ರಾಜಕೀಯ ವಿಶ್ಲೇಷಣೆ: ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಮಾರ್ಚ್ 15
ಎರಡು ಬಾರಿ ಕೊಪ್ಪಳದ ಎಂಪಿಯಾಗಿ ಮೂರನೇ ಬಾರಿಗೆ ಟಿಕೆಟ್ ಪಡೆಯುವ ವಿಶ್ವಾಸದಲ್ಲಿದ್ದ ಸಂಗಣ್ಣ ಕರಡಿ ಅವರಿಗೆ ಈ ಬಾರಿ ಟಿಕೆಟ್ ಕೈತಪ್ಪಿದ್ದು, ಬೆಂಬಲಿಗರು, ಹಿತೈಷಿಗಳು ಹಾಗೂ ಅಭಿಮಾನಿಗಳಲ್ಲಿ ಅಸಮಾಧಾನ ಬುಗಿಲೆದ್ದಿದೆ. ಕೊಪ್ಪಳ ಬಿಜೆಪಿ ಕಚೇರಿಯಲ್ಲಿ ಗುರುವಾರ ಬಿಜೆಪಿ ಜಿಲ್ಲಾಧ್ಯಕ್ಷ ಹಾಗೂ ಕುಷ್ಟಗಿ ಶಾಸಕ ದೊಡ್ಡನಗೌಡ ಪಾಟೀಲ್ ಹಾಗೂ ಟಿಕೆಟ್ ಘೋಷಿತ ಅಭ್ಯರ್ಥಿ ಮಾಜಿ ಶಾಸಕ ಕೆ.ಶರಣಪ್ಪ ಅವರ ಪುತ್ರ ಡಾ.ಬಸವರಾಜ ಕ್ಯಾವಟರ್ ಅವರ ಮುಂದೆಯೇ ಕೆಲವರು ಬಹಿರಂಗವಾಗಿ ಆಕ್ರೋಶ ವ್ಯಕ್ತಪಡಿಸಿದ್ದಲ್ಲದೇ, ಪೀಠೋಪಕರಣ, ಗಾಜು ಪುಡಿಗಟ್ಟಿರುವುದು ರಾಜಕೀಯ ವಲಯದಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. ಇನ್ನೂ ಪ್ರಚಾರಕ್ಕೆ ಮುನ್ನವೇ ಟಿಕೆಟ್ ಗಲಾಟೆ ಪಕ್ಷದಲ್ಲಿ ಗೊಂದಲವನ್ನು ಸೃಷ್ಟಿಸಿದೆ. ವಿಧಾನಸಭಾ ಚುನಾವಣೆಯಲ್ಲಿ ಸಿ.ವಿ.ಚಂದ್ರಶೇಖರ ಅವರ ಪ್ರಬಲ ವಿರೋಧ ಎದುರಿಸಿ ಸೊಸೆಗೆ ಟಿಕೆಟ್ ಪಡೆದುಕೊಂಡಿದ್ದ ಸಂಗಣ್ಣ ಕರಡಿ ಅವರು, ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ಪಡೆಯುವಲ್ಲಿ ವಿಫಲರಾಗಿದ್ದು, ಚುನಾವಣೆ ರಾಜಕಾರಣದಲ್ಲಿ ಹಿನ್ನಡೆ ಅನುಭವಿಸಿದ್ದಾರೆಂದೇ ಹೇಳಲಾಗುತ್ತಿದೆ. ಹೈಕಮಾಂಡ್‌ಗೆ ಏನೆಲ್ಲಾ ಮನವರಿಕೆ ಮಾಡಿದರೂ ಟಿಕೆಟ್ ಬೇರೆಯವರ ಪಾಲಾಗಿದ್ದು, ಇದರಿಂದ ಸಂಗಣ್ಣ ಅವರು ಅಸಮಾಧಾನಗೊಂಡಿದ್ದಾರೆಂದು ಹೇಳಲಾಗುತ್ತಿದೆ.
