ನಮ್ಮ ಸಿಂಧನೂರು, ಫೆಬ್ರವರಿ 19
ಸಿಂಧನೂರು ನಗರ ದಿನದಿಂದ ದಿನಕ್ಕೆ ಬೆಳೆಯುತ್ತಿದೆ. ಜನವಸತಿಗೆ ತಕ್ಕಂತೆ ಉದ್ಯಾನಗಳಾಗಲೀ, ವಿಶ್ರಾಂತಿ ತಾಣಗಳಾಲೀ ಇಲ್ಲ. ನಗರಸಭೆಯ ಉದ್ಯಾನ ಜಾಗಗಳು ಅಲ್ಲಲ್ಲಿ ಒತ್ತುವರಿಯಾಗಿದ್ದು, ಕಾಂಕ್ರೀಟು ಕಾಡಿನಲ್ಲಿ ಶುದ್ಧ ಗಾಳಿಯೇ ಅಪರೂಪ ಎನ್ನುವಂತಾಗಿದೆ. ಇಂತಹ ದುಃಸ್ಥಿತಿಯಲ್ಲಿ ಅರಣ್ಯ ಇಲಾಖೆಯಾದರೂ ಸಾರ್ವಜನಿಕರ ಆಶೋತ್ತರಗಳಿಗೆ ಸ್ಪಂದಿಸಲಿದೆಯೇ ಎನ್ನುವ ನಿರೀಕ್ಷೆಯೂ ಹುಸಿಯಾಗಿದೆ.
ನಗರದ ಕುಷ್ಟಗಿ ಮಾರ್ಗದ ರಸ್ತೆಯಲ್ಲಿರುವ ಪದವಿ ಮಹಾವಿದ್ಯಾಲಯದ ಹಿಂಭಾಗದಲ್ಲಿರುವ ಏಳೆಂಟು ಎಕರೆ ಜಾಗೆಯಲ್ಲಿ ಅರಣ್ಯ ಇಲಾಖೆಯ ನರ್ಸರಿ ಪ್ಲಾಂಟ್ ಇದ್ದು, ಇಲ್ಲಿ ೫೦ ಸಾವಿರಕ್ಕೂ ಹೆಚ್ಚು ಸಸಿಗಳನ್ನು ಪೋಷಣೆ ಮಾಡಲಾಗುತ್ತಿದೆ. ಈ ನಡುವೆ ಉದ್ಯಾನ, ವಿಶ್ರಾಂತಿ ಕುಠೀರ ಸೇರಿದಂತೆ ಇನ್ನಿತರೆ ಕೆಲಸ ಕಾರ್ಯಗಳನ್ನು ಹಲವು ದಿನಗಳಿಂದ ಕೈಗೆತ್ತಿಕೊಳ್ಳಲಾಗಿದ್ದು, ಕೆಲಸ ನಿಧಾನ ಗತಿಯಲ್ಲಿ ನಡೆಯುತ್ತಿದೆ. ಉದ್ಯಾನದಲ್ಲಿ ಈಗಾಗಲೇ ಬಯಲು ಸಭಾ ವೇದಿಕೆ, ಅಲ್ಲಲ್ಲಿ ಚಿಕ್ಕಪುಟ್ಟ ವಿಶ್ರಾಂತಿ ಕುಠೀರಗಳನ್ನು ನಿರ್ಮಿಸಲಾಗಿದ್ದು, ಆಪಿನ ಹೊದಿಕೆಯ ಕುಠೀರ ನಿರ್ಮಾಣ ಕೆಲಸ ಪ್ರಗತಿಯಲ್ಲಿದೆ.
ಅರಣ್ಯ ಇಲಾಖೆ ವ್ಯಾಪ್ತಿಯಲ್ಲಿರುವ ಜಾಗೆಯಲ್ಲಿ ಗಿಡ-ಮರಗಳನ್ನು ಬೆಳೆಸಿ ಅತ್ಯದ್ಭುತ ಉದ್ಯಾನ ನಿರ್ಮಿಸಿ ಸಾರ್ವಜನಿಕ ಬಳಕೆಗೆ ನೀಡಬಹುದಾದ ಎಲ್ಲ ಸಾಧ್ಯತೆಗಳು ಇದ್ದರೂ, ಜನಪ್ರತಿನಿಧಿಗಳು ಹಾಗೂ ಅದಿಕಾರಿಗಳ ಮುಂದಾಲೋಚನೆ ಕೊರತೆ ಮತ್ತು ಸ್ವಾರ್ಥ ಹಿತಾಸಕ್ತಿಯ ಕಾರಣ ತಾಲೂಕು ಕೇಂದ್ರದಲ್ಲಿ ಯಾವೊಂದು ಕೆಲಸಗಳು ಸಕಾಲಕ್ಕೆ ಆಗುತ್ತಿಲ್ಲ ಎಂದು ಹೋರಾಟಗಾರರೊಬ್ಬರು ಅಸಮಾಧಾನ ವ್ಯಕ್ತಪಡಿಸುತ್ತಾರೆ.
ಸಿಂಧನೂರು ನಗರದಲ್ಲಿ ಅಂದಾಜು 1 ಲಕ್ಷ ಜನ ವಸತಿ ಇದ್ದು, ಕನಿಷ್ಠ ಪಕ್ಷ ಒಂದೇ ಒಂದು ದೊಡ್ಡ ಉದ್ಯಾನವಿಲ್ಲ. ಪ್ರತಿ ವಾರ್ಡ್ಗಳಿಗೆ ಉದ್ಯಾನ ಜಾಗ ಮೀಸಲಿರಿಸಲಾಗಿದೆ ಎಂದು ಹೇಳಲಾಗುತ್ತಿದ್ದು, ಅಲ್ಲ್ಯಾವ ಉದ್ಯಾನಗಳು ಕಾಣಸಿಗುತ್ತಿಲ್ಲ. ಹತ್ತಾರು ಲೇಔಟ್‌ಗಳಿಗೆ ಅನುಮೋದನೆ ನೀಡಲಾಗುತ್ತಿದ್ದು, ಹೊಸ ಹೊಸ ಜಮೀನುಗಳು ಎನ್‌ಎ ಆಗುತ್ತಿದ್ದು, ಆದರೆ ಉದ್ಯಾನಗಳ ನಿರ್ಮಾಣ ಕೆಲಸ ಮಾತ್ರ ಸಂಪೂರ್ಣ ಮೂಲೆಗುಂಪಾಗಿದೆ. ನಗರದಲ್ಲಿ ದಿನದಿಂದ ದಿನಕ್ಕೆ ಗಿಡ-ಮರಗಳ ಸಂಖ್ಯೆ ಕ್ಷೀಣಿಸುತ್ತಿದ್ದು, ಮುಂಬರುವ ದಿನಗಳಲ್ಲಿ ಮಾಲಿನ್ಯದ ಪ್ರಮಾಣ ಹೆಚ್ಚಿ, ಅನಾರೋಗ್ಯ ಸಮಸ್ಯೆಗಳು ಉಲ್ಬಣಿಸುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಪರಿಸರ ಪ್ರಿಯರು ಆತಂಕ ವ್ಯಕ್ತಪಡಿಸುತ್ತಾರೆ.