ಸ್ಪೆಷಲ್ ಸ್ಟೋರಿ: ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಡಿಸೆಂಬರ್ 13
ನಗರದ ಸುಕಾಲಪೇಟೆ ರಸ್ತೆಯಲ್ಲಿ ಶುದ್ಧ ಗಾಳಿಗೆ ಬಡತನ, ಧೂಳಿಗೆ ಸಿರಿತನ ! ಇದು ವಿಚಿತ್ರವಾದರೂ ಸತ್ಯ. ಕನಕದಾಸ ಸರ್ಕಲ್ನಿಂದ ಕನಕದಾಸ ಕಾಲೇಜಿನವರೆಗೆ ಹಾಗೂ ಅಂಬೇಡ್ಕರ್ ನಗರದ ದಾರಿಯ ಕೊನೆಯವರೆಗೂ ಧೂಳೋ ಧೂಳು ! ಈ ವಿಪರೀತ ಧೂಳಿನಿಂದಾಗಿ ಜನಸಾಮಾನ್ಯರು ತತ್ತರಿಸಿ ಹೋಗಿದ್ದತಾರೆ.
ಡಾಂಬರ್ ರಸ್ತೆ ಮೇಲೆತ ಮಣ್ಣು !
ಕನಕದಾಸ ಸರ್ಕಲ್ನಿಂದ 1 ಕಿ.ಮೀ ಅಂತರದವರೆಗೂ ಡಾಂಬರ್ ರಸ್ತೆ ನಿರ್ಮಿಸಲಾಗಿದೆ. ಆದರೆ ಡಾಂಬರ್ ರಸ್ತೆಯ ಮೇಲೆಲ್ಲ ಮಣ್ಣು ಮುಚ್ಚಿದ್ದು, ಅಲ್ಲಲ್ಲಿ ಡಾಂಬರ್ ಕಿತ್ತು ಮರಂ ತೇಲಿದೆ. ರಸ್ತೆ ಬದಿ ವಿಪರೀತ ಹುಡಿಮಣ್ಣು ಇರುವುದರಿಂದ ಸಣ್ಣ ವಾಹನ ಚಲಿಸಿದರೆ ಸಾಕು ಥಟ್ಟನೇ ಧೂಳು ಮೇಲೇಳುತ್ತದೆ. ಇನ್ನು ದೊಡ್ಡ ವಾಹನ ಚಲಿಸಿದರೆ ಅಕ್ಕಪಕ್ಕದಲ್ಲಿ ಹೋಗುವವರಿಗೆ ಧೂಳು ಎರಚಿದಂತಾಗುತ್ತದೆ ಎಂದು ಸಾರ್ವಜನಿಕರು ಹೇಳುತ್ತಾರೆ.
‘ಧೂಳಿನ ಕಾಟಕ್ಕೆ ಕರವಸ್ತ್ರ ಮೂಗಿಗೆ ಕಟ್ಟಿಕೊಂಡು ಸಂಚರಿಸುವಂತಾಗಿದೆ’
‘ಸುಕಾಲಪೇಟೆ ರಸ್ತೆ ಮಾರ್ಗದಲ್ಲಿ ಧೂಳಿನ ಕಾಟಕ್ಕೆ ಸಾರ್ವಜನಿಕರು ಮೂಗಿಗೆ ಕರವಸ್ತ್ರ ಕಟ್ಟಿಕೊಂಡು ನಡೆದಾಡುವಂತಾಗಿದೆ. ಸಿಟಿಯಲ್ಲಿದ್ದರೂ ಇದು ಹಳ್ಳಿ ರಸ್ತೆಯಂತಾಗಿದ್ದು, ಕಳೆದ ಹಲವು ದಿನಗಳಿಂದ ಸಾರ್ವಜನಿಕರು ಇನ್ನಿಲ್ಲದ ತ್ರಾಸು ಅನುಭವಿಸುತ್ತಿದ್ದಾರೆ.’ ಎಂದು ಸ್ಥಳೀಯ ನಿವಾಸಿಯೊಬ್ಬರು ತಿಳಿಸಿದ್ದಾರೆ.

ವೃದ್ಧರು, ಚಿಕ್ಕಮಕ್ಕಳಿಗೆ ಅಸ್ತಮಾ ಭೀತಿ ?