ಜೆಡಿಎಸ್, ಬಿಜೆಪಿ ಮೈತ್ರಿ ಎಫೆಕ್ಟ್:
ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಮಾಡಿಕೊಂಡಿದ್ದು, ಅದರ ಎಫೆಕ್ಟ್ ಕೊಪ್ಪಳ ಕ್ಷೇತ್ರಕ್ಕೂ ತಟ್ಟಿದೆ. ಈ ಹಿಂದೆ ಎರಡು ಬಾರಿ ಕೊಪ್ಪಳ ವಿಧಾನಸಭಾ ಕ್ಷೇತ್ರಕ್ಕೆ ಬಿಜೆಪಿಯಿಂದ ಟಿಕೆಟ್ ಆಕಾಂಕ್ಷಿಯಾಗಿದ್ದ ಸಿ.ವಿ.ಚಂದ್ರಶೇಖರ, ಸಂಗಣ್ಣ ಕರಡಿ ಕುಟುಂಬದ ಪ್ರಬಲ ವಿರೋಧ ಎದುರಿಸಲಾಗದೇ ಕೈಚೆಲ್ಲಿದ್ದರು. ಇದೇ ಮುನಿಸಿನಿಂದ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್‌ಗೆ ಜಿಗಿದು ಸ್ಪರ್ಧೆ ಮಾಡಿ ಪರಾಭವಗೊಂಡಿದ್ದರು. ಆದರೆ ಬದಲಾದ ರಾಜಕೀಯ ವಾತಾವರಣದಿಂದಾಗಿ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಮಾಡಿಕೊಂಡಿದ್ದರೂ, ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ಹಳೇ ಮುನಿಸು ಮುನ್ನೆಲೆಗೆ ಬಂದಿದ್ದು, ಮೈತ್ರಿ ಇಲ್ಲಿ ವರ್ಕೌಟ್ ಆಗಿಲ್ಲ ಎಂದೇ ಹೇಳಲಾಗುತ್ತಿದೆ. ಹೀಗಾಗಿ ಸಾರ್ವಜನಿಕ ವಲಯದಲ್ಲಿ ಮೈತ್ರಿ ಆಟಕ್ಕುಂಟ ಲೆಕ್ಕಿಕ್ಕಿಲ್ಲ ಎನ್ನುವ ಮಾತುಗಳಿವೆ.
ಮಾಜಿ ಸಂಸದರೊಬ್ಬರ ಪ್ರಬಲ ವಿರೋಧ:
ಬಿಜೆಪಿ ಪಕ್ಷದ ಮಾಜಿ ಸಂಸದರೊಬ್ಬರು ಹಾಲಿ ಸಂಸದ ಸಂಗಣ್ಣ ಕರಡಿ ಅವರ ಬಗ್ಗೆ ಮುನಿಸು ಹೊಂದಿರುವ ಬಗ್ಗೆ ಇತ್ತೀಚಿನ ದಿನಗಳಲ್ಲಿ ವ್ಯಾಪಕವಾಗಿ ಚರ್ಚೆಯಾಗಿತ್ತು. ಕಾರ್ಯಕ್ರಮವೊಂದರಲ್ಲಿ ಬಹಿರಂಗವಾಗಿಯೇ ಸಂಸದ ಸಂಗಣ್ಣ ಕರಡಿ ಅವರ ಬಗ್ಗೆ ಟೀಕೆ ಮಾಡಿದ್ದ ಬಗ್ಗೆ ಪಕ್ಷದಲ್ಲಿ ಸಂಚಲನ ಸೃಷ್ಟಿ ಮಾಡಿತ್ತು. ಹೀಗಾಗಿ ಪಕ್ಷದ ಆಂತರಿಕ ಸರ್ವೆ ಮತ್ತು ಮುಖಂಡರ ಅಭಿಪ್ರಾಯ ಸಂಗ್ರಹದ ಸಂದರ್ಭದಲ್ಲಿಯೇ ಕರಡಿ ಅವರ ಬಗ್ಗೆ ಕೆಲವರು ಅಸಮಾಧಾನ ಹೊರಹಾಕಿದ್ದರು ಎಂದು ಮೂಲಗಳಿಂದ ತಿಳಿದುಬಂದಿದೆ. ಹೀಗಾಗಿ ಈ ಬಾರಿ ಹೊಸ ಮುಖಕ್ಕೆ ಅವಕಾಶ ನೀಡಲಾಗಿದೆ ಎನ್ನುವ ಮಾತುಗಳು ಕೇಳಿಬಂದಿವೆ.
ಸಂಗಣ್ಣ ಕರಡಿ ಅವರ ನಡೆ ಯಾವ ಕಡೆ ?
