ಲೋಕಲ್ ನ್ಯೂಸ್: ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಜುಲೈ 12
ಹುಬ್ಬಳ್ಳಿ–ಬೆಂಗಳೂರು ಎಕ್ಸ್‌ಪ್ರೆಸ್ ರೈಲು (ಸಂಖ್ಯೆ 17391/17392) ಸೇವೆಯನ್ನು ಸಿಂಧನೂರಿನ ವರೆಗೆ ವಿಸ್ತರಿಸಲಾಗಿದ್ದು, ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಶನಿವಾರ ಹಸಿರು ನಿಶಾನೆ ತೋರುವ ಮೂಲಕ ನೂತನ ರೈಲು ಸಂಚಾರಕ್ಕೆ ವಿಧ್ಯುಕ್ತವಾಗಿ ಚಾಲನೆ ನೀಡಿದರು. ಸಂಸದ ರಾಜಶೇಖರ ಹಿಟ್ನಾಳ್, ಶಾಸಕರಾದ ಹಂಪನಗೌಡ ಬಾದರ್ಲಿ, ಶಿವರಾಜ್ ಪಾಟೀಲ್, ಮಾನಪ್ಪ ವಜ್ಜಲ್, ವಿಧಾನ ಷರಿಷತ್ ಸದಸ್ಯರಾದ ಬಸನಗೌಡ ಬಾದರ್ಲಿ, ಶರಣಗೌಡ ಪಾಟೀಲ್ ಬಯ್ಯಾಪುರ ಕೇಂದ್ರ ಸಚಿವರಿಗೆ ಸಾಥ್ ನೀಡಿದರು. ಈ ಸಂದರ್ಭದಲ್ಲಿ ಮಾಜಿ ಸಚಿವ ವೆಂಕಟರಾವ್ ನಾಡಗೌಡ, ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ, ಬಿಜೆಪಿ ಜಿಲ್ಲಾಧ್ಯಕ್ಷ ವೀರನಗೌಡ ಲೆಕ್ಕಿಹಾಳ, ಮುಖಂಡರಾದ ಡಾ.ಬಸವರಾಜ ಕ್ಯಾವಟರ್, ಕೆ.ಕರಿಯಪ್ಪ, ಬಸವರಾಜ ನಾಡಗೌಡ, ಚಂದ್ರಭೂಪಾಲ ನಾಡಗೌಡ, ಚಂದ್ರಶೇಖರ ಮೈಲಾರ, ಭೂಸ್ವಾಧೀನಾಧಿಕಾರಿ ಶೃತಿ ಸೇರಿದಂತೆ ಇನ್ನಿತರರು ಇದ್ದರು.

ಹೊಸ ರೈಲ್ವೆ ವೇಳಾಪಟ್ಟಿ
ಹೊಸ ರೈಲು (ಸಂಖ್ಯೆ 17392) ಪ್ರತಿ ದಿನ ಮಧ್ಯಾಹ್ನ 1.30 ಗಂಟೆಗೆ ಸಿಂಧನೂರಿನಿಂದ ಹೊರಡಲಿದೆ. ನಂತರ ಗದಗ, ಅಣ್ಣಿಗೇರಿ, ಶಿಶ್ವಿನಹಳ್ಳಿ ಮೂಲಕ ಸಂಜೆ 6.00 ಗಂಟೆಗೆ ಹುಬ್ಬಳ್ಳಿಗೆ ಆಗಮಿಸುತ್ತದೆ. ಅಲ್ಲಿಂದ 6.45 ಗಂಟೆಗೆ ಹೊರಟು, ರಾತ್ರಿ 2.55ಕ್ಕೆ ಬೆಂಗಳೂರಿಗೆ ತಲುಪಲಿದೆ. ಪ್ರತಿ ದಿನ ಬೆಂಗಳೂರಿನಿಂದ ರಾತ್ರಿ 12.15ಕ್ಕೆ ಹೊರಡುವ ರೈಲು (ಸಂಖ್ಯೆ 17391) ಬೆಳಗ್ಗೆ 9.00ಕ್ಕೆ ಹುಬ್ಬಳ್ಳಿಗೆ ತಲುಪುತ್ತದೆ. ಮದ್ಯಾಹ್ನ 2.30 ಕ್ಕೆ ಸಿಂಧನೂರಿನ ನಿಲ್ದಾಣವನ್ನು ತಲುಪಲಿದೆ.