ನಮ್ಮ ಸಿಂಧನೂರು, ಫೆಬ್ರವರಿ 13
ನಗರದ ಗಂಗಾವತಿ ಮಾರ್ಗದ ಪ್ರವಾಸಿ ಮಂದಿರದ ಪಕ್ಕದಲ್ಲಿರುವ ನಗರಸಭೆಯ ವಾಣಿಜ್ಯ ಮಳಿಗೆಗಳು ಕಳೆದ ಎರಡ್ಮೂರು ವರ್ಷಗಳಿಂದ ನಿರುಪಯುಕ್ತವಾಗಿದ್ದು, ಧೂಳು ತಿನ್ನುತ್ತಿವೆ. ೧೫ಕ್ಕೂ ಹೆಚ್ಚು ಮಳಿಗೆಗಳನ್ನು ನಿರ್ಮಿಸಿ ಶೆಟರ್ ಅಳವಡಿಸಲಾಗಿದ್ದು, ಮೇಲ್ಮಡಿಯನ್ನೂ ನಿರ್ಮಿಸಿ ಛತ್ತು ಹಾಕಿ ಕೈತೊಳೆದುಕೊಳ್ಳಲಾಗಿದೆ. ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಿ ಕೆಲಸ ಪೂರ್ಣಗೊಂಡ ನಂತರ ಟೆಂಡರ್ ಕರೆಯಲಾಗುತ್ತದೆ ಎಂದು ಹೇಳಲಾಗಿತ್ತು, ಆದರೆ ಸಂಕೀರ್ಣ ನಿರ್ಮಾಣದ ಕೆಲಸ ಪೂರ್ಣಗೊಂಡ ನಂತರವೂ ಯಾವುದೇ ಪ್ರಕ್ರಿಯೆ ನಡೆಯದೇ ಇರುವುದು ಯಾವ ಕಾರಣಕ್ಕೆ ಎನ್ನುವುದು ಸಾರ್ವಜನಿಕರಿಗೆ ಯಕ್ಷ ಪ್ರಶ್ನೆಯಾಗಿದೆ.
ಇನ್ನೂ ರಸ್ತೆ ಪಕ್ಕದಲ್ಲಿಯೇ ಎರಡು ವಾಣಿಜ್ಯ ಸಂಕೀರ್ಣಗಳು ಇರುವುದರಿಂದ ಗುಟ್ಕಾ ತಿಂದು ಕೆಲವರು ಗೋಡೆಗಳಿಗೆ ಮನಬಂದAತೆ ಉಗುಳಿದ್ದು, ಸಾರ್ವಜನಿಕರ ಮೂತ್ರ ವಿಸರ್ಜನೆಯ ತಾಣವಾಗಿ ಮಾರ್ಪಟ್ಟಿವೆ. ವಾಣಿಜ್ಯ ಮಳಿಗೆಗಳ ಬಗ್ಗೆ ಹೀಗೆಯೇ ನಿರ್ಲಕ್ಷö್ಯ ವಹಿಸಿದರೆ, ಕಸ ಬಿಸಾಕುವ ತಾಣವಾದರೂ ಅಚ್ಚರಿಯಿಲ್ಲ ಎನ್ನುವುದು ಸಾರ್ವಜನಿಕರ ಮಾತಾಗಿದೆ. ಗಂಗಾವತಿ ರಸ್ತೆ ಮಾರ್ಗವು ಪ್ರಮುಖ ವಾಣಿಜ್ಯ ಕೇಂದ್ರವಾಗಿದ್ದು, ಜನನಿಬಿಡ ತಾಣವಾಗಿದೆ. ಇಲ್ಲಿ ವ್ಯಾಪಾರ-ವಹಿವಾಟು ಹೆಚ್ಚು, ನಗರಸಭೆಯವರು ಯಾವುದೇ ರೀತಿಯ ತಾಂತ್ರಿಕ ಸಮಸ್ಯೆಯನ್ನು ನಿವಾರಿಸಿಕೊಂಡು ಖಾಸಗಿಯವರಿಗೆ ಬಾಡಿಗೆ ನೀಡಿದ್ದೇ ಆದರೆ ನಗರಸಭೆಗೂ ಹೆಚ್ಚಿನ ಆದಾಯ ಬರಲಿದೆ ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.