ಯಡಿಯೂರಪ್ಪ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರ ಆಪ್ತ ವಲಯದಲ್ಲಿದ್ದ ಸಂಗಣ್ಣ ಕರಡಿ ಅವರಿಗೆ ಟಿಕೆಟ್ ಕೈತಪ್ಪಿರುವುದು ಅವರ ಬೆಂಬಲಿಗರು ಹಾಗೂ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿರುವುದಂತೂ ಸತ್ಯ. ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಬಿಜೆಪಿ ಸಂಗಣ್ಣ ಅವರ ಕುಟುಂಬಕ್ಕೆ ಟಿಕೆಟ್ ನಿರಾಕರಿಸಿದ ಸಂದರ್ಭದಲ್ಲಿ, ಲೋಕಸಭೆ ಕೈಬಿಟ್ಟು, ಅನ್ಯ ಪಕ್ಷದಿಂದ ವಿಧಾನಸಭೆಯತ್ತ ಮುಖ ಮಾಡಲಿದ್ದಾರೆನ್ನು ವದಂತಿಗಳು ಹಬ್ಬಿದ ಬೆನ್ನಲ್ಲೇ ಪಕ್ಷದ ಹೈಕಮಾಂಡ್ ಅವರ ಕುಟುಂಬಕ್ಕೆ ಎಮ್ಮೆಲ್ಲೆ ಟಿಕೆಟ್ ನೀಡಿ, ಸಮಾಧಾನಗೊಳಿಸಿತ್ತು ಎಂದೇ ಹೇಳಲಾಗಿತ್ತು. ಆದರೆ ಈ ಚುನಾವಣೆಯಲ್ಲಿ ಸಂಗಣ್ಣ ಕರಡಿ ಅವರ ಸೊಸೆ ಸೋಲನುಭವಿಸಿದ್ದು ಈಗ ಇತಿಹಾಸ. “ಹಾಲಿ ಎಂಪಿಯಾಗಿದ್ದಾಗಲೇ ಟಿಕೆಟ್ ನಿರಾಕರಿಸಿರುವುದು ಸರಿಯಲ್ಲ, ಕೊಪ್ಪಳ ಕ್ಷೇತ್ರದಲ್ಲಿ ಯಾವುದೇ ವಿವಾದಗಳಿಲ್ಲದೇ ಅತ್ಯಂತ ಸಮರ್ಥವಾಗಿ ಆಡಳಿತ ನಿರ್ವಹಿಸಿ, ಅಭಿವೃದ್ಧಿ ದೃಷ್ಟಿಯಿಂದ ಕೆಲಸ ಮಾಡಿದವರಿಗೆ ಪಕ್ಷ ಅವಮಾನ ಮಾಡಿದೆ” ಎಂಬುದು ಬೆಂಬಲಿಗರು, ಕಾರ್ಯಕರ್ತರು ಹಾಗೂ ಅಭಿಮಾನಿಗಳ ಆರೋಪವಾಗಿದೆ.
ಎಮ್ಮೆಲ್ಸಿ ಆಫರ್ ?
ಬಿಜೆಪಿ ಟಿಕೆಟ್ ಕೈತಪ್ಪಿದವರಿಗೆ ಮುಂಬರುವ ದಿನಗಳಲ್ಲಿ ವಿಧಾನ ಪರಿಷತ್‌ನ ಸದಸ್ಯರನ್ನಾಗಿ ನೇಮಕ ಮಾಡಲಾಗುತ್ತದೆ ಎನ್ನುವ ಚರ್ಚೆಗಳಿದ್ದು, ಈ ನಿಟ್ಟಿನಲ್ಲಿ ಸಂಗಣ್ಣ ಕರಡಿ ಅವರಿಗೂ ಹೈಕಮಾಂಡ್ ಎಮ್ಮೆಲ್ಸಿ ಆಫರ್ ಕೊಟ್ಟು, ಉನ್ನತ ಸ್ಥಾನ ಮಾನದ ಭರವಸೆ ನೀಡಿದೆ ಎನ್ನುವ ಮಾತುಗಳು ರಾಜಕೀಯ ಪಡಸಾಲೆಯಲ್ಲಿ ಚರ್ಚೆಯಾಗುತ್ತಿವೆ. ಆದರೆ ಇದಕ್ಕೆ ಸಂಗಣ್ಣ ಕರಡಿ ಅವರು ಸಮಾಧಾನಗೊಂಡಿಲ್ಲ ಎಂದು ಹೇಳಲಾಗುತ್ತಿದ್ದು, ತಮಗೆ ಟಿಕೆಟ್ ಕೈತಪ್ಪಿದ ಬಗ್ಗೆ ಮತ್ತು ಮುಂದಿನ ನಿರ್ಧಾರದ ಬಗ್ಗೆ ಕಾರ್ಯಕರ್ತರು ಹಾಗೂ ಅಭಿಮಾನಿಗಳೊಂದಿಗೆ ಚರ್ಚೆ ನಡೆಸುತ್ತಿದ್ದಾರೆನ್ನುವ ಕುರಿತು ಬಲ್ಲ ಮೂಲಗಳಿಂದ ತಿಳಿದುಬಂದಿದೆ.