ಲೋಕಲ್ ನ್ಯೂಸ್: ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಮೇ 01
ನಗರದ ಎಪಿಎಂಸಿ ಗಂಜ್ನ ಎಐಟಿಯುಸಿ ಕಚೇರಿಯಲ್ಲಿ ಗುರುವಾರ ವಿಶ್ವ ಕಾರ್ಮಿಕ ದಿನವನ್ನು ಆಚರಿಸಲಾಯಿತು. ಹಮಾಲರ ಸಂಘದ ಹಿರಿಯ ಮುಖಂಡರಾದ ವೆಂಕನಗೌಡ ಗದ್ರಟಗಿ ಅವರು ಪಕ್ಷದ ಧ್ವಜಾರೋಹಣ ನೆರವೇರಿಸಿದರು.
ಕಾರ್ಮಿಕರ ದಿನಾಚರಣೆ ಉದ್ದೇಶಿಸಿ ಸಿಪಿಐ ಜಿಲ್ಲಾ ಕಾರ್ಯದರ್ಶಿ ಚಂದ್ರಶೇಖರ ಕ್ಯಾತ್ನಟ್ಟಿ ಮಾತನಾಡಿ, ಅಮೆರಿಕಾದ ಚಿಕಾಗೋದಲ್ಲಿ 8 ಗಂಟೆಗಳ ಕೆಲಸಕ್ಕಾಗಿ ಮಾಲೀಕರ ವಿರುದ್ಧ ದುಡಿಯುವ ಜನರು ಹೋರಾಟ ನಡೆಸಿ ತ್ಯಾಗ-ಬಲಿದಾನ ಮಾಡಿದ ಸಂಕೇತವಾಗಿ ಇಂದು ನಾವು ಕಾರ್ಮಿಕರ ದಿನವನ್ನು ಆಚರಿಸುತ್ತಿದ್ದೇವೆ. ದೇಶದಲ್ಲಿ ಇಂದು ಕಾರ್ಮಿಕ ವರ್ಗ ನಿರಂತರ ಶೋಷಣೆಗೊಳಗಾಗುತ್ತಿದೆ. ಕೇಂದ್ರದ ಬಿಜೆಪಿ ಸರ್ಕಾರ ಕಾರ್ಮಿಕ ಕಾಯ್ದೆಗಳಿಗೆ ತಿದ್ದುಪಡಿಗಳನ್ನು ತಂದು 4 ಕೋಡ್ಗಳನ್ನಾಗಿ ಮಾಡಿ ಸಂವಿಧಾನಬದ್ಧ ಹಲವು ಹಕ್ಕುಗಳನ್ನು ಕಿತ್ತುಕೊಂಡಿದೆ. ಇಂತಹ ಸರ್ಕಾರಗಳನ್ನು ಕಿತ್ತೊಗೆಯಲು ಕಾರ್ಮಿಕರು ರಾಜಕೀಯ ಪ್ರಬುದ್ಧತೆಯನ್ನು ಬೆಳೆಸಿಕೊಳ್ಳಬೇಕು, ಮಾರ್ಕ್ಸ್, ಹೆಗೆಲ್, ಲೆನಿನ್ ಅವರ ವಿಚಾರಧಾರೆಗಳೊಂದಿಗೆ ರಾಜ್ಯಾಧಿಕಾರವನ್ನು ಹಿಡಿದು ಕಾರ್ಮಿಕರ ಅಧಿಪತ್ಯ ಸಾಧಿಸಬೇಕು ಎಂದು ಕರೆ ನೀಡಿದರು.
ಹಮಾಲರ ಸಂಘದ ಮುಖಂಡ ವೆಂಕನಗೌಡ ಗದ್ರಟಗಿ, ಸಿಪಿಐ ಮುಖಂಡ ಬಾಷುಮಿಯಾ, ಡಿ.ಎಚ್.ಕಂಬಳಿ ಮಾತನಾಡಿದರು. ಈ ಸಂದರ್ಭದಲ್ಲಿ ದುಡಿಯುವ ಮಹಿಳೆಯರ ಸಂಘದ ಶಾಂತಾ ನಾಗನಗೌಡ, ಈರಮ್ಮ, ಬಿಬನಿ, ಅಂಗನವಾಡಿ ಫೆಡರೇಷನ್ನ ಶಾಂತಾ ಗೊರೇಬಾಳ, ಸಾವಿತ್ರಿ ಎಲೆಕೂಡ್ಲಿಗಿ, ನಾಗಲಕ್ಷ್ಮಿ, ಹಮಾಲರ ಸಂಘದ ಹನುಮಂತಪ್ಪ ಹಂಚಿನಾಳ, ಅಮರೇಶ ನಾಯಕ, ಗಂಗಪ್ಪ, ಮುಕ್ತಂಸಾಬ್ ಸೇರಿದಂತೆ ಕಾರ್ಮಿಕರು ಇದ್ದರು.
