ಲೋಕಲ್ ನ್ಯೂಸ್: ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಮಾರ್ಚ್ 31
ಬೇಸಿಗೆಯಲ್ಲಿ ಕುಡಿಯುವ ನೀರಿನ ಅಭಾವ ತಗ್ಗಿಸಲು ಹಾಗೂ ನಿಂತ ಬೆಳೆಗಳಿಗೆ ನೀರೊದಗಿಸುವ ಉದ್ದೇಶದಿಂದ ತುಂಗಭದ್ರಾ ಕಾಲುವೆಗಳಿಗೆ ಭದ್ರಾ ಜಲಾಶಯದಿಂದ 2 ಟಿ.ಎಂ.ಸಿ.ನೀರು ಹರಿಸಲು ಸಿಎಂ ಸಿದ್ದರಾಮಯ್ಯ ಅವರು ಗ್ರೀನ್ ಸಿಗ್ನಲ್ ನೀಡಿದ್ದಾರೆ. ಏಪ್ರಿಲ್ 1ರಿಂದ 5ರವರೆಗೆ ನೀರು ಹರಿಸಲು ತೀರ್ಮಾನಿಸಲಾಗಿದ್ದು, ಇದರಿಂದ ಕೊಪ್ಪಳ, ರಾಯಚೂರು, ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳ ರೈತರು ಹಾಗೂ ಜನಸಾಮಾನ್ಯರಿಗೆ ಅನುಕೂಲವಾಗಲಿದೆ.
ತುಂಗಭದ್ರಾ ಜಲಾಶಯದಲ್ಲಿ ಸದ್ಯ ನೀರಿನ ಪ್ರಮಾಣವೆಷ್ಟು ?
ಜಲಾಶಯದಲ್ಲಿ ದಿನಾಂಕ: 31-03-2025 ಸೋಮವಾರದಂದು 11.97 ಟಿಎಂಸಿ ನೀರು ಸಂಗ್ರಹವಿದ್ದರೆ, -0.44 ಕ್ಯೂಸೆಕ್ ಒಳಹರಿವಿದೆ. 10,768 ಕ್ಯೂಸೆಕ್ ನೀರನ್ನು ಹರಿಬಿಡಲಾಗುತ್ತಿದೆ. ಕಳೆದ ವರ್ಷ ಇದೇ ದಿನ ಜಲಾಶಯದಲ್ಲಿ 4.81 ಟಿಎಂಸಿ ನೀರು ಸಂಗ್ರಹವಿದ್ದರೆ, 0 ಕ್ಯೂಸೆಕ್ ನೀರು ಒಳಹರಿವಿತ್ತು.

ಫಲ ನೀಡಿದ ನಿಯೋಗದ ಭೇಟಿ
ರಾಯಚೂರು, ಕೊಪ್ಪಳ, ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳಲ್ಲಿ ಬೇಸಿಗೆಯಲ್ಲಿ ಕುಡಿವ ನೀರಿನ ಅಭಾವ ಎದುರಾಗುವ ಹಿನ್ನೆಲೆಯಲ್ಲಿ ಹಾಗೂ ಎರಡನೆ ಹಂಗಾಮಿನಲ್ಲಿ ನಿಂತ ಬೆಳೆಗಳಿಗೆ ಉಂಟಾಗಿರುವ ನೀರಿನ ಕೊರತೆಯ ಕುರಿತು ಸಿಎಂ ಸಿದ್ದರಾಮಯ್ಯ ಅವರ ಬಳಿ ಕಲ್ಯಾಣ ಕರ್ನಾಟಕ ಭಾಗದ ನಾಲ್ಕು ಜಿಲ್ಲೆಗಳ ಚುನಾಯಿತ ಜನಪ್ರತಿನಿಧಿಗಳು ನಿಯೋಗ ತೆರಳಿ ಮನವರಿಕೆ ಮಾಡಿದ್ದರು. ಇದರಲ್ಲಿ ಶಾಸಕ ಹಂಪಗೌಡ ಬಾದರ್ಲಿ ಸೇರಿದಂತೆ ಇನ್ನಿತರರಿದ್ದರು. ನಿಯೋಗದ ಮನವಿಯ ಮೇರೆಗೆ ಸಿಎಂ ಅವರು ಭದ್ರಾದಿಂದ 2 ಟಿಎಂ ನೀರು ಹರಿಸಲು ಸೂಚಿಸಿದ್ದು, ಭೇಟಿ ಫಲಪ್ರದವಾಗಿದೆ.