ಲೋಕಲ್ ನ್ಯೂಸ್: ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಜುಲೈ 18
“ಧರ್ಮವನ್ನು ಕೊಂದವರೇ ಸೌಜನ್ಯಳನ್ನು ಕೊಂದಿದ್ದಾರೆ. ಪತ್ತೆ ಮಾಡಬೇಕು, ಸತ್ಯ ತಿಳಿಯಬೇಕು. ಅತ್ಯಾಚಾರಿ-ಕೊಲೆಗಡುಕರಿಗೆ ಶಿಕ್ಷೆಯಾಗಬೇಕು. ನೇತ್ರಾವತಿ ನೀರನ್ನೇ ಪ್ರಯೋಗಾಲಯಕ್ಕೆ ಕಳಿಸಿ !, ಧರ್ಮಸ್ಥಳ ಉಳಿಸಿ !! ಎಂಬ ಘೋಷವಾಕ್ಯದೊಂದಿಗೆ “ಚಂದುಳ್ಳಿ ಚಲುವೆ ಸೌಜನ್ಯ, ಚಂದುಳ್ಳೆ ಚಲುವೆ ಬಾಲೇ.., ಸೌಜನ್ಯ ಕೊಲೆಯಾಗಿ ಹೋದಳಲ್ಲೋ..” ಎಂದು ಜನಕವಿ ಸಿ.ದಾನಪ್ಪ ನಿಲೋಗಲ್ ಅವರು ರಚಿಸಿ, ಆರ್‌ಸಿಎಫ್ ಕಲಾವಿದರು ಹಾಡಿರುವ ತತ್ವಪದ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಸೌಜನ್ಯ ಹತ್ಯೆ ಮತ್ತು ಧರ್ಮಸ್ಥಳದಲ್ಲಿ ದಶಕಗಳಿಂದ ಆದ ನಿಗೂಢ ಸಾವುಗಳ ಬಗ್ಗೆ ಸಹಿ ಸಂಗ್ರಹ ಅಭಿಯಾನ, ಈ ಕುರಿತಂತೆ ಎಸ್‌ಐಟಿ ರಚನೆ ಮಾಡಬೇಕು, ತಪ್ಪಿತಸ್ಥರನ್ನು ಪತ್ತೆಹಚ್ಚಿ ತಕ್ಕ ವಿಧಿಸಲು ಪ್ರಜ್ಞಾವಂತ ವಲಯದಿಂದ ವ್ಯಾಪಕ ಒತ್ತಾಯಗಳು ಕೇಳಿಬರುತ್ತಿರುವ ಸಂದರ್ಭದಲ್ಲಿ ಕ್ರಾಂತಿಕಾರಿ ಸಾಂಸ್ಕೃತಿಕ ವೇದಿಕೆಯವರು ಹಾಡಿರುವ ತತ್ವಪದ ಹಾಡಿಕೆ ಜನಮನ್ನಣೆ ಗಳಿಸಿದ್ದು, ಮುಗ್ದ ಬಾಲೆಯ ಅಮಾನುಷ ಸಾವಿಗೆ ಮಿಡಿಯುವುದರ ಜೊತೆಗೆ ನ್ಯಾಯಕ್ಕಾಗಿ ಆಗ್ರಹಿಸುತ್ತದೆ.
ಜಸ್ಟಿಸ್ ಪಾರ್ ಸೌಜನ್ಯ
ಜನಕವಿ ಸಿ.ದಾನಪ್ಪ ನಿಲೋಗಲ್ ರಚಿಸಿದ ತತ್ವಪದವನ್ನು ಕ್ರಾಂತಿಕಾರಿ ಸಾಂಸ್ಕೃತಿಕ ವೇದಿಕೆಯ ಎಂ.ಗಂಗಾಧರ ಹಾಡಿದ್ದಾರೆ. ಅವರಿಗೆ ಆದೇಶ ನಗನೂರು, ನಾಗರಾಜ್ ಮಾಸ್ತರ್, ಚಿದಾನಂದ, ಸೋಮನಾಥ್ ಮುಂತಾದವರು ಸಾಥ್ ನೀಡಿದ್ದಾರೆ.