ನಮ್ಮ ಸಿಂಧನೂರು, ಫೆಬ್ರವರಿ 02
ಕೊಲೆಗೆ ಪ್ರಯತ್ನ ಮಾಡಿದ 11 ಆರೋಪಿಗಳಿಗೆ 3 ವರ್ಷ ಕಾರಾಗೃಹ ಶಿಕ್ಷೆ ಹಾಗೂ ತಲಾ 5,800 ರೂಪಾಯಿ ದಂಡ ವಿಧಿಸಿ ಮಾನ್ಯ ನ್ಯಾಯಾಧೀಶರಾದ ಬಿ.ಬಿ.ಜಕಾತಿ 3ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ರಾಯಚೂರು, ಪೀಠಾಸೀನ ಸಿಂಧನೂರು ಇವರು ಫೆ.1, 2024ರಂದು ತೀರ್ಪು ನೀಡಿದ್ದಾರೆ.
ಪ್ರಕರಣದಲ್ಲಿ ಆರೋಪಿತ ಉಪ್ಪಳೇಪ್ಪ ಮತ್ತು ಆತನ ಜೊತೆಯಲ್ಲಿದ್ದ ಇನ್ನೂ 10 ಜನರು ಸೇರಿಕೊಂಡು ನೀರು ಬಿಟ್ಟುಕೊಳ್ಳುವ ವಿಷಯವಾಗಿ ಫಿರ್ಯಾದಿ ದುರುಗಪ್ಪ ಮತ್ತು ಆತನ ಹೆಂಡತಿ ಹನುಮಂತಮ್ಮ ಇವರೊಂದಿಗೆ ಜಗಳ ತೆಗೆದು, ಅವಾಚ್ಯ ಶಬ್ದಗಳಿಂದ ಬೈದು ಕೊಡಲಿ ಮತ್ತು ಕಟ್ಟಿಗೆಗಳಿಂದ ಕೊಲೆ ಮಾಡುವ ಉದ್ದೇಶದಿಂದ ಮಾರಣಾಂತಿಕವಾಗಿ ಹಲ್ಲೆ ಮಾಡಿ ಅವರ ಕೊಲೆ ಮಾಡಲು ಪ್ರಯತ್ನಿಸಿದ್ದರಿಂದ ಆರೋಪಿಗಳ ವಿರುದ್ಧ ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ 2016ರಲ್ಲಿ ಪ್ರಕರಣ ದಾಖಲಾಗಿತ್ತು. ಆನಂತರ ಆರೋಪಿತರ ವಿರುದ್ಧ ಅಂದಿನ ತನಿಖಾಧಿಕಾರಿ ನಾಗರಾಜ ಮೇಕಾ ಪಿಎಸ್ಐ ಅವರು ತನಿಖೆ ಕೈಗೊಂಡು ಮಾನ್ಯ ನ್ಯಾಯಾಲಯಕ್ಕೆ ದೋಷರೋಪಣ ಪತ್ರ ಸಲ್ಲಿಸಿದ್ದರು.
ನಂತರ ಪ್ರಕರಣದ ವಾದ, ವಿವಾದಗಳನ್ನು ಆಲಿಸಿದ ಮಾನ್ಯ ನ್ಯಾಯಾಧೀಶರಾದ ಬಿ.ಬಿ.ಜಕಾತಿ 3ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ರಾಯಚೂರು, ಪೀಠಾಸೀನ ಸಿಂಧನೂರು ಇವರು ಸಾಕ್ಷ್ಯಾಧಾರಗಳನ್ನು ಪರಾಮರ್ಶಿಸಿ, ಆರೋಪಿತರು ಭಾರತೀಯ ದಂಡ ಸಂಹಿತೆ ಸೆಕ್ಷನ್ 143, 147, 148, 323, 324, 447, 307 ಮತ್ತು 149ರ ಅಡಿ ಅಪರಾಧವೆಸಗಿದ್ದಾರೆಂದು ಪರಿಗಣಿಸಿ ಪ್ರಕರಣದ ಎಲ್ಲಾ ಆರೋಪಿತರಿಗೆ 3 ವರ್ಷ ಕಾರಾಗೃಹ ಶಿಕ್ಷೆ ಹಾಗೂ ತಲಾ 5,800 ರೂಪಾಯಿ ದಂಡ ವಿಧಿಸಿ ತೀರ್ಪು ನೀಡಿರುತ್ತಾರೆ. ಈ ಪ್ರಕರಣದಲ್ಲಿ ಸರಕಾರದ ಪರವಾಗಿ ಆರ್.ಎ.ಗಡಕರಿ ಸರಕಾರಿ ಅಭಿಯೋಜಕರು ವಾದ ಮಂಡಿಸಿದ್ದರು.