ನಮ್ಮ ಸಿಂಧನೂರು, ಮಾರ್ಚ್ 19
ನಗರದ ಹೃದಯ ಭಾಗದಲ್ಲಿರುವ ಸರ್ಕಾರಿ ಆಸ್ಪತ್ರೆಯ ಮುಖ್ಯದ್ವಾರ (ಬಾಗಿಲು) ಸೋಮವಾರ ಸಂಜೆ 5 ಗಂಟೆ ಸುಮಾರು ಮುಚ್ಚಿರುವ ಬಗ್ಗೆ ಸಾರ್ವಜನಿಕರಿಂದ ಮಾಹಿತಿ ಪಡೆದ ಕರ್ನಾಟಕ ರಾಷ್ಟç ಸಮಿತಿ ಪಕ್ಷದ ಮುಖಂಡರು, ತತ್ಕ್ಷಣವೇ ಆಸ್ಪತ್ರೆಗೆ ಭೇಟಿ ನೀಡಿ ಅಲ್ಲಿನ ವ್ಯವಸ್ಥೆ ಯನ್ನು ಬಹಿರಂಗಪಡಿಸಿ, ಆಸ್ಪತ್ರೆ ಸಿಬ್ಬಂದಿಗೆ ತರಾಟೆಗೆ ತೆಗೆದುಕೊಳ್ಳುವ ಮೂಲಕ ಮುಖ್ಯದ್ವಾರವನ್ನು ತೆರೆಸಿದ ಘಟನೆ ನಡೆದಿದೆ. ಆಸ್ಪತ್ರೆಗೆ ಬಂದಿದ್ದ ರೋಗಿಯೊಬ್ಬರು ಕೆಲಹೊತ್ತಿನಿಂದ ಏಕಾಏಕಿ ಮುಖ್ಯದ್ವಾರ ಮುಚ್ಚಿ ಕೀಲಿಹಾಕಿದ್ದಾರೆ, ಇದರಿಂದ ರೋಗಿಗಳಿಗೆ ಹೋಗಿಬರಲು ಸಮಸ್ಯೆಯಾಗುತ್ತಿದೆ ಎಂದು ಕೆಆರ್ಎಸ್ ಪಾರ್ಟಿಯ ರಾಜ್ಯ ಯುವ ಘಟಕದ ಅಧ್ಯಕ್ಷ ನಿರುಪಾದಿ ಗೋಮರ್ಸಿ ಅವರ ಗಮನಕ್ಕೆ ತಂದಿದ್ದಾರೆ. ಕೂಡಲೇ ಅಲ್ಲಿಗೆ ಭೇಟಿ ನೀಡಿದ ಗೋಮರ್ಸಿ ಅವರು ಮುಖ್ಯದ್ವಾರ (ಬಾಗಿಲು) ಮುಚ್ಚಿರುವುದನ್ನು ಗಮನಿಸಿ, ಆಸ್ಪತ್ರೆ ಸಿಬ್ಬಂದಿಯವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಮುಖ್ಯದ್ವಾರ ಏಕೆ ಮುಚ್ಚಿದ್ದೀರಿ, ಕೆಆರ್ಎಸ್ ಪ್ರಶ್ನೆ
“ಸೋಮವಾರ ಸಂಜೆ 5 ಗಂಟೆಗೆ ತಾಲೂಕು ಆಸ್ಪತ್ರೆಯ ಮುಖ್ಯದ್ವಾರಕ್ಕೆ (ಬಾಗಿಲು) ಕೀಲಿ ಹಾಕಿ ಬಂದ್ ಮಾಡಲಾಗಿತ್ತು; ಇದರಿಂದ ರೋಗಿಗಳು ಹೊರ ಹೋಗಲು, ಒಳ ಬರಲು ಕಷ್ಟ ಪಡುತ್ತಿದ್ದರು. ನಾನು ಮತ್ತು ನಮ್ಮ ಪಕ್ಷದ ಕಾರ್ಯಕರ್ತರು ಆಸ್ಪತ್ರೆಯ ಸಿಬ್ಬಂದಿಗೆ, ಮುಖ್ಯದ್ವಾರ ಮುಚ್ಚಿರುವುದು ಯಾಕೆ ? ಏನು ಕಾರಣ ಎಂದು ಪ್ರಶ್ನಿಸುತ್ತಿದ್ದಂತೆ, ಇನ್ನೊಂದು ಮಾರ್ಗ ತೋರಿಸಿದರು, ಹಾಗಾದರೆ ಈ ದ್ವಾರ ಏಕೆ ಬಂದ್ ಮಾಡಿದ್ದೀರಿ ಎಂದು ಪ್ರಶ್ನಿಸುತ್ತಿದ್ದಂತೆ ಆಸ್ಪತ್ರೆಯ ಸಿಬ್ಬಂದಿಯೊಬ್ಬರು ಓಡೋಡಿ ಬಂದು ಮುಖ್ಯದ್ವಾರಕ್ಕೆ ಹಾಕಿದ್ದ ಕೀಲಿ ತೆಗೆದರು. ಪಕ್ಕದಲ್ಲಿ ತಹಸೀಲ್ ಆಫೀಸ್, ಪೊಲೀಸ್ ಠಾಣೆಯಿದ್ದರೂ ಆಸ್ಪತ್ರೆಯವರು ಹಾಡಹಗಲೇ ಮುಖ್ಯದ್ವಾರಕ್ಕೆ ಬೀಗ ಹಾಕಿ, ರೋಗಿಗಳಿಗೆ ಸಮಸ್ಯೆ ಮಾಡಿರುವುದು ದುರಂತವೇ ಸರಿ’’ ಎಂದು ನಿರುಪಾದಿ ಗೋಮರ್ಸಿ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆಸ್ಪತ್ರೆಯ ಮುಖ್ಯದ್ವಾರ ತೆರೆಯುತ್ತಿದ್ದಂತೆ ಹೊರಗಡೆ ಕಾಯುತ್ತ ಕುಳಿತಿದ್ದ ಸಾರ್ವಜನಿಕರು ನಿಟ್ಟುಸಿರುಬಿಟ್ಟರು. ಆಸ್ಪತ್ರೆಯ ಅವ್ಯವಸ್ಥೆಯನ್ನು ಪ್ರಶ್ನಿಸುವ ಮೂಲಕ ಬಾಗಿಲು ತೆರೆಸಿದ ನಿರುಪಾದಿ ಗೋಮರ್ಸಿ ಅವರ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಯಿತು.