ಸಿಂಧನೂರು: ಜುಲೈ 9ರ ಕಾರ್ಮಿಕ ಮುಷ್ಕರ ಯಶಸ್ವಿಗೊಳಿಸಲು ಟಿಯುಸಿಐ ಕರೆ

Spread the love

ಲೋಕಲ್ ನ್ಯೂಸ್: ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಜುಲೈ 03

ಕಾರ್ಮಿಕ ವರ್ಗದ ಶ್ರಮಶಕ್ತಿಯನ್ನು ದೋಚುತ್ತಿರುವ ಸಾಮ್ರಾಜ್ಯಶಾಹಿ ನವ ಉದಾರವಾದಿ ಆರ್ಥಿಕ ನೀತಿಗಳನ್ನು ಕಿತ್ತೊಗೆಯಲು ಹಾಗೂ 4 ಕಾರ್ಮಿಕ ಕೋಡ್‌ಗಳ ವಾಪಸ್‌ಗೆ ಆಗ್ರಹಿಸಿ ಎಡ ಪಕ್ಷಗಳು ಜುಲೈ 9ರಂದು ದೇಶಾದ್ಯಂತ ಮುಷ್ಕರಕ್ಕೆ ಕರೆ ನೀಡಿದ್ದು, ಈ ಮುಷ್ಕರವನ್ನು ಒಕ್ಕೊರಲಿನಿಂದ ಎಲ್ಲ ಕಾರ್ಮಿಕರು ಬೆಂಬಲಿಸಿ ಯಶಸ್ವಿಗೊಳಿಸಬೇಕು ಎಂದು ಟಿಯುಸಿಐ ರಾಜ್ಯಾಧ್ಯಕ್ಷ ಎಂ.ಡಿ.ಅಮೀರ್ ಅಲಿ ಮನವಿ ಮಾಡಿದರು.
ನಗರ ಪತ್ರಿಕಾ ಭವನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ಕಾರ್ಮಿಕರ ಶ್ರಮಶಕ್ತಿಯಿಂದ ಕಟ್ಟಲ್ಪಟ್ಟಿರುವ ಸರ್ಕಾರಿ ಸಂಸ್ಥೆಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಖಾಸಗೀಕರಣಗೊಳಿಸುತ್ತಿವೆ. ಇದಕ್ಕೆ ಬೇಕಾದ ಕಾನೂನುಗಳ ಜಾರಿಗೆ ಕೇಂದ್ರದ ಬಿಜೆಪಿ ನೇತೃತ್ವದ ಮೋದಿ ಸರ್ಕಾರ ಹೊರಟಿದೆ. ದೇಶದ ದುಡಿಯುವ ವರ್ಗ ಹಾಗೂ ಧಮನಿತ ಜನತೆಯನ್ನು ಅವರ ಬದುಕಿನ ಉದ್ಯೋಗ, ವೇತನ, ಜಮೀನು, ಕೃಷಿ ಉತ್ಪನ್ನ ದರ, ವಿದ್ಯೆ, ಆರೋಗ್ಯ ಸುರಕ್ಷೆ ಮುಂತಾದ ಮೂಲಭೂತ ಹಾಗೂ ಜ್ವಲಂತ ಸಮಸ್ಯೆಗಳನ್ನು ಮರೆಮಾಚಲು, ಹಿಂದೂ-ಮುಸ್ಲಿಂ ಸಮುದಾಯಗಳ ಹೆಸರಿನಲ್ಲಿ ದ್ವೇಷದ ಬೆಂಕಿಬಿರುಗಾಳಿ ಹಬ್ಬಿಸಲಾಗಿದೆ. ಆ ಮೂಲಕ ಪ್ರಜಾಪ್ರಭುತ್ವದ ಎಲ್ಲಾ ಹಕ್ಕುಗಳನ್ನು ಸದೆಬಡಿಯಲಾಗುತ್ತಿದೆ. ಇದು ಕಾರ್ಪೊರೇಟ್ ಬಂಡವಾಳಶಾಹಿ ಪ್ರೇರಿತ ಆರ್‌ಎಸ್‌ಎಸ್ ಫ್ಯಾಸಿಸ್ಟ್ ಆಳ್ವಿಕೆ ಆಗಿದೆ. ಇದನ್ನು ಹಿಮ್ಮೆಟ್ಟಿಸುವ ಅತಿ ದೊಡ್ಡ ಜವಾಬ್ದಾರಿ ಭಾರತ ದೇಶದ ಎಲ್ಲ ಕಾರ್ಮಿಕ ವರ್ಗದ ಮೇಲಿದೆ ಎಂದು ಹೇಳಿದರು.

