ತಳಕಂಡ ಹಸಮಕಲ್ ಗ್ರಾಮದ ಕುಡಿವ ನೀರಿನ ಕೆರೆ

6 ಗ್ರಾಮಗಳ ಜನ-ಜಾನುವಾರು ಪಡಿಪಾಟಲು
ಗುಡುದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಸಮಕಲ್ ಗ್ರಾಮದ ಕೆರೆ
10 ಸಾವಿರಕ್ಕೂ ಹೆಚ್ಚು ಜನ, ಸಾವಿರಾರು ಜಾನುವಾರುಗಳಿಗೆ ನೀರಿನ ಅಭಾವ
ನೀರಿಗಾಗಿ ಗ್ರಾಮಸ್ಥರ ಪರದಾಟ, ಪರ್ಯಾಯ ಮೂಲಗಳ ಬಗ್ಗೆ ಪಂಚಾಯಿತಿ ನಿರ್ಲಕ್ಷ್ಯ
ವಾಂತಿಭೇದಿ ಪ್ರಕರಣಗಳು ಸಂಭವಿಸುವ ಸಾಧ್ಯತೆ

ನಮ್ಮ ಸಿಂಧನೂರು / ಮಸ್ಕಿ ಫೆಬ್ರವರಿ 13
ಸಮೀಪದ ಗುಡದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಹಸಮಕಲ್ ಗ್ರಾಮದ ಕುಡಿವ ನೀರಿನ ಕೆರೆ ಕಳೆದ ಮೂರ‍್ನಾಲ್ಕು ದಿನಗಳಿಂದ ನೀರಿಲ್ಲದೇ ಬತ್ತಿದ್ದು, 4 ಗ್ರಾಮ ಸೇರಿ 2 ಕ್ಯಾಂಪ್‌ಗಳ ಜನ ಹಾಗೂ ಜಾನುವಾರುಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ಗ್ರಾಮದ ಕೆರೆಯಿಂದ ಗುಡದೂರು, ಹಸಮಕಲ್, ರಂಗಾಪುರ, ಪಾಂಡುರಂಗಕ್ಯಾಂಪ್, ಮುದ್ದಾಪುರ ಹಾಗೂ ಮಲ್ಲಿಕಾರ್ಜುನ ಕ್ಯಾಂಪ್‌ಗಳಿಗೆ ನೀರು ಸರಬರಾಜು ವ್ಯವಸ್ಥೆ ಇದ್ದು, ಕಳೆದ ಮರ‍್ನಾಲ್ಕು ದಿನಗಳಿಂದ ಕೆರೆ ತಳಕಂಡಿರುವುದರಿಂದ ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ಕುಡಿವ ನೀರನ್ನು ಕೆಲ ಗ್ರಾಮಸ್ಥರು ಖಾಸಗಿಯವರ ಘಟಕದಿಂದ ತರುತ್ತಿದ್ದು, ಆದರೆ ಬಳಕೆ ನೀರಿಗೆ ಪರದಾಡುತ್ತಿದ್ದಾರೆ. ಇನ್ನು ಕೆರೆ-ಕಟ್ಟೆಗಳು ಬತ್ತಿ ಹೋಗಿರುವುದರಿಂದ ಜಾನುವಾರುಗಳು ದಾಹದಿಂದ ಬಳಲುತ್ತಿವೆ.

Namma Sindhanuru Click For Breaking & Local News

ಈ ಬಾರಿ ತುಂಗಭದ್ರಾ ಅಣೆಕಟ್ಟೆಯಲ್ಲಿ ನೀರಿನ ಕೊರತೆಯಿಂದಾಗಿ ಡಿಸೆಂಬರ್ ವೇಳೆಗೆ ತುಂಗಭದ್ರಾ ಮುಖ್ಯ ಸೇರಿದಂತೆ ಉಪ ಕಾಲುವೆಗಳಿಗೆ ನೀರಿನ ಹರಿವು ಸ್ಥಗಿತಗೊಳಿಸಲಾಗಿತ್ತು. ಈ ಬಾರಿ ತೀವ್ರ ಬರಗಾಲವಿದ್ದು, ಬೇಸಿಗೆಯಲ್ಲಿ ಕುಡಿವ ನೀರಿನ ಮೂಲಗಳು, ಉಂಟಾಗಬಹುದಾದ ಅಭಾವ ಸೇರಿದಂತೆ ಅಗತ್ಯ ಕ್ರಮದ ಬಗ್ಗೆ ಗ್ರಾಮ ಪಂಚಾಯಿತಿ ಅಧಿಕಾರಿಗಳು ಮುಂಜಾಗ್ರತೆ ಕ್ರಮ ವಹಿಸದ ಕಾರಣ ಜನರು ಮತ್ತು ಜಾನುವಾರುಗಳು ಸಮಸ್ಯೆಗೀಡಾಗುವಂತಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಈ ನಾಲ್ಕು ಗ್ರಾಮ ಹಾಗೂ ಕ್ಯಾಂಪ್‌ಗಳಲ್ಲಿ ಜಾನುವಾರುಗಳ ಸಂಖ್ಯೆ ಹೆಚ್ಚಿದ್ದು, ದಿನವೂ ಅವುಗಳಿಗೆ ಎರಡು ಬಾರಿ ಇರಲಿ ಒಂದು ಬಾರಿ ನೀರು ಕುಡಿಸುವುದು ಮಾಲೀಕರಿಗೆ ತಲೆನೋವಾಗಿ ಪರಿಣಮಿಸಿದೆ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ.

