ನಮ್ಮ ಸಿಂಧನೂರು, ಮಾರ್ಚ್ 4
ನಗರದ ಮಿನಿ ವಿಧಾನಸೌಧದಲ್ಲಿನ ಸಬ್ ರೆಜಿಸ್ಟರ್ ಆಫೀಸ್ಗೆ ದಿನವೂ ನೂರಾರು ಜನರು ಭೇಟಿ ನೀಡುತ್ತಾರೆ. ಆಸ್ತಿ-ಪಾಸ್ತಿ ಮಾರಾಟ ಸೇರಿದಂತೆ ಇನ್ನಿತರೆ ನೋಂದಣಿ ಕಾರ್ಯಗಳಿಗೆ ಬರುವ ಸಾರ್ವಜನಿಕರು ಜಾರಿ ಬೀಳುವ ಆತಂಕ ಎದುರಿಸುತ್ತಾರೆ. ಕಳೆದ ಹಲವು ದಿನಗಳಿಂದ ಕಾರ್ಯಾಲಯದ ಮುಂದಿನ ನೆಲಹಾಸು ಬಂಡೆಗಳು ಕುಸಿದಿದ್ದು, ಅರೆಬರೆಯಾಗಿ ಸರಿಪಡಿಸಿರುವುದೇ ಇದಕ್ಕೆ ಕಾರಣವಾಗಿದೆ.
ದಿನವೂ ಲಕ್ಷಾಂತರ ರೂಪಾಯಿ ಸ್ಟ್ಯಾಂಪ್ ಡ್ಯೂಟಿ ಕಂದಾಯ ಇಲಾಖೆಗೆ ಸಂದಾಯವಾಗುತ್ತಿದ್ದರೂ ಜನರ ಸುರಕ್ಷತೆ ಮತ್ತು ಹಿತದ ದೃಷ್ಟಿಯಿಂದ ನೆಲಹಾಸು ಬಂಡೆಗಳನ್ನು ಸರಿಪಡಿಸಿ ಸಮತಟ್ಟು ಮಾಡಲು ಯಾರೂ ಮುಂದಾಗಿಲ್ಲ ಎಂದು ಸಾರ್ವಜನಿಕರು ಆರೋಪಿಸುತ್ತಾರೆ.
ಬಂಡೆಗಳು ಕುಸಿದು ಕೆಲವರು ಪದೇ ಪದೆ ಎಡವಿ ಬಿದ್ದ ಕಾರಣ ನೇಪತ್ಯಕ್ಕೆನ್ನುವಂತೆ ಸಿಮೆಂಟ್ ತೇಪೆ ಹಾಕಲಾಗಿದೆ. ಆದರೆ ಇನ್ನೂ ಬಹುತೇಕ ಕಡೆ ನೆಲಹಾಸು ಬಂಡೆಗಳು ನಡೆದಾಡಿದರೆ ಸದ್ದು ಮಾಡುತ್ತವೆ, ಉಪನೋಂದಣಿ ಇಲಾಖೆ ಕಚೇರಿಗೆ ವೃದ್ದರು, ಮಹಿಳೆಯರು, ವಿಕಲಚೇತನರೂ ಸೇರಿದಂತೆ ಹಲವರು ಬರುತ್ತಾರೆ, ಅವರು ಸುರಕ್ಷತೆಯಿಂದ ಕೆಲಸ-ಕಾರ್ಯ ಮುಗಿಸಿಕೊಂಡು ಹೋಗುಲು ಅನುಕೂಲ ಕಲ್ಪಿಸುವಲ್ಲಿ ಸಂಬAಧಿಸಿದ ಅಧಿಕಾರಿಗಳು ಬೇಜವಾಬ್ದಾರಿ ವಹಿಸಿದ್ದಾರೆ. ತಾಲೂಕು ಕಾರ್ಯಾಲಯ ದಲ್ಲಿಯೇ ಇಂತಹ ಪರಿಸ್ಥಿತಿಯಾದರೆ ಉಳಿದ ಇಲಾಖೆಗಳ ಕಾರ್ಯಾಲಯದ ಗತಿ ಏನು ? ಎಂದು ಮುಖಂಡರೊಬ್ಬರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಮುರಿದ ಆಸನಗಳು:
ಕಳೆದ ಬಾರಿಗಿಂತ ಈ ಬಾರಿ ನೋಂದಣಿ ಮತ್ತು ಮುದ್ರಾಂಕ ಇಲಾಖೆ, ಸ್ವತ್ತುಗಳಿಗೆ ಮುದ್ರಾಂಕ ಶುಲ್ಕ ಮತ್ತು ನೋಂದಣಿ ಶುಲ್ಕವನ್ನು ಹೆಚ್ಚಿಸಿದೆ. ಆದರೆ ಕಾರ್ಯಾಲಯಕ್ಕೆ ಬರುವ ಜನರಿಗೆ ಕನಿಷ್ಠ ಮೂಲ ಸೌಕರ್ಯಗಳನ್ನು ಒದಗಿಸುವಲ್ಲಿ ಇಲಾಖೆ ಅಧಿಕಾರಿಗಳು ನಿರ್ಲಕ್ಷö್ಯವಹಿಸಿದ್ದಾರೆ. ಜನರಿಗೆ ಕುಳಿತುಕೊಳ್ಳಲು ಆಸನಗಳೂ ಇಲ್ಲ, ನಾಲ್ಕಾರು ಆಸನಗಳಿದ್ದರೂ ಮುರಿದು ಹೋಗಿವೆ. ಸರದಿ ಬರುವವರೆಗೂ ನಿಂತುಕೊAಡೇ ಇರಬೇಕಾದ ದುಃಸ್ಥಿತಿ ಇದೆ ಎಂದು ಸಾರ್ವಜನಿಕರು ದೂರುತ್ತಾರೆ.