ಸಿಂಧನೂರು: ಉಪ್ಪಳ ಸರ್ಕಾರಿ ಶಾಲೆಯಲ್ಲಿ 300 ವಿದ್ಯಾರ್ಥಿಗಳಿಗೆ ಇಬ್ಬರೇ ಖಾಯಂ ಶಿಕ್ಷಕರು ! ಉಳಿದವರು ಅತಿಥಿಗಳು !!

Spread the love

ಸ್ಪೆಷಲ್ ಸ್ಟೋರಿ: ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಜುಲೈ 17

ಈ ಶಾಲೆಯಲ್ಲಿ 300ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದಾರೆ, ಆದರೆ ಖಾಯಂ ಶಿಕ್ಷಕರು ಮಾತ್ರ ಇಬ್ಬರು ! ಉಳಿದವರು ಅತಿಥಿ ಶಿಕ್ಷಕರು !! ಈ ಖಾಯಂ ಶಿಕ್ಷಕರೂ ಕೂಡ ಬೇರೆ ಶಾಲೆಯಿಂದ ಈ ಶಾಲೆಗೆ ಎರವಲು ಸೇವೆಗೆ ಬಂದವರೇ !!! ಹೀಗಾಗಿ ಉಪ್ಪಳ ಗ್ರಾಮದ ಸರ್ಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆ ‘ಅತಿಥಿ ಶಿಕ್ಷಕರ’ ಉಸ್ತುವಾರಿಯಲ್ಲಿ ನಡೆಯುತ್ತಿದೆ.
ಡೆಪ್ಟೇಶನ್ ಮೇಲೆ ಇಬ್ಬರು ಶಿಕ್ಷಕರು !
ಉಪ್ಪಳ ಗ್ರಾಮದ ಸರ್ಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 1ರಿಂದ 10ನೇ ತರಗತಿವರೆಗೆ 300ಕ್ಕೂ ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದಾರೆ. ಪ್ರೌಢಶಾಲಾ ವಿಭಾಗಕ್ಕೆ ಒಬ್ಬರು ಹಾಗೂ ಪ್ರಾಥಮಿಕ ಶಾಲಾ ವಿಭಾಗಕ್ಕೆ ಒಬ್ಬರು ಶಿಕ್ಷಕರನ್ನು ಎರವಲು ಸೇವೆಗೆ ನಿಯೋಜಿಸಿದ್ದನ್ನು ಹೊರತಪಡಿಸಿ ಉಳಿದಂತೆ 10ಕ್ಕೂ ಹೆಚ್ಚು ಅತಿಥಿ ಶಿಕ್ಷಕರು ಈ ಶಾಲೆಯಲ್ಲಿ ಬೋಧನೆ ಮಾಡುತ್ತಿದ್ದಾರೆ.
ಅನ್ಯ ಜಿಲ್ಲೆಯ ಶಿಕ್ಷಕರು ಸ್ವಜಿಲ್ಲೆಗೆ ವರ್ಗಾವಣೆ, ಖಾಲಿಯಾದ ಖಾಯಂ ಶಿಕ್ಷಕರು !!
“ಈ ಹಿಂದೆ ಬೇರೆ ಬೇರೆ ಜಿಲ್ಲೆಯ ಶಿಕ್ಷಕರು ವರ್ಷಕ್ಕೆ 4 ಜನರಂತೆ ವರ್ಗಾವಣೆ ಮಾಡಿಸಿಕೊಂಡು ತಮ್ಮ ತಮ್ಮ ಜಿಲ್ಲೆಗಳ ಕಡೆ ಹೋಗಿರುವುದರಿಂದ ಗ್ರಾಮದ ಸರ್ಕಾರಿ ಶಾಲೆ ಖಾಯಂ ಶಿಕ್ಷಕರಿಲ್ಲದೇ ಭಣಗುಟ್ಟುತ್ತಿದೆ. ಇದರಿಂದ ಮಕ್ಕಳ ಗುಣಮಟ್ಟದ ಶಿಕ್ಷಣದ ಮೇಲೆ ಪೆಟ್ಟು ಬಿದ್ದಿದೆ. ದಡೇಸುಗೂರು ಸರ್ಕಾರಿ ಶಾಲೆಯಿಂದ ಶಿಕ್ಷಕರೊಬ್ಬರನ್ನು ಹೈಸ್ಕೂಲ್ ವಿಭಾಗಕ್ಕೆ ಹಾಗೂ ಎಸ್.ವಿ.ಕ್ಯಾಂಪ್ ಶಾಲೆಯ ಶಿಕ್ಷಕರೊಬ್ಬರನ್ನು ಈ ಶಾಲೆಗೆ ಎರವಲು ಸೇವೆ ಮೇಲೆ ನಿಯೋಜಿಸಲಾಗಿದೆ. ಉಳಿದಂತೆ ಖಾಲಿ ಇರುವ ವಿಷಯ ಶಿಕ್ಷಕರ ಸ್ಥಾನಗಳಿಗೆ ಅತಿಥಿ ಶಿಕ್ಷಕರನ್ನು ಭರ್ತಿ ಮಾಡಿಕೊಳ್ಳಲಾಗಿದೆ. ಖಾಯಂ ಶಿಕ್ಷಕರಿಲ್ಲದೇ ಶೇ.90ರಷ್ಟು ಇತರೆ ಶಿಕ್ಷಕರನ್ನು ನೇಮಿಸಿಕೊಂಡರೆ ನಮ್ಮ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಎಲ್ಲಿ ದೊರೆಯುತ್ತದೆ” ಎಂದು ವಿದ್ಯಾರ್ಥಿ ಪಾಲಕರು ಪ್ರಶ್ನಿಸುತ್ತಾರೆ.
