ನಮ್ಮ ಸಿಂಧನೂರು, ಫೆಬ್ರವರಿ 13
ಜನವರಿ ಹೋಗಿ, ಫೆಬ್ರವರಿ ಬಂದಿದೆ. ಮಾರ್ಚ್ ಇನ್ನೂ ಕಾಲಿಟ್ಟಿಲ್ಲ, ಆಗಲೇ ಬಿಸಿಲ ‘ಝಳಪು’ ಚುರುಕು ಮುಟ್ಟಿಸುತ್ತಿದೆ. ಸೂರ್ಯನ ತಾಪ ಪ್ರತಾಪ ಅಂಗಾಲಿಂದ ಹಣ್ಣೆತ್ತಿವರೆಗೂ ತಾಕುತ್ತಿದೆ. ಹೋದ ವರ್ಷ ಹೆಚ್ಚು ಮಳೆಯಾಗಿತ್ತು, ಒಂದಿಷ್ಟು ತಂಪಿನ ವಾತಾವರಣವಿತ್ತು. ಈ ಬಾರಿ ಬರಗಾಲವಿದ್ದು, ಥಂಡಿ ಕಾಲ ಮುಗಿಯುವಷ್ಟರಲ್ಲೇ ಬೇಸಿಗೆಯ ಬೇಗೆ ಶುರುವಾಗಿದೆ. ನಗರದ ಪ್ರಮುಖ ರಸ್ತೆ ಸೇರಿದಂತೆ ಜನ ನಿಬಿಡ ಪ್ರದೇಶಗಳಲ್ಲಿ ಬಿಸಿಲ ಬೇಗೆಯಿಂದ ಜನರು ಸಮಸ್ಯೆ ಎದುರಿಸುತ್ತಿರುವುದು ಕಂಡುಬರುತ್ತಿದೆ. ಕೆಲಸ ಕಾರ್ಯಗಳ ನಿಮಿತ್ತ ನಗರಕ್ಕೆ ಬಂದವರು ಗಿಡ-ಗಂಟೆಗಳ ನೆರಳಿಗೆ ಮೊರೆ ಹೋಗುತ್ತಿದ್ದಾರೆ. ಮಧ್ಯಾಹ್ನದ ಸಂದರ್ಭದಲ್ಲಿ ಕೆಲ ಪ್ರಮುಖ ರಸ್ತೆಗಳು ಹಾಗೂ ಮಾರುಕಟ್ಟೆ ಪ್ರದೇಶ ವ್ಯಾಪ್ತಿಯಲ್ಲಿ ಬಿಕೋ ವಾತಾವರಣ ಕಂಡುಬರುತ್ತಿದೆ. ಫೆಬ್ರವರಿ 13ರಂದು ಮಧ್ಯಾಹ್ನ 2 ಗಂಟೆಯ ಸುಮಾರು 33 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ನಗರದಲ್ಲಿ ದಾಖಲಾಯಿತು.