ನಮ್ಮ ಸಿಂಧನೂರು, ಮಾರ್ಚ್ 11
ಕುಡಿವ ನೀರಿನ ಉದ್ದೇಶಕ್ಕೆ ನಂ.54ನೇ ಉಪಕಾಲುವೆಗೆ ನೀರನ್ನು ಹರಿಬಿಟ್ಟಿದ್ದು, ಕೆಲವರು ಅನಧಿಕೃತವಾಗಿ ಗದ್ದೆಗೆ ಹರಿಸಿಕೊಳ್ಳುತ್ತಿದ್ದಾರೆ ಎಂದು ಕೆಳಭಾಗದ ಗ್ರಾಮಸ್ಥರು ದೂರಿದ್ದಾರೆ. ನಾಲೆಗೆ ಹರಿಸಿರುವ ನೀರನ್ನು ಯಾವುದೇ ಕಾರಣಕ್ಕೂ ಕೃಷಿಗೆ ಬಳಸಿಕೊಳ್ಳದೇ ಸರ್ಕಾರಿ ಕೆರೆ ತುಂಬಿಸುವುದು ಸೇರಿದಂತೆ ಕುಡಿವ ನೀರಿನ ಉದ್ದೇಶಕ್ಕೆ ಮಾತ್ರ ಬಳಸಿಕೊಳ್ಳುವಂತೆ ಸರ್ಕಾರದ ಆದೇಶವಿದ್ದರೂ ಕೆಲವರು ರಾತ್ರೋ ರಾತ್ರಿ ಅಕ್ರಮವಾಗಿ ನಾಲೆಗೆ ಪಂಪ್ಸೆಟ್ ಅಳವಡಿಸಿ ನೀರು ಗದ್ದೆಗೆ ಹರಿಸಿಕೊಳ್ಳುತ್ತಿರುವುದು ನಡೆದಿದೆ. ಇದರಿಂದ ನಮ್ಮ ಗ್ರಾಮಗಳ ಕೆರೆಗಳಿಗೆ ನೀರು ತುಂಬಿಸಿಕೊಳ್ಳಲು ಅಡೆತಡೆಯಾಗುತ್ತಿದೆ. 144 ಜಾರಿಗೊಳಿಸಿದ್ದರೂ ಕೆಲವರು ರಾಜಾರೋಷವಾಗಿ ಗದ್ದೆಗೆ ನೀರು ಹರಿಸಿಕೊಳ್ಳುತ್ತಿದ್ದಾರೆ ಎಂದು ಗ್ರಾಮಸ್ಥರು ಹಾಗೂ ವಿವಿಧ ಕ್ಯಾಂಪ್ನ ನಿವಾಸಿಗಳು ಆರೋಪಿಸಿದ್ದಾರೆ. ಮಾರ್ಚ್ 16ರವರೆಗೆ ಮಾತ್ರ ಎಡದಂಡೆ ಮುಖ್ಯ ನಾಲೆಗೆ ನೀರಿನ ಹರಿವು ಇರಲಿದ್ದು, ಅಷ್ಟರೊಳಗೆ ಕೆರೆಗಳಿಗೆ ತುಂಬಿಸಿಕೊಳ್ಳಬೇಕಾದ ಅನಿವಾರ್ಯತೆ ಇದ್ದು, ಇಂತಹ ಸಂದರ್ಭದಲ್ಲಿ ಖಾಸಗಿ ವ್ಯಕ್ತಿಗಳು ನೀರು ಕಳ್ಳತನಕ್ಕೆ ಇಳಿದಿರುವುದರಿಂದ ಅಷ್ಟರೊಳಗೆ ತಮ್ಮ ಕೆರೆಗಳಿಗೆ ನೀರು ತುಂಬುತ್ತದೆಯೋ ಇಲ್ಲವೋ ಎಂದು ಆತಂಕ ಎದುರಿಸುತ್ತಿದ್ದಾರೆ. ಕೂಡಲೇ ನೀರು ಕಳ್ಳತನ ಮಾಡುತ್ತಿರುವವರ ವಿರುದ್ಧ ಕ್ರಮ ಜರುಗಿಸಬೇಕು ಹಾಗೂ ಸಂಬಂಧಿಸಿದ ನೀರಾವರಿ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸ್ ಸಿಬ್ಬಂದಿಯವರಿಗೆ ಸೂಕ್ತ ನಿರ್ದೇಶನ ನೀಡುವ ಮೂಲಕ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಬೇಕು ಎಂದು ವಿವಿಧ ಗ್ರಾಮಗಳ ಹಾಗೂ ಕ್ಯಾಂಪ್ ನಿವಾಸಿಗಳು ಜಿಲ್ಲಾಡಳಿತಕ್ಕೆ ಆಗ್ರಹಿಸಿದ್ದಾರೆ.