ಲೋಕಲ್ ನ್ಯೂಸ್: ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಜುಲೈ 03
ಬಸ್ ನಿಲ್ದಾಣದ ಸ್ವಚ್ಛತಾ ಕಾರ್ಮಿಕರಿಗೆ (ಸಫಾಯಿ) ಬಾಕಿ ವೇತನ ಪಾವತಿಸದಿರುವುದು, ಸುರಕ್ಷತಾ ಸಾಧನಗಳನ್ನು ನೀಡದೇ ಅಸುರಕ್ಷತಾ ಪ್ರದೇಶದ ತ್ಯಾಜ್ಯ ವಿಲೇವಾರಿ ಸೇರಿ ಇನ್ನಿತರೆ ಕೆಲಸ ಕಾರ್ಯಗಳಿಗೆ ಗುತ್ತಿಗೆದಾರರು ಹಾಗೂ ನಿಗಮದ ಅಧಿಕಾರಿಗಳು ಬಲವಂತಪಡಿಸುತ್ತಿದ್ದಾರೆಂಬ ಕಾರ್ಮಿಕ ಸಂಘಟನೆಯ ಆರೋಪದ ಹಿನ್ನೆಲೆಯಲ್ಲಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ರಾಯಚೂರು ವಿಭಾಗೀಯ ನಿಯಂತ್ರಣಾಧಿಕಾರಿ ಎಂ.ಎಸ್.ಚಂದ್ರಶೇಖರ ನಗರದ ಬಸ್ ನಿಲ್ದಾಣಕ್ಕೆ ಗುರುವಾರ ದಿಢೀರ್ ಭೇಟಿ ನೀಡಿದರು.
ಬಸ್ ನಿಲ್ದಾಣದ ಆವರಣ, ಸಾರಿಗೆ ಸಂಸ್ಥೆ ಬಸ್‌ಗಳು ನಿಲ್ಲುವ ಫ್ಲಾಟ್ ಫಾರ್ಮ್, ಕುಡಿಯುವ ನೀರಿನ ವ್ಯವಸ್ಥೆ ಗಮನಿಸಿದ ಅವರು ಕೆಲ ಸಾರ್ವಜನಿಕರೊಂದಿಗೆ ಮಾತನಾಡಿದರು. ಅಲ್ಲದೇ ಕನ್ನಡ ಪರ ಸಂಘಟನೆಗಳ ಮುಖಂಡರೊಂದಿಗೆ ಚರ್ಚಿಸಿದರು.
ಸಮಾಜ ಕಲ್ಯಾಣ ಇಲಾಖೆ, ಆಯೋಗ, ಎಂ.ಡಿ.ಗೆ ಎಐಸಿಸಿಟಿಯು ದೂರು
“ಸಿಂಧನೂರು ಬಸ್ ನಿಲ್ದಾಣದಲ್ಲಿ ಸ್ವಚ್ಛತಾ ಕೆಲಸ ಮಾಡುತ್ತಿರುವ ಮಹಿಳಾ ಕಾರ್ಮಿಕರ (ಸ್ವಚ್ಛತೆ / ಸಫಾಯಿ ಕರ್ಮಾಚಾರಿಗಳು) ಮೇಲಾಗುತ್ತಿರುವ ಅನಗತ್ಯ ತೊಂದರೆ ಮತ್ತು ಕಿರುಕುಳವನ್ನು ತಪ್ಪಿಸಬೇಕು ಹಾಗೂ ಕೆಲಸದ ಒತ್ತಡ ನೀಗಿಸಲು ಪ್ರಯಾಣಿಕರ ಸಂಖ್ಯೆಗೆ ಅನುಗುಣವಾಗಿ ಕಾರ್ಮಿಕರ ಸಂಖ್ಯೆಯನ್ನು ಹೆಚ್ಚಿಸಬೇಕು, ಕ.ಕ.ರ.ಸಾ.