ಸಿಂಧನೂರು: ನಗರಸಭೆಯಲ್ಲಿ ಅಧ್ಯಕ್ಷ ಸ್ಥಾನದ ಬಿಕ್ಕಟ್ಟು !, ಹಂಗಾಮಿ ಅಧ್ಯಕ್ಷ ಸ್ಥಾನದ ಅವಧಿಯೆಷ್ಟು ? ಸಾರ್ವಜನಿಕ ವಲಯದಲ್ಲಿ ಚರ್ಚೆ !

Spread the love

ಸ್ಪೆಷಲ್‌ ಸ್ಟೋರಿ : ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಜುಲೈ 5
ಸಿಂಧನೂರು ನಗರಸಭೆ ಅಧ್ಯಕ್ಷ ಸ್ಥಾನಕ್ಕೆ ಪ್ರಿಯಾಂಕ ನಾಯಕ ಅವರು ರಾಜೀನಾಮೆ ಸಲ್ಲಿಸಿದ ನಂತರ ಅಧ್ಯಕ್ಷ ಸ್ಥಾನದ ಬಿಕ್ಕಟ್ಟು ಏರ್ಪಟ್ಟು, ಹಂಗಾಮಿ ಅಧ್ಯಕ್ಷರ ನೇಮಕವಾಗಿದೆ. ಆದರೆ ಹಂಗಾಮಿ ಅಧ್ಯಕ್ಷ ಸ್ಥಾನದ ಅವಧಿಯೆಷ್ಟು ? ಎಸ್ಟಿಗೆ ಮೀಸಲಾದ ಅಧ್ಯಕ್ಷ ಸ್ಥಾನ ಖಾಲಿಯಾದ ನಂತರ ಪುನಃ ಹೊಸ ಅಧ್ಯಕ್ಷರ, ಇಲ್ಲವೇ ಹಂಗಾಮಿ ಅಧ್ಯಕ್ಷರ ನೇಮಕ ಹೇಗೆ ? ಅದಕ್ಕೆ ಅನುಸರಿಸಬೇಕಾದ ನಿಯಮಗಳೇನು ? ಅವಧಿಯೆಷ್ಟು ? ಹೀಗೆ ಹತ್ತಾರು ಪ್ರಶ್ನೆಗಳ ಜಿಜ್ಞಾಸೆಗಳು ರಾಜಕೀಯ ವಲಯದಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿವೆ.
ಮಲ್ಲಿಕಾರ್ಜುನ ಪಾಟೀಲ್ ಅವರ ನಗರಸಭೆ ಅಧ್ಯಕ್ಷ ಸ್ಥಾನದ ಅವಧಿ ಮುಗಿದ ನಂತರ, ಎಸ್ಟಿ ಮಹಿಳಾ ಅಭ್ಯರ್ಥಿಗೆ ಅಧ್ಯಕ್ಷ ಸ್ಥಾನ ಮೀಸಲಾಗಿತ್ತು. ನಗರಸಭೆಯಲ್ಲಿ ಬಹುಮತ ಹೊಂದಿರುವ ಕಾಂಗ್ರೆಸ್‌ನಲ್ಲಿ ಯಾರೊಬ್ಬರು ಅಭ್ಯರ್ಥಿಗಳು ಇಲ್ಲದ ಕಾರಣ ಜೆಡಿಎಸ್‌ನಿಂದ ಆಯ್ಕೆಯಾಗಿದ್ದ ಪ್ರಿಯಾಂಕ ನಾಯಕ ಅವರಿಗೆ ಅಧ್ಯಕ್ಷ ಸ್ಥಾನ ಒಲಿದು ಬಂದಿತ್ತು. ತದನಂತರ ಮೀಸಲಾತಿ ಕುರಿತಂತೆ ಕಾಂಗ್ರೆಸ್ ನಾಯಕರೊಬ್ಬರು ಕೋರ್ಟ್ ಮೊರೆ ಹೋಗಿದ್ದರು. ಕೊನೆಗೆ ಕೋರ್ಟ್ ಎಸ್ಟಿ ಅಭ್ಯರ್ಥಿಯ ವಾದವನ್ನು ಮಾನ್ಯ ಮಾಡಿತ್ತು. ಇದರಿಂದ ಪ್ರಿಯಾಂಕ ನಾಯಕ ಅವರು ಫೆ.13ರಂದು ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದರು. ಆದರೆ ಅಧ್ಯಕ್ಷರಾಗಿ ಆಯ್ಕೆಯಾಗಿ 2 ತಿಂಗಳು ಕಾರ್ಯನಿರ್ವಹಿಸಿದ್ದ ಅವರು ಸರ್ಕಾರಿ ನೌಕರಿ ಗಿಟ್ಟಿಸಿಕೊಂಡ ಹಿನ್ನೆಲೆಯಲ್ಲಿ ತಮ್ಮ ಸ್ಥಾನಕ್ಕೆ ಏಪ್ರಿಲ್ 18ರಂದು ರಾಜೀನಾಮೆ ಸಲ್ಲಿಸಿದ್ದರು. ಹಾಗಾಗಿ ಹಂಗಾಮಿ ಅಧ್ಯಕ್ಷರ ನೇಮಕವಾಗಿತ್ತು.
