ಕೊಪ್ಪಳ ಲೋಕಸಭಾ ಕ್ಷೇತ್ರ: ರಾಜಶೇಖರ ಹಿಟ್ನಾಳ್‌ಗೆ ಕೈ ಟಿಕೆಟ್ ಫಿಕ್ಸ್ ?

Spread the love

( ಸ್ಪೆಷಲ್ ನ್ಯೂಸ್: ಬಸವರಾಜ ಹಳ್ಳಿ )
ನಮ್ಮ ಸಿಂಧನೂರು, ಮಾರ್ಚ್ 18
ಮೇ 7ರಂದು ಎರಡನೇ ಹಂತದಲ್ಲಿ ನಡೆಯುವ ಕೊಪ್ಪಳ ಲೋಕಸಭಾ ಕ್ಷೇತ್ರದ ಚುನಾವಣೆಗೆ ಈಗಾಗಲೇ ಬಿಜೆಪಿ ಡಾ.ಬಸವರಾಜ ಕ್ಯಾವಟರ್ ಅವರನ್ನು ಅಭ್ಯರ್ಥಿಯಾಗಿ ಘೋಷಿಸಿದ್ದು, ಕಾಂಗ್ರೆಸ್‌ನಿಂದ ಸಂಭಾವ್ಯ ಅಭ್ಯರ್ಥಿಯಾಗಿ ಘೋಷಿಸಲ್ಪಟ್ಟಿರುವ ರಾಜಶೇಖರ ಹಿಟ್ನಾಳ್ ಅವರೇ ಅಭ್ಯರ್ಥಿಯಾಗಲಿದ್ದಾರೆನ್ನುವ ಮಾಹಿತಿ ತಿಳಿದುಬಂದಿದೆ. 2014ರ ಚುನಾವಣೆಯಲ್ಲಿ ಮೊದಲ ಬಾರಿಗೆ ಕಾಂಗ್ರೆಸ್‌ನಿಂದ ಟಿಕೆಟ್ ಪಡೆದುಕೊಂಡು ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ್ದ ಬಸವರಾಜ ಹಿಟ್ನಾಳ್ ಅವರು ಬಿಜೆಪಿಯ ಸಂಗಣ್ಣ ಕರಡಿ ಅವರೊಂದಿಗೆ ಪರಾಭವಗೊಂಡಿದ್ದರು. 2019ರಲ್ಲಿ ನಡೆದ ಎಂಪಿ ಚುನಾವಣೆಯಲ್ಲಿ ಅವರ ಪುತ್ರ ರಾಜಶೇಖರ ಹಿಟ್ನಾಳ್ ಪುನಃ ಸಂಗಣ್ಣ ಕರಡಿ ಅವರೊಂದಿಗೆ ಸ್ಪರ್ಧಿಸಿ 38,397 ಮತಗಳ ಅಂತರದಿಂದ ಸೋಲುಂಡಿದ್ದರು. ಈ ಚುನಾವಣೆಯಲ್ಲಿ ಬಿಜೆಪಿಯ ಸಂಗಣ್ಣ ಕರಡಿ ಅವರಿಗೆ 5,86,783 ಮತಗಳು ಬಂದರೆ, ರಾಜಶೇಖರ ಹಿಟ್ನಾಳ್ ಅವರ ಪರ 5,48,386 ಮತಗಳು ಚಲಾವಣೆ ಆಗಿದ್ದವು.

Namma Sindhanuru Click For Breaking & Local News

ಅನುಕಂಪದ ಅಲೆ ಬೋನಸ್ ಆಗುವುದೇ ? :
ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆ ಎಂದರೆ ಕರಡಿ ಹಾಗೂ ಹಿಟ್ನಾಳ್ ಕುಟುಂಬದ ನಡುವಿನ ಸ್ಪರ್ಧೆ ಎನ್ನುವ ವಾತಾವರಣ ಬಹು ಹಿಂದಿನಿಂದಲೂ ಇದೆ ಎನ್ನುವುದು ಸಾರ್ವಜನಿಕರ ಅಭಿಪ್ರಾಯವಾಗಿದೆ. ಆದರೆ ಈ ಬಾರಿ ಬಿಜೆಪಿ ತನ್ನ ಅಭ್ಯರ್ಥಿಯನ್ನು ಬದಲಿಸಿದ್ದು, ಕುಷ್ಟಗಿಯ ಮಾಜಿ ಶಾಸಕ ಕೆ.ಶರಣಪ್ಪ ಅವರ ಪುತ್ರ ವೃತ್ತಿಯಲ್ಲಿ ವೈದ್ಯರಾಗಿರುವ ಬಸವರಾಜ ಕ್ಯಾವಟರ್ ಅವರಿಗೆ ಟಿಕೆಟ್ ನೀಡಿದೆ. ಕಳೆದ ಎರಡು ಚುನಾವಣೆಯಲ್ಲಿ ತಂದೆ ಮತ್ತು ಮಗ ಇಬ್ಬರೂ ಬಿಜೆಪಿ ಅಭ್ಯರ್ಥಿಯ ವಿರುದ್ಧ ಸೋಲುಂಡಿದ್ದು, ಈ ಬಾರಿ ಪುನಃ ರಾಜಶೇಖರ ಹಿಟ್ನಾಳ್ ಅವರನ್ನು ಅಭ್ಯರ್ಥಿಯಾಗಿ ಮಾಡುವುದರಿಂದ ಅನುಕಂಪದ ಅಲೆ ಕೆಲಸ ಮಾಡಲಿದೆ ಎನ್ನುವ ಚರ್ಚೆಗಳು ಕಾಂಗ್ರೆಸ್ ವಲಯದಲ್ಲಿ ವ್ಯಾಪಕವಾಗಿವೆ.