ಈ ರಸ್ತೆ ಮಾರ್ಗದಲ್ಲಿ ಬೆಳಿಗ್ಗೆಯೇ ಶಾಲಾ ಮಕ್ಕಳು ಧೂಳಿನ ನಡುವೆ ಸಂಚರಿಸಬೇಕಿದೆ. ಹೆಚ್ಚಿದ ಧೂಳಿನಿಂದ ಮಕ್ಕಳು ಕೆಮ್ಮುತ್ತಲೇ ಕಾಲ್ನಡಿಗೆಯಲ್ಲಿ ಸಾಗುವುದು ಸಾಮಾನ್ಯವಾಗಿದೆ. ಶಾಲಾ ವಾಹನ, ಸಣ್ಣಪುಟ್ಟ ವಾಹನಗಳು ಸಂಚರಿಸುತ್ತಿದ್ದಂತೆ ರೊಯ್ಯನೇ ಧೂಳು ಮೇಲೇಳುತ್ತದೆ. ಇನ್ನೂ ಲಾರಿ ಇಲ್ಲವೇ ಬರ್ಯಾವುದೇ ದೊಡ್ಡ ವಾಹನ ಚಲಿಸಿದರೆ ಕತೆ ಮುಗಿಯಿತು. ಮನೆಯವರಿಗೆಲ್ಲಾ ಸಣ್ಣ ಕೆಮ್ಮು ಸಾಮಾನ್ಯವಾಗಿದೆ. ಎಲ್ಲಿ ಅಸ್ತಮಾ ರೋಗ ಬರುತ್ತದೆ ಎಂಬ ಭಯ ಕಾಡುತ್ತಿದೆ. ಇನ್ನೂ ಈ ಏರಿಯಾದ ಬಹಳಷ್ಟು ಜನರು ಧೂಳಿನಿಂದಾಗಿ ಉಸಿರಾಟ ಸಂಬAಧಿ ಕಾಯಿಲೆಯಿಂದ ಬಲುತ್ತಿದ್ದಾರೆ ಎಂದು ಸ್ಥಳೀಯ ನಿವಾಸಿಯೊಬ್ಬರು ಆತಂಕ ವ್ಯಕ್ತಪಡಿಸುತ್ತಾರೆ.

ರಸ್ತೆ ಬದಿಯ ಮನೆಗಳೂ ಧೂಳುಮಯ !!
ಈ ಮಾರ್ಗದ ರಸ್ತೆ ಬದಿಯ ಮನೆಗಳಂತೂ ಧೂಳುಮಯವಾಗಿವೆ. ಧೂಳಿನ ಸಲುವಾಗಿ ಬಾಗಿಲು ತೆರೆಯಲು ಹೆದರಿಕೆಯಾಗುತ್ತದೆ. ನಮ್ಮ ತಗಡಿನ ಮೇಲೆ ಎಷ್ಟೊಂದು ಧೂಳು ಹರಡಿ ಕುಂತಿದೆ ನೋಡಿ. ಮನೆಯ ಹೊರಗೆ ಒಣಗಲು ಹಾಕಿದ ಬಟ್ಟೆಗಳು ಧೂಳುಮಯವಾಗುತ್ತಿವೆ. ಪಾತ್ರೆ-ಪಗಡೆ ಅಲ್ಲದೇ ಕಿಟಕಿಗಳ ಮೂಕ ಅಡುಗೆ ಮನೆಗೂ ಧೂಳು ಆವರಿಸುತ್ತಿದೆ’ ಎಂದು ರಸ್ತೆ ಬದಿ ಮನೆಯೊಂದರ ನಾಗರಿಕರೊಬ್ಬರು ಅಳಲು ತೋಡಿಕೊಂಡಿದ್ದಾರೆ.
ಮಿತಿ ಮೀರಿದ ಮಾಲಿನ್ಯದ ಪ್ರಮಾಣ
ಕಳೆದ ಹಲವು ದಿನಗಳಿಂದ ರಸ್ತೆ ಧೂಳು, ಚರಂಡಿ ದುರ್ನಾತ ಹೆಚ್ಚಿದೆ. ರಸ್ತೆ ಬದಿ ಎಲ್ಲೆಂದರಲ್ಲಿ ಸಾರ್ವಜನಿಕರು ಕಸ-ಕಡ್ಡಿ ಎಸೆಯುತ್ತಿರುವುದು ಮತ್ತು ಧೂಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡದಿರುವುದು ಸಹ ಮಾಲಿನ್ಯಕ್ಕೆ ಕಾರಣವಾಗಿದೆ. ಚುನಾಯಿತ ಜನಪ್ರತಿನಿಧಿಗಳಾಗಲೀ ಸಂಬಂಧಿಸಿದ ಸ್ಥಳೀಯ ಆಡಳಿತದವರಾಗಲಿ ಮಾಲಿನ್ಯ ನಿಯಂತ್ರಿಸುವಲ್ಲಿ ವಿಫಲರಾಗಿದ್ದಾರೆ’ ಎಂದು ನಾಗರಿಕರು ಆರೋಪಿಸುತ್ತಾರೆ.

