ಲೋಕಲ್ ನ್ಯೂಸ್: ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಜೂನ್ 23
ನಗರದ ತಾಲೂಕು ಸಾರ್ವಜನಿಕ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ.ನಾಗರಾಜ್ ಕಾಟ್ವಾ ಅವರ ವರ್ಗಾವಣೆ ಆದೇಶವನ್ನು ಹಿಂಪಡೆದು ನಾಗರಿಕರಿಗೆ ಗುಣಮಟ್ಟದ ಚಿಕಿತ್ಸೆ ಒದಗಿಸಲು ಮುಂದಾಗಬೇಕು, ಇಲ್ಲದೇ ಹೋದರೆ ಸಾರ್ವಜನಿಕರೊಂದಿಗೆ ಸೇರಿ ನಮ್ಮ ಸಂಘಟನೆಗಳಿAದ ಹೋರಾಟ ನಡೆಸುವುದಾಗಿ ಟಿಯುಸಿಐ ಹಾಗೂ ಕೆಆರ್‌ಎಸ್ ಸಂಘಟನೆಯ ಪದಾಧಿಕಾರಿಗಳು ಎಚ್ಚರಿಸಿದ್ದಾರೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಅವರಿಗೆ, ಟ್ರೇಡ್ ಯೂನಿಯನ್ ಸೆಂಟರ್ ಆಫ್ ಇಂಡಿಯಾ ಜಿಲ್ಲಾ ಸಮಿತಿ ಹಾಗೂ ಕರ್ನಾಟಕ ರೈತ ಸಂಘ ತಾಲೂಕು ಸಮಿತಿಯಿಂದ ತಹಸೀಲ್ದಾರ್ ಮೂಲಕ ಸೋಮವಾರ ಮನವಿಪತ್ರ ರವಾನಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಟಿಯುಸಿಐ ಜಿಲ್ಲಾಧ್ಯಕ್ಷ ಬಿ.ಎನ್.ಯರದಿಹಾಳ, “ಡಾ.ನಾಗರಾಜ್ ಕಾಟ್ವಾ ಅವರು ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಗಿಗಳಿಗೆ ಗುಣಮಟ್ಟದ ಚಿಕಿತ್ಸೆ ಒದಗಿಸುವಲ್ಲಿ ಶಕ್ತಿಮೀರಿ ಪ್ರಯತ್ನಿಸಿದ್ದಾರೆ. ಹೆರಿಗೆಗೆ ಬಂದ ಬಡ ಮತ್ತು ಮಧ್ಯಮ ವರ್ಗದ ಕುಟುಂಬದ ಮಹಿಳೆಯರಿಗೆ ಕಾಳಜಿಯಿಂದ ಹೆರಿಗೆ ಮಾಡಿಸಿ, ಜನಸ್ನೇಹಿ ವೈದ್ಯರಾಗಿ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಪಿಡಬ್ಲುö್ಯಡಿ ಕ್ಯಾಂಪಿನಲ್ಲಿ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಉದ್ಘಾಟನೆಗೆ ಮುಂಚೆಯೇ ಇವರನ್ನು ಬೇರೆಡೆಗೆ ವರ್ಗಾವಣೆ ಮಾಡಿರುವುದರ ಹಿಂದೆ ಒಳಮರ್ಮ ಅಡಗಿದೆ. ಬಡ ರೋಗಿಗಳ ಕಷ್ಟಕ್ಕೆ ಮಿಡಿಯುವ ಗುಣ ಹೊಂದಿರುವ ಇವರನ್ನು ಕೆಲ ಪಟ್ಟಭದ್ರಹಿತಾಸಕ್ತಿಗಳು ದುರುದ್ದೇಶದಿಂದ ಬೇರೆಡೆ ವರ್ಗಾವಣೆ ಮಾಡಿರುವುದು ಸಾರ್ವಜನಿಕರಿಗೆ ಈಗಾಗಲೇ ಅರ್ಥವಾಗಿದ್ದು, ಜನರ ಆರೋಗ್ಯದ ಹಿತದೃಷ್ಟಿಯಿಂದ ವರ್ಗಾವಣೆ ಆದೇಶವನ್ನು ಸರ್ಕಾರ ಹಿಂಪಡೆಯಬೇಕು” ಎಂದು ಆಗ್ರಹಿಸಿದರು.
ಕರ್ನಾಟಕ ರೈತ ಸಂಘದ ತಾಲೂಕು ಘಟಕದ ಅಧ್ಯಕ್ಷ ರಮೇಶ ಪಾಟೀಲ್ ಬೇರಿಗಿ ಮಾತನಾಡಿ, “ಡಾ.ನಾಗರಾಜ ಕಾಟ್ವಾ ಅವರು ಸರ್ಕಾರಿ ಆಸ್ಪತ್ರೆಗೆ ಬಂದ ನಂತರ 24,456 ಹೆರಿಗೆ ಮಾಡಿಸಿದ್ದು, 11,193 ಶಸ್ತ್ರಚಿಕಿತ್ಸೆ ಕೈಗೊಂಡಿದ್ದಾರೆ. ಅಲ್ಲದೇ ಅತ್ಯಂತ ಕಠಿಣ ಶಸ್ತ್ರಚಿಕಿತ್ಸೆಗಳನ್ನು ಕೈಗೊಂಡು ಬಡ ಮಹಿಳೆಯರ ಪ್ರಾಣ ಉಳಿಸಿದ್ದಾರೆ. ಇಂತಹ ವೈದ್ಯರನ್ನು ಬೇರೆಡೆ ವರ್ಗಾವಣೆ ಮಾಡಿರುವುದು ಸರಿಯಾದ ಕ್ರಮವಲ್ಲ. ಇವರನ್ನು ವರ್ಗಾವಣೆ ಮಾಡಿದರೆ ತಾಲೂಕಿನ ರೋಗಿಗಳಿಗೆ ಬಹಳಷ್ಟು ತೊಂದರೆಯಾಗಲಿದ್ದು, ಹಾಗಾಗಿ ವರ್ಗಾವಣೆ ಆದೇಶವನ್ನು ಸಚಿವರು ಕೂಡಲೇ ರದ್ದುಗೊಳಿಸಿ, ಅವರನ್ನು ಸಿಂಧನೂರು ತಾಲೂಕು ಆಸ್ಪತ್ರೆಯಲ್ಲಿಯೇ ಸೇವೆ ಸಲ್ಲಿಸಲು ಮುಂದುವರಿಸಬೇಕು” ಎಂದು ಸರ್ಕಾರವನ್ನು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಕೆಆರ್‌ಎಸ್ ಜಿಲ್ಲಾ ಕಾರ್ಯದರ್ಶಿ ಚಿಟ್ಟಿಬಾಬು ಬೂದಿವಾಳಕ್ಯಾಂಪ್, ಅಸ್ಲಂ, ಮಲ್ಲಪ್ಪ ಹಾದಿಮನಿ, ಬಸವರಾಜ ಕೋಟೆ, ದುರುಗಪ್ಪ ದೇವರಮನಿ, ಸಂಗಯ್ಯಸ್ವಾಮಿ, ರಾಮಣ್ಣ ಸುಕಾಲಪೇಟೆ, ಬಾಷಾಸಾಬ್, ದುರುಗೇಶ, ಶಿವು, ಮುತ್ತಣ್ಣ, ಅಮರೇಶಪ್ಪ ಹೂಗಾರ, ಪಾಮಯ್ಯ ಸೇರಿದಂತೆ ಇನ್ನಿತರರು ಇದ್ದರು.