ಲೋಕಲ್ ನ್ಯೂಸ್ : ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಜೂನ್ 26
ಕರವೇನಲ್ಲಿ ‘ಕಾಂಚಾಣ’ದ ಸದ್ದಿನ ಗುಲ್ಲೆದ್ದು, ಕೆಲ ಬಣಗಳು ಒತ್ತಟ್ಟಿಗೆ ಸೇರಿ ಬುಧವಾರ ಗುಪ್ತ್..ಗುಪ್ತ್..! ಚರ್ಚೆ ನಡೆಸಿರುವುದು ಮೂಲಗಳಿಂದ ತಿಳಿದುಬಂದಿದೆ. ಇತ್ತೀಚಿಗೆ ನಡೆದ ಘಟನೆಯೊಂದರ ಬಗ್ಗೆ ಕರವೇನ ಮುಖ್ಯಸ್ಥರೊಬ್ಬರ ಮೇಲೆ ಗಂಭೀರ ಆರೋಪ ಕೇಳಿಬಂದಿದ್ದು, ಈ ವಿಷಯವನ್ನಿಟ್ಟುಕೊಂಡು ಕರವೇನ ಕೆಲ ಬಣಗಳ ಪದಾಧಿಕಾರಿಗಳು, ‘ಆ ಸಂಘಟನೆಯ ಮುಖ್ಯಸ್ಥರಿಗೆ ವಾರ್ನಿಂಗ್ ಮಾಡಲು’ ಕುಂತು ಬೈಠಕ್ ನಡಿಸಿದ್ದಾರೆಂದು ಹೇಳಲಾಗುತ್ತಿದೆ.
ಈ ಪ್ರಕರಣದಲ್ಲಿ ಸಂಘಟನೆ ಮುಖ್ಯಸ್ಥರ ಹೆಸರಲ್ಲದೇ ‘ಇನ್ನಿತರೆ ವಲಯದ ಹೆಸರುಗಳು ತಳಕು’ ಹಾಕಿಕೊಂಡಿರುವುದೂ ಕೇಳಿಬಂದಿದ್ದು, ಈ ಕುರಿತು ಸಂಘಟನೆಗಳ ಸಭೆಯಲ್ಲಿ ವ್ಯಾಪಕ ಚರ್ಚೆಯಾಗಿದೆ ಎಂದು ತಿಳಿದುಬಂದಿದೆ. ಕನ್ನಡ ನಾಡು, ನುಡಿ, ಜಲ-ಗಡಿ ಇನ್ನಿತರೆ ಸಮಸ್ಯೆಗಳ ಕುರಿತು ವಿಸ್ತೃತ ಸಭೆ ನಡೆಸಿ, ಆ ಬಗ್ಗೆ ಚರ್ಚೆ ನಡೆಸಬೇಕಾದ ಸಂದರ್ಭದಲ್ಲಿ ಕ್ಷುಲ್ಲಕ ವಿಷಯಗಳಿಗೆ ಸಭೆ ಕರೆಯಬೇಕಾಗಿ ಬಂದಿರುವುದು ವಿಷಾದದ ಸಂಗತಿಯಾಗಿದೆ. ಈ ರೀತಿಯಾದರೆ ಕನ್ನಡಪರ ಸಂಘಟನೆಗಳ ಬಗ್ಗೆ ಜನರಿಗೆ ಹೇಗೆ ಅಭಿಮಾನ ಮೂಡುತ್ತದೆ ? ಎಂದು ಕೆಲ ಸಂಘಟನೆಗಳ ಮುಖಂಡರು ಸಭೆಯಲ್ಲಿ ಕಾರ್ಯಕರ್ತರ ಮುಂದೆ ಅಸಮಾಧಾನ ವ್ಯಕ್ತಪಡಿಸಿದರು ಹೇಳಲಾಗಿದೆ. ಕೊನೆಯಲ್ಲಿ ಆ ಸಂಘಟನೆಯ ಮುಖಸ್ಥರಿಗೆ ಮತ್ತೊಂದು ಬಾರಿ ಇಂತಹ ಘಟನೆ ಮರುಕಳಿಸದಂತೆ ಮತ್ತು ಇಂತಹ ಸಭೆ ಕರೆಯಲು ಆಸ್ಪದ ಕೊಡದಂತೆ ಸಂಘಟನೆಯ ಪದಾಧಿಕಾರಿಗಳು ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.