Namma Sindhanuru Click For Breaking & Local News

ಸಿಎಂ ಅಭಯ ?
ಹಾಲಿ ಸಿಎಂ ಸಿದ್ದರಾಮಯ್ಯ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಕೊಪ್ಪಳ ಎಂಎಲ್‌ಎ ರಾಘವೇಂದ್ರ ಹಿಟ್ನಾಳ್ ತಮ್ಮ ಸೋದರನಿಗೆ ಟಿಕೆಟ್ ಕೊಡಿಸಲು ಒತ್ತಡ ತಂದಿದ್ದಾರೆಂದು ಹೇಳಲಾಗುತ್ತಿದೆ. ಇದಕ್ಕೆ ಪರೋಕ್ಷವಾಗಿ ಸಿಎಂ ಸಿದ್ದರಾಮಯ್ಯ ಅವರು ಗ್ರೀನ್ ಸಿಗ್ನಲ್ ನೀಡಿದ್ದು, ಕ್ಷೇತ್ರದ ಸಂಭಾವ್ಯ ಅಭ್ಯರ್ಥಿಯಾಗಿ ರಾಜಶೇಖರ ಹಿಟ್ನಾಳ್ ಅವರ ಹೆಸರೇ ಮುನ್ನೆಲೆಗೆ ಬಂದಿದೆ. ಇದರ ನಡುವೆಯೂ ಮಾಜಿ ಸಚಿವ ಕುಷ್ಟಗಿಯ ಅಮರೇಗೌಡ ಬಯ್ಯಾಪುರ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸಿಂಧನೂರಿನ ಬಸನಗೌಡ ಬಾದರ್ಲಿ ಅವರು ಟಿಕೆಟ್‌ಗಾಗಿ ಪ್ರಯತ್ನ ನಡೆಸಿದ್ದಾರೆಂದು ಹೇಳಲಾಗುತ್ತಿದೆ.

Namma Sindhanuru Click For Breaking & Local News

ಬ್ಯಾಕ್‌ವರ್ಡ್/ಫಾರ್ವರ್ಡ್ ಮುನ್ನೆಲೆಗೆ
ಈಗಾಗಲೇ ಬಿಜೆಪಿ ಲಿಂಗಾಯತ ಸಮುದಾಯದ ಅಭ್ಯರ್ಥಿಗೆ ಟಿಕೆಟ್ ಘೋಷಣೆ ಮಾಡಿದ್ದು, ಕಾಂಗ್ರೆಸ್‌ನಲ್ಲಿಯೂ ಅದೇ ಸಮುದಾಯದ ಅಭ್ಯರ್ಥಿಗೆ ಟಿಕೆಟ್ ಕೊಡುವುದಕ್ಕಿಂತ ಹಿಂದುಳಿದ ಸಮುದಾಯದ ಅಭ್ಯರ್ಥಿಗೆ ಟಿಕೆಟ್ ಕೊಡುವುದರಿಂದ ಬಹಳಷ್ಟು ಅನುಕೂಲವಾಗಲಿದೆ ಎನ್ನುವ ಚರ್ಚೆಗಳಿದ್ದು, ಇದರ ಹಿಂದೆ ಬ್ಯಾಕ್‌ವರ್ಡ್/ಫಾರ್ವರ್ಡ್ ಲೆಕ್ಕಾಚಾರ ಇದೆ ಎಂದೇ ಹೇಳಲಾಗುತ್ತಿದೆ. ಕೊಪ್ಪಳ ಲೋಕಸಭೆಯಲ್ಲಿ ಕಳೆದ ಮೂರು ಚುನಾವಣೆಯಲ್ಲಿ ಲಿಂಗಾಯತ ಸಮುದಾಯದ ಅಭ್ಯರ್ಥಿಗಳೇ ಗೆಲುವು ಸಾಧಿಸಿದ್ದಾರೆ. ಈ ಬಾರಿ ಕುರುಬ ಸಮುದಾಯದ ಅಭ್ಯರ್ಥಿಗೆ ಮಣೆ ಹಾಕುವುದರಿಂದ ಗ್ಯಾರಂಟಿ ಅಲೆ, ಬ್ಯಾಕ್‌ವರ್ಡ್-ಫಾರ್ವರ್ಡ್ ಲೆಕ್ಕಾಚಾರ ಬೋನಸ್ ಆಗಲಿದೆ ಎಂದು ಹೆಸರೇಳಲಿಚ್ಚಿಸದ ಕಾಂಗ್ರೆಸ್ ಮುಖಂಡರು ತಿಳಿಸಿದ್ದಾರೆ.


Spread the love

Leave a Reply

Your email address will not be published. Required fields are marked *