ನಮ್ಮ ಸಿಂಧನೂರು, ಮಾರ್ಚ್ 5
ನಗರದ ಬಸ್ ನಿಲ್ದಾಣದ ಹಳೆಯ ಕಾಂಪೌಂಡ್ ತೆರವುಗೊಳಿಸಿ ವರ್ಷ ಕಳೆದರೂ ಹೊಸ ಕಾಂಪೌಂಡ್ ನಿರ್ಮಿಸದೇ ಹಾಗೆಬಿಟ್ಟಿದ್ದರಿಂದ ಕಸ,ಕಡ್ಡಿ ಹಾಗೂ ನಿರುಪಯುಕ್ತ ವಸ್ತುಗಳಿಂದಾಗಿ ತ್ಯಾಜ್ಯದ ತಾಣವಾಗಿ ಮಾರ್ಪಾಡಾಗುತ್ತಿದೆ ಎಂದು ಪ್ರಯಾಣಿಕರು ಆರೋಪಿಸಿದ್ದಾರೆ.ಕಾಂಪೌಂಡ್ ಇಲ್ಲದ ಕಾರಣ ಅಕ್ಕಪಕ್ಕದವರು ತ್ಯಾಜ್ಯ ವಸ್ತುಗಳನ್ನು ಎಸೆಯುತ್ತಿದ್ದು, ಇನ್ನೂ ಕೆಲವರು ತ್ಯಾಜ್ಯ ವಸ್ತುಗಳನ್ನು ನಿಲ್ದಾಣದ ಆವರಣದೊಳಗೆ ಬೆಂಕಿಹಚ್ಚಿ ಸುಡುತ್ತಿರುವುದು ನಡೆದಿದೆ. ಅಲ್ಲದೇ ಬಿಡಾಡಿ ದನಗಳು ಬಸ್ ನಿಲ್ದಾಣದೊಳಗೆ ಏಕಾಏಕಿ ನುಗ್ಗುವುದರಿಂದ ಚಾಲಕರು ವಾಹನ ನಿಲುಗಡೆ ಮಾಡಲು ಕಿರಿಕಿರಿ ಅನುಭವಿಸುತ್ತಿದ್ದಾರೆ ಎಂದು ಸಾರ್ವಜನಿಕರು ದೂರಿದ್ದಾರೆ.
ಗ್ಯಾರಂಟಿ ಯೋಜನೆಗಳ ಜಾರಿಯ ನಂತರ ಮಹಿಳೆಯರಿಗೆ ಉಚಿತ ಪ್ರಯಾಣ ಯೋಜನೆ ಜಾರಿಯಲ್ಲಿದ್ದು, ದಿನವೂ ಸಾವಿರಾರು ಜನರಿಂದ ನಿಲ್ದಾಣ ತುಂಬಿ ತುಳುಕುತ್ತದೆ. ನಿಲ್ದಾಣ ವಿಶಾಲವಾದ ಪ್ರಾಂಗಣ ಹೊಂದಿದ್ದರೂ ಮೂಲ ಸೌಕರ್ಯಗಳನ್ನು ಸಮರ್ಪಕವಾಗಿ ಕಲ್ಪಿಸದ ಕಾರಣ ಜನರು ದಿನವೂ ಒಂದಿಲ್ಲೊಂದು ಸಮಸ್ಯೆ ಎದುರಿಸುತ್ತಿದ್ದಾರೆ. ಬಸ್ ನಿಲ್ದಾಣ ಪ್ರವೇಶಿಸಲು ಹಾಗೂ ಒಳಗಡೆ ಸಂಚರಿಸಲು ಆತಂಕ ಎದುರಿಸುವಂತಾಗಿದೆ ಎಂಬುದು ಪ್ರಯಾಣಿಕರ ದೂರಾಗಿದೆ. ಈ ಬಗ್ಗೆ ಹಲವು ಬಾರಿ ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯ ಅಧಿಕಾರಿಗಳ ಗಮನಕ್ಕೆ ತಂದರೂ ಬೇಜವಾಬ್ದಾರಿ ವಹಿಸಿದ್ದಾರೆ ಎಂದು ಪ್ರಯಾಣಿಕರು ಆಪಾದಿಸಿದ್ದಾರೆ.