ನಮ್ಮ ಸಿಂಧನೂರು, ಮಾರ್ಚ್ 3
ನಗರದ ವಾಲ್ಮೀಕಿ ಸರ್ಕಲ್ ಹಾಗೂ ಗಡಿಯಾರ ಚೌಕದ ಮುಂದಿನ ಸಂಪರ್ಕ ರಸ್ತೆ ಪದೇ ಪದೆ ಕುಸಿಯುತ್ತಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಕಳೆದ ಹಲವು ದಿನಗಳ ಹಿಂದೆ ಸಂಪರ್ಕ ರಸ್ತೆ ಕುಸಿದ ಪರಿಣಾಮ, ಅಪಾಯದ ಚಿಹ್ನೆ ಪ್ರದರ್ಶಿಸುವ ಫಲಕಗಳನ್ನು ರಸ್ತೆಬದಿ ಅಳವಡಿಸಿದ್ದು, ಈ ಮಾರ್ಗದಲ್ಲಿ ವಾಹನ ಸವಾರರು ಹಾಗೂ ಸಾರ್ವಜನಿಕರು ಭಯದಿಂದ ಸಂಚರಿಸುತ್ತಾರೆ.
ಪಟೇಲ್‌ವಾಡಿ, ಹಳೆಬಜಾರ್, ಬಡಿಬೇಸ್, ಕಾಟಿಬೇಸ್, ದೋಬಿಗಲ್ಲಿ ಸೇರಿದಂತೆ ಹಲವು ವಾರ್ಡ್ಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆ ಇದಾಗಿದ್ದು, ಈ ಮಾರ್ಗದಲ್ಲಿ ದಿನವೂ ಸಾವಿರಾರು ದ್ವಿಚಕ್ರವಾಹನಗಳು, ಸಾರ್ವಜನಿಕರು ಸಂಚರಿಸುತ್ತಾರೆ. ಆದರೆ, ಸಂಪರ್ಕ ರಸ್ತೆ ಮೇಲಿಂದ ಮೇಲೆ ಕುಸಿಯುತ್ತಿರುವುದರಿಂದ ಅಪಘಾತ ಭೀತಿ ಕಾಡುತ್ತಿದೆ.
ಕೆಲ ದಿನಗಳ ಹಿಂದೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಇದೇ ಮಾರ್ಗದ ರಸ್ತೆಯಲ್ಲಿ ಬೃಹದಾಕಾರದ ಕಮಾನು ನಿರ್ಮಿಸಲಾಯಿತು. ಆದರೆ, ಅಷ್ಟೇ ಗುಣಮಟ್ಟದಲ್ಲಿ ದಿನವೂ ಸಾವಿರಾರು ಜನರು ಸಂಚರಿಸುವ ಸಂಪರ್ಕ ರಸ್ತೆ ನಿರ್ಮಾಣಕ್ಕೆ ಕಾಳಜಿ ವಹಿಸದಿರುವುದು ವಿಪರ್ಯಾಸದ ಸಂಗತಿ, ಈ ರಸ್ತೆ ಪದೇ ಪದೆ ರಿಪೇರಿ ಮಾಡುವ ನೆಪದಲ್ಲಿ ಹಣ ಗುಳುಂ ಅನಿಸುವುದೇ ಇದಕ್ಕೆ ಕಾರಣ ಇರುಬಹುದೇನೋ ಎಂದು ಸಾರ್ವಜನಿಕರು ಸಂಶಯ ವ್ಯಕ್ತಪಡಿಸಿದ್ದಾರೆ. ಮುಖ್ಯ ರಸ್ತೆಗೆ ಹೊಂದಿಕೊAಡಿರುವ ಹಾಗೂ ತಹಸೀಲ್ ಕಾರ್ಯಾಲಯ, ಸರ್ಕಾರಿ ಆಸ್ಪತ್ರೆಗಳ ಎದುರಿಗೇ ಇರುವ ರಸ್ತೆಯ ಸ್ಥಿತಿ ಹೀಗಾದರೆ ಒಳ ರಸ್ತೆಗಳ ಗತಿಯಂತೂ ಕೇಳುವುದೇ ಬೇಡ ಎನ್ನುವಂತಾಗಿದೆ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸುತ್ತಾರೆ.