ಡಾಂಬರ್ ರಸ್ತೆಗೆ ಮರಂ !
ಇತ್ತೀಚೆಗೆ ಯಾವುದೇ ರಸ್ತೆಗಳು ಕಿತ್ತು ಹೋಗುತ್ತಿದ್ದಂತೆ ಮನಸೋಇಚ್ಛೆ ಮರಂ ಸುರಿಯಲಾಗುತ್ತಿದೆ. ವಿಚಿತ್ರವೆಂದರೆ ಡಾಂಬರ್ ರಸ್ತೆಗೆ ಮರಂ ಹಾಕುತ್ತಿರುವುದು ಇದೆಂಥಾ ವೈಜ್ಞಾನಿಕತೆ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ. ಕಿತ್ತುಹೋದ ಡಾಂಬರ್ ರಸ್ತೆಗೆ ಡಾಂಬರ್ ಹಾಕುವುದು, ಸಿಸಿ ರಸ್ತೆಗೆ ಪುನಃ ಸಿಮೆಂಟ್ ಕಂಕರ್ ಹಾಕಿ ಸಮತಟ್ಟು ಮಾಡುವುದು ಸಾಮಾನ್ಯ ಜ್ಞಾನ ಆದರೆ, ಸಂಬಂಧಿಸಿದ ಇಲಾಖೆ ಅಧಿಕಾರಿಗಳು ದುರಸ್ತಿಗೆ ಬಂದ ಡಾಂಬರ್ ಮತ್ತು ಸಿಸಿ ರಸ್ತೆಗೆ ಮರಂ ಸುರಿದ ಮತ್ತಷ್ಟು ಧೂಳಿಗೆ ಕಾರಣವಾಗುತ್ತಿದ್ದಾರೆ. ಅಲ್ಲದೇ ಅದರ ಮೇಲೆ ಬಿಲ್ ಎತ್ತುವಳಿಯನ್ನೂ ಮಾಡಿಕೊಳ್ಳುತ್ತಿದ್ದಾರೆ ಎಂದು ಸಂಘಟನೆಯೊAದರ ಮುಖಂಡರೊಬ್ಬರು ಆರೋಪಿಸುತ್ತಾರೆ.

ಇಲಾಖೆಗಳ ವೈಫಲ್ಯದಿಂದ ಪೌರ ಕಾರ್ಮಿಕರಿಗೆ ಒತ್ತಡ
ಸುರಕ್ಷ್ಷತಾ ಪರಿಕರಗಳ ಕೊರತೆ ಸೇರಿದಂತೆ ಹಲವು ಸೌಕರ್ಯಗಳ ಅಭಾವದ ನಡುವೆ ಆರೋಗ್ಯವನ್ನು ಲೆಕ್ಕಿಸದೇ ಪೌರ ಕಾರ್ಮಿಕರು ಬಿಡುವಿಲ್ಲದೇ ನಗರದ ಸ್ವಚ್ಛತಾ ಕಾರ್ಯದಲ್ಲಿ ತೊಡಗಿದ್ದಾರೆ. ಆದರೆ ಅಧಿಕಾರಿಗಳ ಬೇಜವಾಬ್ದಾರಿ ಹಾಗೂ ಚುನಾಯಿತ ಪ್ರತಿನಿಧಿಗಳ ಕಳಕಳಿಯ ಕೊರತೆಯಿಂದ, ಪುನಃ ಪೌರ ಕಾರ್ಮಿಕರ ಮೇಲೆಯೇ ಕೆಲಸದ ಒತ್ತಡ ಹೇರಲಾಗುತ್ತಿದೆ ಎಂದು ಸಂಘಟನೆಯೊಂದರ ಕಾರ್ಯಕರ್ತರು ದೂರುತ್ತಾರೆ.


