ಲೋಕಲ್ ನ್ಯೂಸ್: ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಜೂನ್ 27
ಬೆಂಗಳೂರಿನಲ್ಲಿ ಟಿಬಿ ಡ್ಯಾಂ ಐಸಿಸಿ (ನೀರಾವರಿ ಸಲಹಾ ಸಮಿತಿ) ಸಭೆ ಜೂನ್ 27ರಂದು ನಡೆಯಲಿದ್ದು, ಈ ಸಭೆಯಲ್ಲಿ ತುಂಗಭದ್ರಾ ಎಡದಂಡೆ ಮತ್ತು ಬಲದಂಡೆ ನಾಲೆಗಳಿಗೆ ಪ್ರಸಕ್ತ ಹಂಗಾಮಿನಲ್ಲಿ ನೀರು ಹರಿಸುವುದು ಸೇರಿದಂತೆ ಹೊಸ ಕ್ರಸ್ಟ್ಗೇಟ್ಗಳ ಅಳವಡಿಕೆ ಕುರಿತಂತೆ ವಿಸ್ತೃತ ಚರ್ಚೆ ನಡೆಯಲಿದೆ ಎಂಬ ಬಗ್ಗೆ ಮಾಹಿತಿ ಲಭ್ಯವಾಗಿದೆ.
ಕಳೆದ ವರ್ಷ ಆಗಸ್ಟ್ನಲ್ಲಿ ಜಲಾಶಯದ 19ನೇ ಕ್ರಸ್ಟ್ಗೇಟ್ ನೀರಿನ ರಭಸಕ್ಕೆ ಕೊಚ್ಚಿ ಹೋದ ಪರಿಣಾಮ, ರೈತರಲ್ಲಿ ಆತಂಕ ಮನೆ ಮಾಡಿತ್ತು. ಕೊನೆಗೂ ಪ್ರಯಾಸದಿಂದ ತಂತ್ರಜ್ಞರು ಸ್ಟಾಪ್ಲಾಗ್ ಗೇಟ್ ಅಳವಡಿಸಿದ್ದರು. ಅದೃಷ್ಟವಶಾತ್ ಹಿಂಗಾರಿನಲ್ಲೂ ಅಪಾರ ಪ್ರಮಾಣದ ಮಳೆಯಾಗಿದ್ದರಿಂದ ಜಲಾಶಯ ಭರ್ತಿಯಾಗಿ ಅಚ್ಚುಕಟ್ಟು ಪ್ರದೇಶದಲ್ಲಿ ಎರಡು ಬೆಳೆಗೆ ನೀರು ಹರಿಸಲಾಗಿತ್ತು. ಆದರೆ 2025-2026ನೇ ಸಾಲಿನಲ್ಲಿ ತುಂಗಭದ್ರಾ ಜಲಾಶಯದ ಎಲ್ಲ 33 ಕ್ರಸ್ಟ್ಗೇಟ್ಗಳನ್ನು ಹೊಸದಾಗಿ ಅಳವಡಿಸಲು ಕರ್ನಾಟಕ, ಆಂಧ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳು ಸಮ್ಮತಿಸಿದ್ದು, ಕ್ರಸ್ಟ್ಗೇಟ್ ಅಳವಡಿಕೆಗೆ ಟೆಂಡರ್ ಪಡೆದಿರುವ ಗುಜರಾತ್ನ ಕಂಪನಿಯು 15 ತಿಂಗಳ ಕಾಲಾವಕಾಶ ಕೇಳಿರುವುದರಿಂದ ನೀರು ಹರಿಸುವುದಕ್ಕೆ ಸಂಬAಧಿಸಿದAತೆ ಗೊಂದಲ ಉಂಟಾಗಿದೆ ಎಂದು ತಿಳಿದುಬಂದಿದೆ.
ನೀರು ಒಂದೇ ಬೆಳೆಗಾ ? ಇಲ್ಲ ಎರಡು ಬೆಳೆಗಾ ?
ಈ ಬಾರಿ ನೀರು ಒಂದು ಬೆಳೆಗೆ ಹರಿಸಲಾಗುವುದಾ ? ಇಲ್ಲವೇ ಹೇಗಾದರೂ ಹೊಂದಾಣಿಕೆ ಮಾಡಿ ಎರಡೂ ಬೆಳೆಗೆ ನೀರು ಹರಿಸಲಾಗುತ್ತದೆಯೇ ? ಎನ್ನುವ ಹಲವು ಪ್ರಶ್ನೆಗಳು ರೈತರನ್ನು ಕಾಡುತ್ತಿದ್ದು, ಈ ಬಗ್ಗೆ ಸ್ಪಷ್ಟತೆ ಇಲ್ಲದಂತಾಗಿದೆ. ಹೀಗಾಗಿ ಜೂನ್ 27ರಂದು ನಡೆಯುವ ಐಸಿಸಿ ಮೀಟಿಂಗ್ನತ್ತ ಎಲ್ಲರ ಗಮನ ಕೇಂದ್ರೀಕೃತವಾಗಿದೆ.