Namma Sindhanuru Click For Breaking & Local News

ಮುಂಜಾಗ್ರತೆ ಇಲ್ಲ: ಜನ-ಜಾನುವಾರುಗಳು ನೀರಿಗಾಗಿ ಪರಿತಪಿಸುತ್ತಿದ್ದರೂ ಪರ್ಯಾಯ ನೀರಿನ ಮೂಲಗಳ ಬಗ್ಗೆ ಕಾಳಜಿ ವಹಿಸುತ್ತಿಲ್ಲ. ಪಂಚಾಯಿತಿಯಲ್ಲಿ ಗ್ರಾಮ ನೀರು ಸರಬರಾಜು ಮತ್ತು ನೈರ್ಮಲ್ಯ ಸಮಿತಿಯನ್ನು ಸಮರ್ಪಕವಾಗಿ ರಚಿಸಿ ಕ್ರಿಯಾಶೀಲಗೊಳಿಸುವ ಕಾಳಜಿಯೇ ವಹಿಸಿಲ್ಲ. ಇದು ಕುಡಿವ ನೀರು ಪೂರೈಕೆ ವ್ಯವಸ್ಥೆಯನ್ನು ಸಂಪೂರ್ಣ ಕಡೆಗಣಿಸಿರುವುದಕ್ಕೆ ಸಾಕ್ಷಿಯಾಗಿದೆ ಎಂದು ಗ್ರಾಮಸ್ಥರು ದೂರುತ್ತಾರೆ.

Namma Sindhanuru Click For Breaking & Local News

ವಾಂತಿ-ಭೇದಿ ಪ್ರಕರಣ ಸಂಭವ ಸಾಧ್ಯತೆ ?: ಕೆರೆ ಬತ್ತಿ ಪರ್ಯಾಯ ನೀರಿನ ಮೂಲಗಳ ಕೊರತೆಯಿಂದ ಸಮಸ್ಯೆ ಎದುರಿಸುತ್ತಿರುವ ಈ ಗ್ರಾಮಸ್ಥರು ಅಲ್ಲಲ್ಲಿ ಫ್ಲೋರೈಡ್, ಲವಣಾಂಶವುಳ್ಳ ನೀರನ್ನು ಕುಡಿಯುತ್ತಿದ್ದು, ವಾಂತಿಭೇದಿ ಪ್ರಕರಣಗಳು ಸಂಭವಿಸುವ ಸಾಧ್ಯತೆ ಇದೆ. ಈಗಾಗಲೇ ದೇವದುರ್ಗ, ಲಿಂಗಸುಗೂರು ತಾಲೂಕಿನ ಹಲವೆಡೆ ಕುಡಿವ ನೀರಿನ ಅಭಾವದಿಂದ, ಕಲುಷಿತ ನೀರು ಕುಡಿದು ಹಲವು ಜನರು ಅಸ್ವಸ್ಥರಾದ ಪ್ರಕರಣಗಳು ವರದಿಯಾಗಿದ್ದು, ಒಂದುವೇಳೆ ಜಿಲ್ಲಾಡಳಿತ ಸರಿಯಾದ ಸಮಯಕ್ಕೆ ಎಚ್ಚೆತ್ತು ಸಮಸ್ಯೆ ಪರಿಹರಿಸಲು ಮುಂದಾಗದೇ ಹೋದರೆ ಯಾವುದೇ ರೀತಿಯ ಅನಾಹುತಗಳಿಗೆ ಜಿಲ್ಲಾಡಳಿತವೇ ಹೊಣೆಯಾಗಬೇಕಾಗುತ್ತದೆ ಎಂದು ಗ್ರಾಮಸ್ಥರು ಎಚ್ಚರಿಸಿದ್ದಾರೆ.

Namma Sindhanuru Click For Breaking & Local News
ತುಂಗಭದ್ರಾ ಮುಖ್ಯ ನಾಲೆಯ 54ನೇ ವಿತರಣಾ ಕಾಲುವೆ ಬಳಿಯೇ ಹಸಮಕಲ್‌ ಗ್ರಾಮದ ಕುಡಿವ ನೀರಿನ ಕೆರೆಯಿದ್ದು, ಕಾಲುವೆಯಲ್ಲಿ ಈ ಬಾರಿ ನೀರು ಡಿಸೆಂಬರ್‌ನಲ್ಲೇ ಬಂದ್‌ ಆದ ಕಾರಣ ಕಾಲುವೆ ಬಿಕೋ ಎನ್ನುತ್ತಿದೆ.

Leave a Reply

Your email address will not be published. Required fields are marked *