ನಿಗಮದ ಟೆಂಡರ್‌ನ ನಿಯಮಾವಳಿಗಳಂತೆ 20 ಜನ ಕಾರ್ಮಿಕರನ್ನು ನೇಮಿಸಿಕೊಂಡು ಬಸ್ ನಿಲ್ದಾಣದ ಸ್ವಚ್ಛತೆ ನಿರ್ವಹಣೆ ಮಾಡಬೇಕು. ನಿಯಮ ಉಲ್ಲಂಘಿಸಿದ ಕ.ಕ.ರ.ಸಾ.ನಿಗಮದ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ವಿರುದ್ಧ ಕ್ರಮ ಜರುಗಿಸಬೇಕು, ಗುತ್ತಿಗೆದಾರನ ಟೆಂಡರ್ ರದ್ದುಗೊಳಿಸಬೇಕು ಎಂದು ಆಗ್ರಹಿಸಿ ದಿನವೂ ಸ್ವಚ್ಛತಾ ಕಾರ್ಮಿಕರು ಸಮರ್ಪಕವಾಗಿ ಕೆಲಸ ಮಾಡಿದಾಗ್ಯೂ, ಮಹಿಳಾ ಕಾರ್ಮಿಕರನ್ನೇ ಹೊಣೆಗಾರರನ್ನಾಗಿ ಮಾಡಿ ಇಲ್ಲ-ಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಆರೋಪಿಸಿ, ಕೂಡಲೇ ಕ್ರಮಕ್ಕೆ ಒತ್ತಾಯಿಸಿ” ಎಐಸಿಸಿಟಿಯು ಕಾರ್ಮಿಕ ಸಂಘಟನೆ, ಸಮಾಜ ಕಲ್ಯಾಣ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು, ಕರ್ನಾಟಕ ಸಫಾಯಿ ಕರ್ನಾಟಕ ಕರ್ಮಚಾರಿಗಳ ಆಯೋಗ ಬೆಂಗಳೂರು, ಕ.ಕ.ರ.ಸಾ.ನಿಗಮ ಕಲಬುರಗಿಯ ವ್ಯವಸ್ಥಾಪಕ ನಿರ್ದೇಶಕರಿಗೆ ದೂರು ಸಲ್ಲಿಸಿದೆ ಎಂದು ತಿಳಿದುಬಂದಿದೆ.

“ಗುತ್ತಿಗೆದಾರ, ಅಧಿಕಾರಿಗಳ ಮೇಲೆ ಕಾರ್ಮಿಕ ಸಂಘಟನೆ ಗಂಭೀರ ಆರೋಪ”
“ಸಿಂಧನೂರು ನಗರ ರಾಯಚೂರು ಜಿಲ್ಲೆಯಲ್ಲೇ ಪ್ರಮುಖ ವಾಣಿಜ್ಯ ಕೇಂದ್ರವಾಗಿದ್ದು, ಬಳ್ಳಾರಿ, ರಾಯಚೂರು, ಹೊಸಪೇಟೆ ಹಾಗೂ ಕೊಪ್ಪಳ ನಗರಗಳಿಗೆ ಜಂಕ್ಷನ್‌ನಂತಿದೆ. ದಿನವೂ ಕಲಬುರಗಿ ಮಾರ್ಗದಲ್ಲಿ ಸಾವಿರಾರು ಪ್ರಯಾಣಿಕರು ನಗರದ ನಿಲ್ದಾಣವನ್ನು ಬಳಸಿಕೊಂಡು ಉದ್ದೇಶಿತ ಸ್ಥಳಗಳಿಗೆ ಪ್ರಯಾಣಿಸುತ್ತಾರೆ. ಈ ನಿಲ್ದಾಣದಲ್ಲಿ ಹಿಂದಿಗಿಂತಲೂ ಪ್ರಸ್ತುತ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರು ಸೇರುತ್ತಾರೆ. ಗ್ಯಾರಂಟಿ ಯೋಜನೆಯಾದ ಸ್ತ್ರೀಶಕ್ತಿ ಯೋಜನೆಯಿಂದ ಮಹಿಳಾ ಪ್ರಯಾಣಿಕರ ಸಂಖ್ಯೆ ಹೆಚ್ಚಿದೆ. ಇದರಿಂದ ಕಾರ್ಮಿಕರ ಮೇಲೆ ಕೆಲಸದ ಒತ್ತಡ ಮಿತಿಮೀರಿದೆ. ಕಳೆದ ಫೆಬ್ರವರಿಯಿಂದ ಹೊಸ ಗುತ್ತಿಗೆದಾರರು ಟೆಂಡರ್ ಹಿಡಿದಿದ್ದು, 4 ತಿಂಗಳಿನಿಂದ ವೇತನವನ್ನು ಪಾವತಿಸದೇ ಬಾಕಿ ಉಳಿಸಿಕೊಂಡಿದ್ದಾರೆ. ನ್ಯಾಯಯುತವಾಗಿ ವೇತನ ಕೇಳಿದ್ದಕ್ಕೆ ಕೆಲಸದಿಂದ ತೆಗೆದುಹಾಕುವುದಾಗಿ ಕಾರ್ಮಿಕರಿಗೆ ಹೆದರಿಕೆ ಹಾಕಿದ್ದಾರೆ. ಇದನ್ನು ಆಕ್ಷೇಪಿಸಿ ನ್ಯಾಯಕ್ಕಾಗಿ ಗುತ್ತಿಗೆದಾರರ ವಿರುದ್ಧ ಕಾರ್ಮಿಕ ಇಲಾಖೆ ರಾಯಚೂರು, ಕಾರ್ಮಿಕ ಇಲಾಖೆ ಕಲಬುರಗಿ ವಿಭಾಗ ಹಾಗೂ ಸಫಾಯಿ ಕರ್ಮಚಾರಿ ಆಯೋಗ ಬೆಂಗಳೂರು ಇವರಿಗೆ ದೂರು ಸಲ್ಲಿಸಿದ್ದು, ಕಾರ್ಮಿಕ ಇಲಾಖೆ, ಸಫಾಯಿ ಕರ್ಮಚಾರಿ ಆಯೋಗ ಕಾರ್ಮಿಕರ ದೂರನ್ನು ಪುರಸ್ಕರಿಸಿ, ವಿಚಾರಣೆ ನಡೆಸಿ ಪ್ರತಿದಿನವೂ 8 ಗಂಟೆಗಳಂತೆ ಟೆಂಡರ್‌ನ ನಿಯಮಾವಳಿ ಹಾಗೂ ಕನಿಷ್ಠ ವೇತನ, ಇಎಸ್‌ಐ, ಪಿಎಫ್ ಸೌಲಭ್ಯಗಳೊಂದಿಗೆ ಮುಂದುರಿಸುವಂತೆ ಗುತ್ತಿಗೆದಾರರಿಗೆ ಕಟ್ಟುನಿಟ್ಟಾಗಿ ನಿರ್ದೇಶನ ನೀಡಿರುತ್ತದೆ. ಆದರೂ ಇಲ್ಲಿಯವರೆಗೂ ಆ ಸೌಲಭ್ಯಗಳನ್ನು ನೀಡಿಲ್ಲ” ಎಂದು ಸವಿಸ್ತಾರವಾಗಿ ಸಲ್ಲಿಸಿದ ದೂರಿನಲ್ಲಿ ವಿವರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕ.ಕ.ರ.ಸಾ.ನಿಗಮದ ಜಿಲ್ಲಾ ವಿಭಾಗೀಯ ಅಧಿಕಾರಿಯವರು ಭೇಟಿ ನೀಡಿದ್ದಾರೆಂದು ಹೇಳಲಾಗುತ್ತಿದೆ.