ನಮ್ಮ ಸಿಂಧನೂರು/ಮಸ್ಕಿ ಜುಲೈ 24
ಮಸ್ಕಿ ತಾಲೂಕಿನ ಗೋನಾಳ ಗ್ರಾಮದ ಅಂಭಾದೇವಿ ನಗರದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ನಿಂಗಪ್ಪ ಎಂಬುವವರು ಗುರುವಾರ ಶಾಲಾ ಅವಧಿಯಲ್ಲಿಯೇ ಕಂಠಪೂರ್ತಿ ಮದ್ಯಸೇವಿಸಿ ಅಡುಗೆ ಕೋಣೆಯ ಮುಂದೆ ಮಲಗಿ ಹೊರಳಾಡಿರುವುದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮದ್ಯ ಸೇವಿಸಿ ಶಾಲೆಯ ಅಡುಗೆ ಕೋಣೆಯ ಮುಂದೆ ಹೊರಳಾಡುತ್ತಿದ್ದುದನ್ನು ಗಮನಿಸಿದ ಮಕ್ಕಳು ಪಾಲಕರ ಗಮನಕ್ಕೆ ತಂದಿದ್ದಾರೆ. ಇದನ್ನು ಗಮನಿಸಿದ ವಿದ್ಯಾರ್ಥಿ ಪಾಲಕರು ಈ ಶಿಕ್ಷಕನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಕಂಠಪೂರ್ತಿ ಮದ್ಯ ಸೇವಿಸಿದ್ದರಿಂದ ನಶೆಯಲ್ಲಿದ್ದ ಶಿಕ್ಷಕನನ್ನು ನಿಭಾಯಿಸಲು ಗ್ರಾಮಸ್ಥರು ಕೆಲವೊತ್ತು ಹರಸಾಹಸಪಟ್ಟಿದ್ದಾರೆ. ಕೊನೆಗೆ ಶಿಕ್ಷಕನ ಕುಟುಂಬಸ್ಥರಿಗೆ ಮಾಹಿತಿ ತಿಳಿಸಿದ್ದರಿಂದ, ಕುಟುಂಬದವರು ಬಂದು ಶಿಕ್ಷಕನನ್ನು ಮಧ್ಯಾಹ್ನ 1 ಗಂಟೆ ಸುಮಾರು ಕರೆದುಕೊಂಡು ಹೋಗಿದ್ದಾರೆಂದು ತಿಳಿದುಬಂದಿದೆ.
“ಈ ಶಿಕ್ಷಕರು ಎರಡ್ಮೂರು ಬಾರಿ ಇದೇ ರೀತಿ ವರ್ತನೆ ಮಾಡಿದ್ದಾರೆ. ಪಾಲಕರೆಲ್ಲರೂ ಸೇರಿ ಶಿಕ್ಷಕನಿಗೆ ತಿಳಿ ಹೇಳಿದ್ದೇವೆ. ಆದರೂ ಪುನಃ ಘಟನೆ ಮರುಕಳಿಸಿದೆ. ಶಿಕ್ಷಕನ್ನು ಬೇರೆಡೆ ವರ್ಗ ಮಾಡುವಂತೆ ಈಗಾಗಲೇ ಮೇಲಧಿಕಾರಿಗಳಿಗೆ ಮನವಿ ಮಾಡಿದ್ದೇವೆ. ಶಿಕ್ಷಕರ ದುರ್ವರ್ತನೆಯಿಂದ ಮಕ್ಕಳು ಶಾಲೆಗೆ ಹೋಗಲು ಹೆದರುವಂತಾಗಿದೆ” ಎಂದು ಗ್ರಾಮದ ಎಸ್ಡಿಎಂಸಿ ಪದಾಧಿಕಾರಿಗಳು ಹಾಗೂ ವಿದ್ಯಾರ್ಥಿ ಪಾಲಕರು ಹೇಳುತ್ತಾರೆ.
ಶಿಕ್ಷಕನ ಅಮಾನತಿಗೆ ಧರ್ಮರಾಜ್ ಗೋನಾಳ ಆಗ್ರಹ
“ಮುಖ್ಯ ಶಿಕ್ಷಕ ನಿಂಗಪ್ಪ ಅವರು ಮದ್ಯ ಕುಡಿದು ಶಾಲೆಗೆ ಬಂದು ಪದೇ ಪದೆ ದುರ್ವರ್ತನೆ ತೋರುತ್ತಿದ್ದಾರೆ. ಇವರ ಬಗ್ಗೆ ಮೇಲಧಿಕಾರಿಗಳಿಗೆ ದೂರು ನೀಡಿದರೂ ಕ್ರಮ ಜರುಗಿಸದೇ ಅವರೂ ಸಹ ಈ ಶಿಕ್ಷಕನೊಂದಿಗೆ ಶಾಮೀಲಾದಂತೆ ಕಾಣುತ್ತಿದೆ. ಇದು ವಿದ್ಯಾರ್ಥಿಗಳ ಶಿಕ್ಷಣದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದ್ದು, ಮಕ್ಕಳ ಹಕ್ಕುಗಳ ಸ್ಪಷ್ಟ ಉಲ್ಲಂಘನೆಯಾಗಿದೆ. ಈ ಕಾಲೋನಿಯಲ್ಲಿ ಹಿಂದುಳಿದ ವರ್ಗ ಮತ್ತು ಪರಿಶಿಷ್ಟ ಜಾತಿ ಸಮುದಾಯದ ಜನರೇ ಹೆಚ್ಚಿನ ಸಂಖ್ಯೆಯಲ್ಲಿ ವಾಸವಾಗಿದ್ದಾರೆ. ಉಚಿತ ಮತ್ತು ಕಡ್ಡಾಯ ಶಿಕ್ಷಣ ಕಾಯ್ದೆಯ ಪರಿಣಾಮವಾಗಿ ಎಲ್ಲ ಮಕ್ಕಳ ಹೆಸರು ದಾಖಲಾಗಿದೆ. ಆದರೆ, ಅಕ್ಷರ ಅಭ್ಯಾಸ, ಓದು ಬರಹ ಬರದಿರುವ ಮಕ್ಕಳೇ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ನಿರ್ಲಕ್ಷಿತ ಸಮುದಾಯದ ಮಕ್ಕಳೇ ಅಧಿಕ ಸಂಖ್ಯೆಯಲ್ಲಿರುವ ಈ ಶಾಲೆಯು ಇಲಾಖೆಯ ನಿರ್ಲಕ್ಷö್ಯದಿಂದ ಮುಚ್ಚುವ ಹಂತಕ್ಕೆ ತಲುಪಿದೆ. ಮದ್ಯ ಸೇವಿಸಿ ಶಾಲಾ ಆವರಣದಲ್ಲೇ ಮಲಗಿದ ಮುಖ್ಯ ಶಿಕ್ಷಕನನ್ನು ಸೇವೆಯಿಂದ ಅಮಾನತು ಮಾಡಿ, ಬೇರೆ ಶಿಕ್ಷಕರನ್ನು ನೇಮಿಸಬೇಕೆಂದು ಸಾಮಾಜಿಕ ಹೋರಾಟಗಾರ ಧರ್ಮರಾಜ್ ಗೋನಾಳ ಆಗ್ರಹಿಸಿದ್ದಾರೆ.