ಸ್ಪೆಷಲ್ ನ್ಯೂಸ್: ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಮಾರ್ಚ್ 15
26 ವರ್ಷಗಳ ನಂತರ ರೈಲು ಸಂಚಾರ ಕಂಡ ಸಿಂಧನೂರು ತಾಲೂಕಿನ ಜನ ಮಾರ್ಚ್ 15ರಂದು ಹಬ್ಬದಂತೆ ಸಂಭ್ರಮಿಸಿದರು, ಬೆಳಿಗ್ಗೆಯಿಂದ ಸಂಜೆವರೆಗೆ ರೈಲ್ವೆ ನಿಲ್ದಾಣಕ್ಕೆ ಜನಸಾಗರವೇ ಹರಿದುಬಂತು. ಎರಡೂವರೆ ದಶಕಗಳ ನಂತರ ರೈಲೇನು ಬಂತು ಆದರೆ, ಈ ನಿಲ್ದಾಣಕ್ಕೆ ತಲುಪುವ ಸಂಪರ್ಕ ರಸ್ತೆ ಇದುವರೆಗೂ ನಿರ್ಮಾಣ ಆಗದೇ ಇರುವುದು ಪ್ರಯಾಣಿಕರ ಅಸಮಾಧಾನಕ್ಕೆ ಕಾರಣವಾಗಿದೆ. ನಗರಕ್ಕೆ ರೈಲು ಬಂತೆನ್ನುವ ಖುಷಿಯಲ್ಲಿ ಜನರು ಅಧ್ವಾನ ರಸ್ತೆಯಲ್ಲಿ ಎದ್ದುಬಿದ್ದು ಸಂಚರಿಸಿದರು. ಉದ್ಘಾಟನೆಗೆ ಬಂದವರೂ ಸಹ ಇದೇ ತಗ್ಗು-ದಿನ್ನೆಯ ರಸ್ತೆಯಲ್ಲೇ ರೈಲು ಸಂಚಾರಕ್ಕೆ ಹಸಿರು ನಿಶಾನೆ ತೋರಿಸಿ ಹೋದರು ಆದರೆ, ದಿನವೂ ಇದೇ ರಸ್ತೆಯಲ್ಲಿ ಹೇಗೆ ನಡೆದಾಡಬೇಕು ಎನ್ನುವುದು ಸಾರ್ವಜನಿಕರ ಅಳಲಾಗಿದೆ.
ಗಂಗಾವತಿ ಮುಖ್ಯ ರಸ್ತೆಯಿಂದ ರೈಲ್ವೆ ನಿಲ್ದಾಣಕ್ಕೆ ಅಂದಾಜ 1 ಕಿ.ಮೀ ಅಂತರ ಇದೆ. ಈ ಮಾರ್ಗದಲ್ಲಿ ರಸ್ತೆ ಸಂಪೂರ್ಣ ಹದೆಗಟ್ಟಿದ್ದು, ಎಲ್ಲೆಂದರಲ್ಲಿ ತಗ್ಗು ದಿನ್ನೆಗಳು ಬಿದ್ದಿವೆ. ಬೇಸಿಗೆ ಸಂದರ್ಭದಲ್ಲಿ ಅದೇಗೋ ನಡೆದುಕೊಂಡು ಹೋಗಬಹುದು ಇನ್ನು ಮಳೆಗಾಲದಲ್ಲಿ ಪರಿಸ್ಥಿತಿ ಅಧೋಗತಿಗೆ ತಲುಪುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಪ್ರಯಾಣಿಕರೊಬ್ಬರು ಹೇಳುತ್ತಾರೆ. ಕಳೆದ ಎರಡು ವರ್ಷಗಳಿಂದ ರೈಲ್ವೆ ಸಂಚಾರ ಆರಂಭ ಆಗುತ್ತದೆ ಎನ್ನುವ ಮುನ್ಸೂಚನೆಯ ನಡುವೆ ಹಲವು ಕೆಲಸಗಳು ಶೀಘ್ರಗತಿಯಲ್ಲಿ ನಡೆದರೂ ಇಲ್ಲಿಯವರೆಗೂ ಸಂಪರ್ಕ ರಸ್ತೆ ನಿರ್ಮಾಣದ ಬಗ್ಗೆ ಕಾಳಜಿ ವಹಿಸದೇ ಇರುವುದು ವಿಪರ್ಯಾಸದ ಸಂಗತಿಯಾಗಿದೆ ಎಂದು ಸಾರ್ವಜನಿಕರೊಬ್ಬರು ಆರೋಪಿಸುತ್ತಾರೆ.
ಆಟೋ, ದ್ವಿಚಕ್ರ ಚಲಾಯಿಸಲು ಸಂಕಷ್ಟ:
ರೈಲ್ವೆ ನಿಲ್ದಾಣ ಸಂಪರ್ಕ ರಸ್ತೆ ಸಂಪೂರ್ಣ ಕಚ್ಚಾ ರಸ್ತೆಯಾಗಿದ್ದು, ಎಲ್ಲೆಂದರಲ್ಲಿ ತಗ್ಗು-ದಿನ್ನೆಗಳು ಬಿದ್ದಿವೆ. ಅಕ್ಕಪಕ್ಕದಲ್ಲಿ ರೈತರ ಹೊಲಗಳಿದ್ದು, ಬಸಿ ನೀರಿನಿಂದಾಗಿ ಅಲ್ಲಲ್ಲಿ ಕಡಿದಾದ ಪ್ರದೇಶ ನಿರ್ಮಾಣವಾಗಿದ್ದು, ಆಯತಪ್ಪಿದರೆ ಅಪಘಾತ ಗ್ಯಾರಂಟಿ. ಇನ್ನು ಆಟೋ, ದ್ವಿಚಕ್ರ ವಾಹನ ಚಲಾಯಿಸಲು ಹರಸಾಹಸ ಮಾಡಬೇಕಿದೆ. ಪ್ರಯಾಣಿಕರನ್ನು ಆಟೋದಲ್ಲಿ ಕುಳ್ಳಿರಿಸಿಕೊಂಡು ಚಲಾಯಿಸಲು ಚಾಲಕರು ಭಯಪಡುತ್ತಾರೆ.
ಸಂಪರ್ಕ ರಸ್ತೆ ದುರಸ್ತಿಗೊಳಿಸಿ:
ಸಿಂಧನೂರು ನಗರ ಪ್ರಮುಖ ವಾಣಿಜ್ಯ ಕೇಂದ್ರವಾಗಿದ್ದು, ಬೆಂಗಳೂರು, ಹುಬ್ಬಳ್ಳಿ ಸೇರಿದಂತೆ ಇನ್ನಿತರೆ ನಗರಗಳಿಗೆ ದಿನವೂ ಹೆಚ್ಚಿನ ಸಂಖ್ಯೆಯ ಪ್ರಯಾಣಿಕರು ರೈಲ್ವೆ ಸಂಚಾರ ಮಾಡುವುದರಿಂದ ಸಂಪರ್ಕ ರಸ್ತೆ ದುರಸ್ತಿ ಅನಿವಾರ್ಯವಾಗಿದೆ. ಹಾಗಾಗಿ ಕೂಡಲೇ ಸಂಬಂಧಿಸಿದ ಇಲಾಖೆಯವರು ಸಂಪರ್ಕ ರಸ್ತೆ ನಿರ್ಮಿಸುವ ಮೂಲಕ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.