ಪತ್ರ ಹುಟ್ಟುಹಾಕಿದ ಹಲವು ಪ್ರಶ್ನೆಗಳು ?
ಈ ಹಿಂದಿನ ಅಧ್ಯಕ್ಷರು ರಾಜೀನಾಮೆ ನೀಡಿದ ನಂತರ ಹಂಗಾಮಿ ಅಧ್ಯಕ್ಷರನ್ನು ನೇಮಿಸಲು ಇರುವ ಸರ್ಕಾರದ ಆದೇಶ, ಸುತ್ತೋಲೆ ಅಥವಾ ಜಿಲ್ಲಾಧಿಕಾರಿಗಳು ಮಾಡಿದ ಆದೇಶದ ಪ್ರತಿಗಳನ್ನು ನೀಡುವಂತೆ ಸಾಮಾಜಿಕ ಕಾರ್ಯಕರ್ತರೊಬ್ಬರು ನಗರಸಭೆ ಪೌರಾಯುಕ್ತರನ್ನು ಮಾಹಿತಿ ಕೋರಿ 13-06-2025ರಂದು ಹನುಮಂತ ಕಲಶೆಟ್ಟಿ ಎಂಬುವರರು ಕಳೆದ ತಿಂಗಳು ಅರ್ಜಿ ಸಲ್ಲಿಸಿದ್ದು, ಇದಕ್ಕೆ ನಗರಸಭೆಯಿಂದ ತಾವು ಕೋರಿದಂತೆ ಸರ್ಕಾರದ ಆದೇಶ, ಸುತ್ತೋಲೆ ಅಥವಾ ಜಿಲ್ಲಾಧಿಕಾರಿಗಳು ಮಾಡಿದ ಆದೇಶದ ಪ್ರತಿಗಳಾಗಲಿ ಕಚೇರಿಯಲ್ಲಿ ಲಭ್ಯವಿರುವುದಿಲ್ಲ ಎಂಬ ಮಾಹಿತಿಯ ಹಿಂಬರಹ ನೀಡಿದ್ದು, ಹಲವು ಚರ್ಚೆಗಳಿಗೆ ಕಾರಣವಾಗಿದೆ.
ಹೊಸ ಅಧ್ಯಕ್ಷರ ಆಯ್ಕೆ ಬಿಕ್ಕಟ್ಟು ?
ಎಸ್ಟಿಗೆ ಮೀಸಲಾದ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗಿದ್ದ ಅಧ್ಯಕ್ಷರು ರಾಜೀನಾಮೆ ನೀಡಿದ ನಂತರ, ಕರ್ನಾಟಕ ಮುನಿಸಿಪಲ್ ಆಕ್ಟ್ 1964ರ ವಿಧಿ 42 ಮತ್ತು 44ರ ಪ್ರಕಾರ ಹಂಗಾಮಿ ಅಧ್ಯಕ್ಷರ ನೇಮಕವಾಗಿದ್ದು, ಆದರೆ ಎಸ್ಟಿಗೆ ಮೀಸಲಾದ ಸ್ಥಾನಕ್ಕೆ ಹೊಸ ಅಧ್ಯಕ್ಷರ ನೇಮಕಕ್ಕೆ ಅನುಸರಿಸಬೇಕಾದ ನಿಯಮಗಳೇನು ? ಹಂಗಾಮಿ ಅಧ್ಯಕ್ಷರ ಅವಧಿಯೆಷ್ಟು ? ಈ ಕುರಿತಂತೆ ಸರ್ಕಾರದ ಆದೇಶವೇನು ? ಸರ್ಕಾರದ ಯಾವ ಕಾಯ್ದೆಯ, ಯಾವ ಸುತ್ತೋಲೆಯ ಆಧಾರದ ಮೇಲೆ ಉಳಿದಿರುವ ಅವಧಿಗೆ ಯಾರು ಕಾರ್ಯನಿರ್ವಹಿಸಬೇಕು ? ಆಡಳಿತ ನಿರ್ವಹಣೆ ಹೇಗೆ ? ಹೀಗೆ ಗೊಂದಲ ಹಾಗೂ ಹತ್ತಾರು ಪ್ರಶ್ನೆಗಳು ಚರ್ಚೆಗೀಡಾಗಿವೆ.
ನಗರಸಭೆಯ ಆಡಳಿತ ತೂಗುಯ್ಯಾಲೆ..!
