ನಮ್ಮ ಸಿಂಧನೂರು, ಮಾರ್ಚ್ 4
ನಗರ ಬಸ್ ನಿಲ್ದಾಣಕ್ಕೆ ಭೇಟಿ ನೀಡುವ ಪ್ರಯಾಣಿಕರಿಗೆ ‘ಇದು ಬಸ್ ನಿಲ್ದಾಣವೋ ಇಲ್ಲ ಮೋಟರ್ ಸೈಕಲ್ ಸ್ಟ್ಯಾಂಡೋʼ ಎಂದು ಅಚ್ಚರಿಯೆನಿಸಿದರೂ ಆಶ್ಚರ್ಯವಿಲ್ಲ. ಏಕೆಂದರೆ ಪ್ರಯಾಣಿಕರ ಸಂಚಾರ ಮಾರ್ಗದ ಎರಡು ಬದಿಗಳಲ್ಲಿ ನೂರಾರು ಸೈಕಲ್ ಮೋಟರ್ಗಳನ್ನು ನಿಲ್ಲಿಸಿದ್ದು, ಇಕ್ಕಟ್ಟು ಜಾಗದಲ್ಲಿ ಜನರು ನಡೆದಾಡುತ್ತಾರೆ.
ಸಿಂಧನೂರು ಕೇಂದ್ರ ಬಸ್ ನಿಲ್ದಾಣ ವಿಶಾಲ ಪ್ರದೇಶವನ್ನು ಹೊಂದಿದ್ದರೂ, ಪ್ರಯಾಣಿಕರು ನಡೆದಾಡುವ ದಾರಿಯಲ್ಲಿಯೇ ಮೋಟರ್ ಸೈಕಲ್ ನಿಲ್ಲಿಸಿರುವುದು ಸಮಸ್ಯೆಗೆ ಎಡೆಮಾಡಿಕೊಟ್ಟಿದೆ.ಕಲಬುರಗಿ, ಬಳ್ಳಾರಿ, ವಿಜಯನಗರ ಹಾಗೂ ಕೊಪ್ಪಳ ಜಿಲ್ಲೆಗಳಿಗೆ ಪ್ರಮುಖ ಜಂಕ್ಷನ್ನಂತಿರುವ ನಗರ ಬಸ್ ನಿಲ್ದಾಣ ಜನನಿಬಿಡತೆಯಿಂದ ಕೂಡಿದ್ದು, ದಿನವೂ ಸಾವಿರಾರು ಜನರು ಇಲ್ಲಿಂದ ಉದ್ದೇಶಿತ ಸ್ಥಳಗಳಿಗೆ ಪ್ರಯಾಣ ಬೆಳೆಸುತ್ತಾರೆ. ಇಂತಹ ಸಂದರ್ಭದಲ್ಲಿ ಪ್ರಯಾಣಿಕರ ದಟ್ಟಣೆಗೆ ಅನುಗುಣವಾಗಿ ನಿಲ್ದಾಣದಲ್ಲಿ ಮೂಲ ಸೌಕರ್ಯಗಳನ್ನು ಒದಗಿಸಬೇಕಾದ ಸಾರಿಗೆ ಸಂಸ್ಥೆಯವರು ನಿರ್ಲಕ್ಷ್ಯ ವಹಿಸಿರುವುದು ಆಕ್ರೋಶಕ್ಕೆ ಕಾರಣವಾಗಿದೆ.
ಪ್ರಯಾಣಿಕರ ಹಿತಕ್ಕಿಂತ ಸ್ಟ್ಯಾಂಡ್ನವರ ಹಿತ ಮುಖ್ಯವಾಯಿತೇ ?
ಬಸ್ ನಿಲ್ದಾಣದ ಇತರೆಡೆ ಜಾಗದ ಸ್ಥಳಾವಕಾಶ ಇದ್ದರೂ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧಿಕಾರಿಗಳು ಎರಡು ಮೋಟರ್ ಸ್ಟಾö್ಯಂಡ್ಗಳಿಗೆ ಒಂದೇ ಕಡೆ ವ್ಯವಸ್ಥೆ ಮಾಡಿರುವುದನ್ನು ನೋಡಿದರೆ ಇವರಿಗೆ ಪ್ರಯಾಣಿಕರ ಅನುಕೂಲಕ್ಕಿಂತ ಖಾಸಗಿ ಸ್ಟ್ಯಾಂಡ್ ನವರ ಹಿತವೇ ಬಹಳ ಮುಖ್ಯ ಎನ್ನುವಂತಿದೆ ಎಂದು ಸಾರ್ವಜನಿಕರು ಆರೋಪಿಸುತ್ತಾರೆ. ಈ ಮೊದಲು ಒಂದೇ ಒಂದು ಸ್ಟ್ಯಾಂಡ್ ಇತ್ತು, ಕಳೆದ ಕೆಲವು ದಿನಗಳ ಹಿಂದೆ ಮತ್ತೊಂದು ಸ್ಟ್ಯಾಂಡ್ ಆರಂಭವಾಗಿದೆ, ಇದರ ಪಕ್ಕದಲ್ಲಿ ಇನ್ನೊಂದಿಷ್ಟು ಜಾಗ ಇದ್ದರೆ ಅಲ್ಲಿಯೂ ಸ್ಟ್ಯಾಂಡ್ ಮಾಡುತ್ತಾರೇನು ಎಂದು ಪ್ರಯಾಣಿಕರೊಬ್ಬರು ಖಾರವಾಗಿ ಪ್ರಶ್ನಿಸುತ್ತಾರೆ. ಬಸ್ ನಿಲ್ದಾಣದಲ್ಲಿ ಅಸ್ವಚ್ಛತೆ, ಕಾಂಪೌಂಡ್ ಕೊರತೆ, ದುರ್ನಾತ, ಕುಡಿವ ನೀರಿನ ಸೌಲಭ್ಯದ ಅಭಾವ ಸೇರಿದಂತೆ ಹಲವು ಮೂಲ ಸೌಕರ್ಯಗಳ ಕೊರತೆಯಿಂದಾಗಿ ಈಗಾಗಲೇ ತೊಂದರೆ ಅನುಭವಿಸುತ್ತಿದ್ದು, ಈ ನಡುವೆ ಸೈಕಲ್ ಮೋಟರ್ ಸ್ಟ್ಯಾಂಡ್ ಗಳಿಂದಾಗಿ ಜನರು ಸುಗಮವಾಗಿ ಸಂಚರಿಸಲೂ ಕಿರಿ ಕಿರಿ ಎದುರಿಸುವಂತಾಗಿದೆ ಎಂದು ಪ್ರಯಾಣಿಕರೊಬ್ಬರು ಹೇಳುತ್ತಾರೆ.