Namma Sindhanuru Click For Breaking & Local News

ಮುಷ್ಕರಕ್ಕೆ ಸರ್ವರೂ ಸಜ್ಜಾಗಿ : ಎಂ.ಗಂಗಾಧರ
ಉಪಾಧ್ಯಕ್ಷ ಎಂ.ಗಂಗಾಧರ ಮಾತನಾಡಿ, “ಪ್ರತಿಯೊಂದು ಕಾರ್ಖಾನೆ, ಕಚೇರಿ, ಅಂಗಡಿ ಮುಂಗಟ್ಟು, ರಸ್ತೆ ರೈಲ್ವೆ, ನೀರು ಸರಬರಾಜು, ವಿದ್ಯುತ್ ಸರಬರಾಜು, ಪೌರಸೇವೆ, ವಸತಿ ಶಾಲೆ ಹಾಗೂ ವಸತಿ ನಿಲಯ, ಗಣಿಗಾರಿಕೆ, ಟೀ ಕಾಫಿ ರಬ್ಬರ್ ಪ್ಲಾಂಟೇಶನ್, ಹೊಲಗದ್ದೆ ತೋಟ, ಉದ್ಯೋಗ ಖಾತ್ರಿ, ಆಶಾ, ಅಂಗನವಾಡಿ ಸಮುದಾಯ ಆರೋಗ್ಯ ಸೇವೆ, ಲೋಡ್ ಅನ್‌ಲೋಡಿಂಗ್, ಮನೆಗೆಲಸ, ಗಿಗ್, ಹೌಸ್ ಕೀಪಿಂಗ್ ಹೀಗೆ ದೇಶದ ಎಲ್ಲಾ ಕ್ಷೇತ್ರದ ಎಲ್ಲಾ ಕಾರ್ಮಿಕರು ನೌಕರರು ಒಗ್ಗೂಡಿ ಕೆಲಸ ನಿಲ್ಲಿಸಿ ಮುಷ್ಕರಕ್ಕೆ ಇಳಿಯಬೇಕೆಂದು ಟ್ರೇಡ್ ಯೂನಿಯನ್ ಸೆಂಟರ್ ಆಫ್ ಇಂಡಿಯಾ ಕರ್ನಾಟಕ ರಾಜ್ಯ ಸಮಿತಿ ಮನವಿ ಮಾಡುತ್ತದೆ” ಎಂದು ಅವರು ಹೇಳಿದರು.
“ಆಯಾ ಕಾರ್ಮಿಕ ಸಂಘಗಳು ಬಾವುಟ, ಕೈಪಿಡಿ, ಬ್ಯಾನರ್ ಮುಂತಾದ ಪರಿಕರಗಳನ್ನು ಮುಂಚಿತವಾಗಿ ಜೋಡಿಸಿಕೊಂಡು, ವ್ಯಾಪಕವಾದ ಪ್ರಚಾರ ಕಾರ್ಯ ನಡೆಸಿಕೊಂಡು ಮುಷ್ಕರಕ್ಕೆ ಇಳಿಯಬೇಕು. ಇದು ಒಂದು ಸಂಘದ ಮುಷ್ಕರವಲ್ಲ. ದೇಶದಲ್ಲಿ ಕಾರ್ಮಿಕ ವರ್ಗದ ಪರವಾಗಿ ಕೆಲಸ ಮಾಡುತ್ತಿರುವ ಎಲ್ಲಾ ಕೇಂದ್ರ ಕಾರ್ಮಿಕ ಸಂಘಟನೆಗಳ, ಒಕ್ಕೂಟಗಳ, ನೌಕರರ ಸಂಘಗಳ ಜಂಟಿ ಕರೆಯಾಗಿದೆ. ಈ ಹಿಂದೆ ದೆಹಲಿಯಲ್ಲಿ ಹೋರಾಟ ನಡೆಸಿದ್ದ ರೈತರು ತಮ್ಮ ವಿರೋಚಿತವಾದ ಹೋರಾಟದ ಮೂಲಕ ಮೂರು ರೈತ ವಿರೋಧಿ ಕರಾಳ ಕಾನೂನುಗಳನ್ನು ರದ್ದುಪಡಿಸುವಲ್ಲಿ, ಮೋದಿ ಸರ್ಕಾರವನ್ನು ಮಣಿಸುವಲ್ಲಿ ಯಶಸ್ವಿಯಾಗಿದ್ದಾರೆ. ರೈತಾಪಿ ಜನರಿಂದ ಕಾರ್ಮಿಕರು ಕಲಿಯಬೇಕಾದ ಪರಿಪಾಠ ಇದು” ಎಂದು ಎಂ.ಗಂಗಾಧರ ಹೇಳಿದರು. ಈ ಸಂದರ್ಭದಲ್ಲಿ ಸಂಘಟನೆಯ ಮುಖಂಡರು ಉಪಸ್ಥಿತಿದ್ದರು.


Spread the love

Leave a Reply

Your email address will not be published. Required fields are marked *