವ ಮಾತು ರಾಜಕೀಯ ವಲಯದಲ್ಲಿ ಕೇಳಿಬರುತ್ತಿದ್ದು, ಪ್ರತಿಸ್ಪರ್ಧಿ ಕಾಂಗ್ರೆಸ್ ಬಂಡಾಯವನ್ನು ಬಳಸಿಕೊಳ್ಳಲು ತೆರೆಮರೆಯ ಯತ್ನ ನಡೆಸಿದೆ ಎಂದು ಹೇಳಲಾಗುತ್ತಿದೆ. ಈ ನಡುವೆ ಗುರುವಾರದ ಬೆಂಬಲಿಗರ ಸಭೆಯ ಕಡೆಗೆ ಎಲ್ಲರ ಚಿತ್ತ ನೆಟ್ಟಿದೆ.