ಕಳೆದ ಹಲವು ದಿನಗಳಿಂದ ನಗರಸಭೆಯ ಆಡಳಿತ ತೂಗುಯ್ಯಾಲೆಯಲ್ಲಿ ನಡೆಯುತ್ತಿರುವುದು ಸ್ಥಳೀಯ ಆಡಳಿತ ಮತ್ತಷ್ಟು ಲಯ ತಪ್ಪಿದೆ ಎಂದು ಹೇಳಲಾಗುತ್ತಿದೆ. ಹಲವು ಗೊಂದಲಗಳಿಂದಾಗಿ ನಗರಸಭೆ ಅಧ್ಯಕ್ಷ ಸ್ಥಾನಕ್ಕೆ ಅವಧಿಪೂರ್ಣ ಖಾಯಂ ಅಧ್ಯಕ್ಷರಿಲ್ಲದ ಕಾರಣ, ನಿಗದಿಯಂತೆ ನಡೆಯಬೇಕಾದ ಸಭೆಗಳು, ಅಭಿವೃದ್ಧಿ ಕೆಲಸಗಳ ಬಗ್ಗೆ ನಿಷ್ಕಾಳಜಿ ಮುಂದುವರಿದಿದೆ. ಇದರಿಂದ ವಾರ್ಡ್‌ಗಳಲ್ಲಿನ ಹಲವು ಕೆಲಸ ಕಾರ್ಯಗಳು ನನೆಗುದಿ ಬಿದ್ದಿವೆ. ಇನ್ನೂ ಕೌನ್ಸಲರ್‌ಗಳ ಬೇಜವಾಬ್ದಾರಿಯೂ ಹೆಚ್ಚಿದೆ ಎಂಬ ಅಭಿಪ್ರಾಯ ಸಾರ್ವಜನಿಕರಿಂದ ಕೇಳಿಬಂದಿದೆ.
ಮುನಿಸು
ನಗರಸಭೆಗೆ ಸಂಬಂಧಿಸದವರಿಂದ ಒತ್ತಡ, ವಿನಾಃಕಾರಣ ಮೂಗುತೂರಿಸುವಿಕೆ ನಡೆಯುತ್ತಿದ್ದು, ಇದರಿಂದ ಸಿಬ್ಬಂದಿಗಳಲ್ಲಿ ಅಸಮಾಧಾನ ಹೆಚ್ಚಿದೆ ಎಂಬ ಬಗ್ಗೆ ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿದೆ. ಈ ಹಿಂದಿನ ಅಧ್ಯಕ್ಷರು ದಿಢೀರ್ ರಾಜೀನಾಮೆ ನೀಡಿ, ಹಂಗಾಮಿ ಸ್ಥಾನಕ್ಕೆ ಆಯ್ಕೆ ನಡೆದ ನಂತರ ಬೇಗುದಿ ಹೆಚ್ಚಿದೆ ಎಂಬ ಬಗ್ಗೆ ಅಧಿಕಾರಿಗಳು ಹಾಗೂ ರಾಜಕೀಯ ವಲಯದಲ್ಲಿ ಮಾತುಗಳು ಕೇಳಿಬರುತ್ತಿವೆ.
—————————— * * * * * * * * ————————————
ಕೋಟ್‌
ನಗರಸಭೆಯ ಅಧ್ಯಕ್ಷರು ರಾಜೀನಾಮೆ ನೀಡಿದ ನಂತರ ಹಂಗಾಮಿ ಅಧ್ಯಕ್ಷರನ್ನು ನೇಮಿಸಲು ಇರುವ ಸರ್ಕಾರದ ಸರ್ಕಾರದ ಆದೇಶ, ಸುತ್ತೋಲೆ, ಅಥವಾ ಜಿಲ್ಲಾಧಿಕಾರಿಗಳ ಮಾಡಿದ ಆದೇಶ ಪ್ರತಿಗಳನ್ನು ನೀಡಲು 13-06-2025ರಂದು ನಾನು ಪೌರಾಯುಕ್ತರಿಗೆ ಅರ್ಜಿ ಸಲ್ಲಿಸಿರುತ್ತೇನೆ. ಮಾನ್ಯ ಪೌರಾಯುಕ್ತರು ನನಗೆ 23-06-2025ರಂದು ನೀಡಿದ ಹಿಂಬರಹದಲ್ಲಿ ಸ್ಪಷ್ಟ ಮಾಹಿತಿ ನೀಡಿರುವುದಿಲ್ಲ. ಎಲ್ಲವೂ ಗೊಂದಲದಿಂದ ಕೂಡಿರುತ್ತದೆ.
ಹನುಮಂತ ಕಲಶೆಟ್ಟಿ, ಸಾಮಾಜಿಕ ಕಾರ್ಯಕರ್ತರು


Spread the love

Leave a Reply

Your email address will not be published. Required fields are marked *