ಫೇಲ್ ಆಗುವ ಭಯ ?
“ಕಳೆದ ಶೈಕ್ಷಣಿಕ ಸಾಲಿನಲ್ಲಿ ಈ ಶಾಲೆಯ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಗಣಿತ, ಇಂಗ್ಲಿಷ್, ವಿಜ್ಞಾನ ಹಾಗೂ ಹಿಂದಿ ಸೇರಿದಂತೆ ಇನ್ನಿತರೆ ವಿಷಯಗಳಲ್ಲಿ ಫೇಲ್ ಆಗಿದ್ದು, ಶಿಕ್ಷಕರ ಪರಿಣಾಮಕಾರಿ ಬೋಧನೆ ಕೊರತೆಗೆ ಸಾಕ್ಷಿಯಾಗಿರುತ್ತದೆ. ಇದಕ್ಕೆ ಖಾಯಂ ಶಿಕ್ಷಕರ ಕೊರತೆ, ಬೋಧನೆಯಲ್ಲಿ ನೈಪುಣ್ಯತೆ ಇಲ್ಲದ ಶಿಕ್ಷಕರ ನೇಮಕವೇ ಕಾರಣವಾಗಿದೆ” ಎಂದು ಸಂಘಟನೆಯ ಮುಖಂಡರೊಬ್ಬರು ಆರೋಪಿಸುತ್ತಾರೆ.
ಸರ್ಕಾರದ ಸುತ್ತೋಲೆ ನಿರ್ಲಕ್ಷ್ಯ ?
2025-26ನೇ ಸಾಲಿನ ಎಸ್.ಎಸ್.ಎಲ್.ಸಿ.ವಾರ್ಷಿಕ ಪರೀಕ್ಷೆಯ ಫಲಿತಾಂಶ ವೃದ್ಧಿಗಾಗಿ ಅನುಸರಿಸಬೇಕಾದ ಕ್ರಮಗಳ ಕುರಿತು ಕರ್ನಾಟಕ ಸರ್ಕಾರ 01-07-2025 ರಂದು ಸುತ್ತೋಲೆ (ಇಪಿ215ಎಸ್‌ಎಲ್‌ಬಿ2025) ಯನ್ನು ಹೊರಡಿಸಿದೆ. ಆದರೆ ಶಾಲೆಯಲ್ಲಿ ಸುತ್ತೋಲೆಗೆ ತದ್ವಿರುದ್ಧ ಎನ್ನುವಂತೆ ಬೋಧನೆ ಕಾರ್ಯ ನಡೆಯುತ್ತಿದ್ದು, ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಪುನಃ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಕಳಪೆ ಸಾಧನೆ ಮಾಡುವ ಸಾಧ್ಯತೆ ಇದೆ ಎಂಬುದು ಸಂಘಟಕರ ಆರೋಪವಾಗಿದೆ.
ಬಹುಜನ ದಲಿತ ಸಂಘ ಸಮಿತಿ (ಭೀಮವಾದ) ಮನವಿ
ಗ್ರಾಮದ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಖಾಯಂ ಶಿಕ್ಷಕರ ಕೊರತೆ ಹಿನ್ನೆಲೆಯಲ್ಲಿ ಬಹುಜನ ದಲಿತ ಸಂಘರ್ಷ ಸಮಿತಿ (ಭೀಮವಾದ) ರಾಜ್ಯ ಕಾರ್ಯದರ್ಶಿ ಈರೇಶ ಅವರು ಇತ್ತೀಚೆಗೆ ಬಿಇಒ ಬಸವಲಿಂಗಪ್ಪ ಅವರಿಗೆ ಮನವಿ ಸಲ್ಲಿಸಿ, ಇಲ್ಲಿನ ವಿದ್ಯಾರ್ಥಿಗಳ ಅನುಪಾತಕ್ಕೆ ತಕ್ಕಂತೆ ಖಾಯಂ ಶಿಕ್ಷಕರನ್ನು ನೇಮಿಸುವುದು ಸೇರಿದಂತೆ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಒದಗಿಸಲು ಹಲವು ಬೇಡಿಕೆಗಳುಳ್ಳ ಮನವಿಪತ್ರವನ್ನು ಸಲ್ಲಿಸಿ ಒತ್ತಾಯಿಸಿದ್ದಾರೆ.

Namma Sindhanuru Click For Breaking & Local News

Spread the love

Leave a Reply

Your email address will not be published. Required fields are marked *